ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಗೋಪಾಲಕೃಷ್ಣ ಪಾದೂರು, ಉಡುಪಿ
ಉಡುಪಿ ಜಿಲ್ಲೆಯಲ್ಲಿ ರೂಫ್‌ಟಾಪ್ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 219 ಮಂದಿ ತಮ್ಮ ಪ್ಯಾನಲ್‌ಗಳಿಂದ ಮೆಸ್ಕಾಂ ಗ್ರಿಡ್‌ಗೆ ವಿದ್ಯುತ್ ನೀಡುತ್ತಿದ್ದಾರೆ. ಬೇಸಗೆ ಕಾಲದಲ್ಲಿ ತಿಂಗಳಿಗೆ 7.58 ಮೆಗಾವ್ಯಾಟ್ ವಿದ್ಯುತ್ ಗ್ರಿಡ್‌ಗೆ ಲಭಿಸುತ್ತಿದ್ದು, ಜಿಲ್ಲೆಯ ಸುಮಾರು 100 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಒತ್ತಡವನ್ನು ಕೊಂಚ ತಗ್ಗಿಸಲಿದೆ.

ಉಡುಪಿ ವಿಭಾಗ ವ್ಯಾಪ್ತಿಯಲ್ಲಿ 2015ರಿಂದ 2019 ಮಾರ್ಚ್‌ವರೆಗೆ 151 ಮಂದಿ ಹಾಗೂ 63 ಮಂದಿ ಸೋಲಾರ್ ಅಳವಡಿಸಿಕೊಂಡಿದ್ದು, ಇದರಲ್ಲಿ ಸ್ವಂತಕ್ಕೆ ಬಳಸಿದ ವಿದ್ಯುತ್ ಕಳೆದು ಉಳಿದ ಯುನಿಟ್‌ಗೆ ಇಂತಿಷ್ಟು ದರ ನಿಗದಿ ಮಾಡಿ ಗ್ರಾಹಕರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. 2015 ರಿಂದ 2018ರವರೆಗೆ ಅಳವಡಿಸಿದ ಸೋಲಾರ್ ಪ್ಯಾನಲ್‌ಗಳಿಗೆ ಯುನಿಟ್‌ಗೆ 9.56 ರೂ. ದರ ಹಾಗೂ ನಂತರ ಪ್ಯಾನಲ್ ಅಳವಡಿಸಿಕೊಂಡವರಿಗೆ 3.56 ರೂ.ದರ ನಿಗದಿ ಮಾಡಲಾಗಿದೆ. ಪ್ಯಾನಲ್ ಸ್ಥಾಪನೆ ಖರ್ಚುವೆಚ್ಚ ಅಗ್ಗ ಆಗಿರುವುದರಿಂದ ಸರ್ಕಾರ ಯುನಿಟ್ ದರವನ್ನೂ ಕಡಿಮೆ ಮಾಡಿದೆ. 1 ಕಿಲೋ ವ್ಯಾಟ್ ಪ್ಯಾನಲ್ ಅಳವಡಿಕೆಗೆ ತಗುಲುವ ವೆಚ್ಚ 1.20 ಲಕ್ಷ ರೂ.ನಿಂದ 70 ಸಾವಿರ ರೂ.ಗೆ ಇಳಿಕೆಯಾಗಿದೆ. ಇದರಿಂದ ದಿನಕ್ಕೆ 4 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.

ಮಣಿಪಾಲದಲ್ಲಿ ಅತೀ ಹೆಚ್ಚು ಪ್ಯಾನಲ್ : ಉಡುಪಿ ವಿಭಾಗದಲ್ಲಿ ಬೇಸಗೆಯಲ್ಲಿ ತಿಂಗಳಿಗೆ ಸುಮಾರು 1,82,481 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಉಡುಪಿ ಸಬ್‌ಸ್ಟೇಶನ್ ವ್ಯಾಪ್ತಿಯಲ್ಲಿ 34, ಮಣಿಪಾಲದಲ್ಲಿ 46, ಬ್ರಹ್ಮಾವರದಲ್ಲಿ 12, ಕಾಪುವಿನಲ್ಲಿ 30, ಕಾರ್ಕಳದಲ್ಲಿ 27, ಹೆಬ್ರಿಯಲ್ಲಿ ಇಬ್ಬರು ಸೋಲಾರ್ ಪ್ಯಾನಲ್ ಅಳವಡಿಸಿಕೊಂಡಿದ್ದಾರೆ. 2015-16ರಲ್ಲಿ 4.75 ಲಕ್ಷ ರೂ., 2016-17ರಲ್ಲಿ 45.11 ಲಕ್ಷ ರೂ., 2017-18ರಲ್ಲಿ 61.47 ಲಕ್ಷ ರೂ., ಹಾಗೂ 2018-19ನೇ ಸಾಲಿನಲ್ಲಿ 65.69 ಲಕ್ಷ ರೂ. ಗ್ರಾಹಕರ ಖಾತೆಗೆ ಪಾವತಿಸಲಾಗಿದೆ.

2,628 ಕಿ.ವ್ಯಾ. ವಿದ್ಯುತ್ ಉತ್ಪಾದನೆ: ಕುಂದಾಪುರ ವಿಭಾಗದಲ್ಲಿ 4 ವರ್ಷದಲ್ಲಿ 2,628.5 ಕಿಲೋವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಕುಂದಾಪುರ ಉಪವಿಭಾಗದಲ್ಲಿ 40 ಮಂದಿ, ಕೋಟ ಉಪವಿಭಾಗದಲ್ಲಿ 15 ಮಂದಿ, ಬೈಂದೂರ್‌ನಲ್ಲಿ 2, ತಲ್ಲೂರಿನಲ್ಲಿ 2, ಶಂಕರನಾರಾಯಣದಲ್ಲಿ 4 ಮಂದಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಅತೀ ಹೆಚ್ಚು 23 ಮಂದಿ ಸೋಲಾರ್ ಹಾಕಿಸಿಕೊಂಡಿದ್ದಾರೆ. 2015-16ನೆ ಸಾಲಿನಲ್ಲಿ ಗ್ರಾಹಕರಿಂದ ಖರೀದಿಸಿದ ವಿದ್ಯುತ್‌ಗೆ ಮೆಸ್ಕಾಂ 4.54 ಲಕ್ಷ ರೂ. ಪಾವತಿಸಿದೆ. 2016-2017ರಲ್ಲಿ 17.74 ಲಕ್ಷ ರೂ., 2017-18ರಲ್ಲಿ 21.52 ಲಕ್ಷ ರೂ., 2018-19ರಲ್ಲಿ 31.79 ಲಕ್ಷ ರೂ. ಖಾತೆಗೆ ಜಮಾ ಮಾಡಲಾಗಿದೆ.

 ಉಡುಪಿ ಜಿಲ್ಲೆಯಲ್ಲಿ 248 ಮಂದಿಗೆ 7.58 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನೆಗೆ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಶೇ.90ರಷ್ಟು ಮಂದಿ ವಿದ್ಯುತ್ ಉತ್ಪಾದನೆ ಪ್ರಾರಂಭಿಸಿ ಗ್ರಿಡ್‌ಗೆ ನೀಡುತ್ತಿದ್ದಾರೆ. ಗ್ರಾಹಕರಿಂದ ಮೆಸ್ಕಾಂಗೆ 2018-19ರಲ್ಲಿ 625.39 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಯಾಗಿದೆ.
ದಿನೇಶ್ ಉಪಾಧ್ಯಾಯ ಪ್ರಭಾರ ಮೆಸ್ಕಾಂ ಅಧೀಕ್ಷಕರು

Leave a Reply

Your email address will not be published. Required fields are marked *