ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

ಅಜ್ಜಂಪುರ: ಸಮೀಪದ ಸೊಲ್ಲಾಪುರ ಗ್ರಾಮದಲ್ಲಿ ನಿರ್ವಿುಸುತ್ತಿರುವ 80 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಲ್ಯಾಂಡ್ ಆರ್ವಿು ಇಂಜಿನಿಯರ್​ಗೆ ತರಾಟೆಗೆ ತೆಗೆದುಕೊಂಡರು.

ಈ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಲ್ಯಾಂಡ್ ಆರ್ವಿು ಇಂಜಿನಿಯರ್ ಡೆಲ್ವಿ ಹೇಳಿದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ನೀವು ಜವಾಬ್ದಾರಿ ಮರೆತು ಮಾತನಾಡುತ್ತಿದ್ದೀರಿ. ಕಳಪೆ ಕಾಮಗಾರಿಯಿಂದ ಸಾವುನೋವು ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸೊಲ್ಲಾಪುರ ಗ್ರಾಮದ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ದೇವಾಲಯವಿದ್ದು ಇಲ್ಲಿಗೆ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ 2 ವರ್ಷಗಳ ಹಿಂದೆ ಯಾತ್ರಿ ನಿವಾಸ ಕಾಮಗಾರಿಗೆ ಚಾಲನೆ ನೀಡಿದ್ದು ಲ್ಯಾಂಡ್ ಆರ್ವಿು ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದೆ. 2 ವರ್ಷ ಕಳೆದರೂ ಕಾಮಗಾರಿ ಅರ್ಧದಷ್ಟು ನಡೆದಿಲ್ಲ. ಈ ಹಿಂದೆ ಕಟ್ಟಡ ಅಡಿಪಾಯ ಕಳಪೆಯಾಗಿದೆ ಎಂದು ಗ್ರಾಮಸ್ಥರು ಕಾಮಗಾರಿ ತಡೆದಿದ್ದರು ಆ ಸಂದರ್ಭದಲ್ಲಿ ಗುತ್ತಿಗೆದಾರನನ್ನು ಬದಲು ಮಾಡಿ ಮತ್ತೆ ಅದೇ ಅಡಿಪಾಯದ ಮೇಲೆ ಕಟ್ಟಡ ನಿರ್ವಣಕ್ಕೆ ಇಲಾಖೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಿರ್ವದ ಹಂತದಲ್ಲಿಯೇ ಅಡಿಪಾಯ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಗೋಡೆಗಳು ಎಲ್ಲೆಂದರಲ್ಲಿ ಕಳಚಿ ಬೀಳುತ್ತಿವೆ ಕಟ್ಟಡಕ್ಕೆ ನೀರನ್ನು ಹಾಕದೆ ಕಳಪೆಯಾಗಿದೆ. ಈ ಕಟ್ಟಡ ಕಾಮಗಾರಿ ಮುಂದುವರಿದರೆ ಮುಂದಿನ ದಿಗಳಲ್ಲಿ ಭಾರಿ ಅನಾಹುತ ಸಂಭವಿಸಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸದಿರುವುದು ಕಾಮಗಾರಿ ಕಳಪೆಗೆ ಕಾರಣವಾಗಿದೆ. ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಯಾವುದೆ ಕಾರಣಕ್ಕೂ ಕಳಪೆ ಕಾಮಗಾರಿ ನಡೆಯಲು ಬಿಡುವುದಿಲ್ಲ. ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿ ಹೊಸ ಕಟ್ಟಡ ನಿರ್ವಿುಸಬೇಕು. ಅಲ್ಲಿಯವರೆಗೂ ಕಾಮಗಾರಿಗೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು.