ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಐಎಸ್​ಐಗೆ ಮಾಹಿತಿ ನೀಡಿ ಸಿಕ್ಕಿಬಿದ್ದ!

ನವದೆಹಲಿ: ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐಗೆ ಭದ್ರತಾ ಮಾಹಿತಿಗಳನ್ನು ರವಾನಿಸಿದ್ದರಿಂದ ಆತನನ್ನು ಬಂಧಿಸಲಾಗಿದೆ ಎಂದು ಸೇನೆ ಸ್ಪಷ್ಟನೆ ನೀಡಿದೆ.

ರಾಜಸ್ಥಾನದ ಜೈಸಲ್ಮೀರ್​ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಬೀರ್ ಬಂಧಿತ ಯೋಧ. ಬಂಧಿತ ಯೋಧನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಗುಪ್ತಚರ ಅಧಿಕಾರಿಗಳು ಈತನನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಫೇಸ್​ಬುಕ್​ನಲ್ಲಿ ಅನಿಕಾ ಛೋಪ್ರಾ ಎಂಬ ಹೆಸರಿನಲ್ಲಿದ್ದ ಐಎಸ್​ಐ ಏಜೆಂಟ್​ ಜತೆ ಸೋಂಬೀರ್ ಚಾಟ್ ​ಮಾಡಿರುವುದು ತಿಳಿದು ಬಂದಿದೆ. ಚಾಟಿಂಗ್​ ವೇಳೆ ಯೋಧ ತಾನಿದ್ದ ಯೂನಿಟ್​ನ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವುದು ಬಯಲಾಗಿದೆ. ಈ ವಿಷಯ ಭಾರತೀಯ ಸೇನಾ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಆತನನ್ನು ಬಂಧಿಸಿದ್ದಾರೆ.

ಸದ್ಯ ಭಾರತೀಯ ಸೇನೆ ಹಲವು ಫೇಸ್​ಬುಕ್​ ಖಾತೆಗಳನ್ನು ಪರಿಶೀಲಿಸುತ್ತಿದ್ದು, ಇತರ ಭಾರತೀಯ ಯೋಧರ ಜತೆ ಪಾಕಿಸ್ತಾನದ ಕಾರ್ಯಕರ್ತರು ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಭಾರತೀಯ ಸೇನೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧಗಳಿದ್ದು ಯೋಧರು ತಮ್ಮ ಗುರುತು, ಪೋಸ್ಟಿಂಗ್​ ಮತ್ತು ಇತರ ವೃತ್ತಿಪರ ವಿಚಾರಗಳನ್ನು ಹಂಚಿಕೊಳ್ಳವಂತಿಲ್ಲ. ಹಾಗೆಯೇ ಸೇನೆಯ ಸಮವಸ್ತ್ರ ಧರಿಸಿ ತೆಗೆದುಕೊಂಡ ಯಾವುದೇ ಚಿತ್ರಗಳನ್ನು ಅಪ್​ಲೋಡ್​ ಮಾಡುವಂತಿಲ್ಲ. (ಏಜೆನ್ಸೀಸ್)