ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಗುರಿ ಸಾಧನೆ

<<ಮೊದಲ ಆವೃತ್ತಿಯಲ್ಲಿ ದ.ಕ. 1,71,307, ಉಡುಪಿ 2,00,485 * ದ್ವಿತೀಯ ಹಂತ ಆರಂಭ>> 

– ಭರತ್ ಶೆಟ್ಟಿಗಾರ್ ಮಂಗಳೂರು
ರೈತರ ಜಮೀನಿನ ಮಣ್ಣು ಪರೀಕ್ಷಿಸಿ ಆ ಮಣ್ಣಿನ ಫಲವತ್ತತೆ ಮತ್ತಿತರ ವಿಚಾರಗಳನ್ನೊಳಗೊಂಡ ಮಾಹಿತಿ ರೈತರಿಗೆ ನೀಡುವ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಯೋಜನೆಯ ಮೊದಲ ಆವೃತ್ತಿ ಅವಿಭಜಿತ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ನಿಗದಿತ ಗುರಿ ಸಾಧಿಸಲಾಗಿದೆ. ದ್ವಿತೀಯ ಹಂತದ ಕಾರ್ಡ್ ವಿತರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಈ ಯೋಜನೆಗೆ 2015ರಲ್ಲಿ ಚಾಲನೆ ನೀಡಲಾಗಿತ್ತು. ಯೋಜನೆ ಪ್ರಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ರೈತರ ಭೂಮಿಯ ಸರ್ವೇ ನಡೆಸಿ ಮಣ್ಣಿನಲ್ಲಿರುವ ಅಂಶಗಳ ಕುರಿತು ರೈತರಿಗೆ ಮಾಹಿತಿ ನೀಡಬೇಕು. ಅದರಿಂತೆ ಮೊದಲ ಹಂತದಲ್ಲಿ (2015-16, 16-17) ದ.ಕ ಜಿಲ್ಲೆಯಲ್ಲಿ 1,71,307, ಉಡುಪಿಯಲ್ಲಿ 2,00,485 ಕಾರ್ಡ್ ವಿತರಿಸುವ ಮೂಲಕ ನಿಗದಿತ ಗುರಿ ಈಡೇರಿಸಲಾಗಿದೆ. ದ್ವಿತೀಯ ಆವೃತ್ತಿಯಲ್ಲಿ ದಕ್ಷಿಣ ಕನ್ನಡ 1,06,961, ಉಡುಪಿಯಲ್ಲಿ 87,299 ಕಾರ್ಡ್ ವಿತರಿಸಲಾಗಿದೆ.

ಆನ್‌ಲೈನ್ ಮೂಲಕ ಸರ್ವೇ: ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆಗೆ ಗೂಗಲ್ ಮ್ಯಾಪ್, ಕಂದಾಯ ಇಲಾಖೆಯ ಭೂಮಿ ತಂತ್ರಾಶ ಮೂಲಕ ಭೂಮಿ ಗುರುತಿಸಿ ಮಾದರಿ ಸಂಗ್ರಹ ಮಾಡಲಾಗುತ್ತದೆ. ಒಣ ಭೂಮಿಯಾದರೆ 10 ಹೆಕ್ಟೇರ್, ನೀರಾವರಿ ಭೂಮಿಯಾದರೆ 2.5 ಹೆಕ್ಟೇರ್ ವ್ಯಾಪ್ತಿಯಲ್ಲಿ ಭೂಮಿ ಆಯ್ಕೆ ಮಾಡಿ ಮೂಲಕ ಮಾದರಿ ಸಂಗ್ರಹ ಮಾಡಲಾಗುತ್ತದೆ. ಅದನ್ನು ವಿಶ್ಲೇಷಣೆಗೊಳಪಡಿಸಿ ವ್ಯಾಪ್ತಿಯ ಎಲ್ಲ ರೈತರಿಗೆ ಮಣ್ಣು ಪರೀಕ್ಷೆ ಆಧಾರಿತ ಮಣ್ಣು ಪರೀಕ್ಷಾ ಚೀಟಿ ವಿತರಣೆ ಮಾಡಲಾಗುತ್ತದೆ. ಕೃಷಿ ಇಲಾಖೆ ಮೂಲಕ ನಿಗದಿಗ ಏಜೆನ್ಸಿ ಸಿಬ್ಬಂದಿ ಮಣ್ಣು ತೆಗೆದು, ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ವರದಿ ನೀಡುತ್ತಾರೆ.

ಕಾರ್ಡ್‌ನಲ್ಲಿ ಏನೇನಿದೆ?: ರೈತರ ಜಮೀನಿನಿಂದ ಸಂಗ್ರಹಿಸಲಾದ ಮಣ್ಣಿನಲ್ಲಿರುವ 12 ಅಂಶ ಗುರುತಿಸಲಾಗುತ್ತದೆ. ಪ್ರಧಾನವಾಗಿ ಸಾರಜನಕ, ರಂಜಕ, ಪೊಟ್ಯಾಷ್, ಗಂಧಕಾಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಲಘು ಪೋಷಕಾಂಶಗಳಾದ ಸತು, ತಾಮ್ರ, ಮ್ಯಾಂಗನೀಸ್, ಕಬ್ಬಿಣ ಅಂಶವನ್ನು ಗುರುತಿಸಲಾಗುತ್ತದೆ. ಕಾರ್ಡ್‌ನಲ್ಲಿ ರೈತನ ಹೆಸರು, ಭೂಮಿಯ ಸರ್ವೇ ನಂಬರ್, ವಿಸ್ತ್ರೀರ್ಣ ವಿವರ ನೀಡಿ ಮಣ್ಣಿನಲ್ಲಿರುವ ಪೋಷಕಾಂಶಗಳ ಮಾಹಿತಿ ಇದೆ. ಬೆಳೆಯಬಹುದಾದ ಬೆಳೆ ವಿವರ, ಎಷ್ಟು ರಾಸಾಯನಿಕ ಗೊಬ್ಬರದ ಅವಶ್ಯಕತೆ ಇದೆ, ಸಾವಯವ ಗೊಬ್ಬರದ ಅವಶ್ಯಕತೆ ಕುರಿತ ಮಾಹಿತಿ ಕಾರ್ಡ್‌ನಲ್ಲಿದೆ. ಜಾನುವಾರು ಗೊಬ್ಬರ, ಸಸ್ಯಜನ್ಯ ಕಸದ ಬಗ್ಗೆಯೂ ಮಾಹಿತಿ ಇದೆ. ಬಿತ್ತನೆಯ ಪೂರ್ವ ಹಾಗೂ ಬಿತ್ತನೆಯ ನಂತರ ಯಾವ ಯಾವ ಹಂತದಲ್ಲಿ ಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಬೇಕು ಎಂಬ ವಿವರಣೆ ಕಾರ್ಡ್‌ನಲ್ಲಿವೆ.

ಎರಡು ವರ್ಷಕ್ಕೊಮ್ಮೆ ಕಾರ್ಡ್: ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ನೀಡುವುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ರೈತರಿಗೆ ಕಾರ್ಡ್ ದೊರೆಯಲಿದೆ. ಭೂಮಿಯಲ್ಲಿ ಯಾವ ರೀತಿಯ ಪೋಷಕಾಂಶಗಳು ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ, ಇನ್ನು ಯಾವ ಪ್ರಮಾಣದಲ್ಲಿ ಭೂಮಿಗೆ ಒದಗಿಸಬೇಕು ಎಂದು ರೈತರಿಗೆ ನಿಯಮಿತವಾಗಿ ತಿಳಿಯಲು ಸಾಧ್ಯವಾಗುತ್ತದೆ. ರೈತರು ಇದರ ಪ್ರಯೋಜನ ಪಡೆದು, ತಮ್ಮ ಬೆಳೆಯಲ್ಲಿಯೂ ಬದಲಾವಣೆ ಮಾಡುವ ಅವಕಾಶವಿದೆ. ಅದರಂತೆ ಈಗ ಉಭಯ ಜಿಲ್ಲೆಗಳಲ್ಲಿ ಒಂದನೇ ಕಾರ್ಡು ಗುರಿ ಮುಟ್ಟಿದ್ದು, ಎರಡನೇ ಕಾರ್ಡು ವಿತರಣೆ ನಡೆಯುತ್ತಿದೆ.

ನಿಜವಾದ ಉದ್ದೇಶ ಈಡೇರಿಲ್ಲ: ಯೋಜನೆ ಒಳ್ಳೆಯದಾದರೂ ನಿಜವಾದ ಉದ್ದೇಶ ಈಡೇರಿಲ್ಲ. ರೈತರಿಗೆ ಕಾರ್ಡ್ ಸಿಕ್ಕಿದೆ, ಅದನ್ನು ಮುಂದೇನು ಮಾಡಬೇಕು ಎಂದು ಗೊತ್ತಿಲ್ಲ. ರೈತರಲ್ಲಿ ಹೆಚ್ಚಿನವರು ಅವಿದ್ಯಾವಂತರಾಗಿದ್ದು, 10ರಲ್ಲಿ ಇಬ್ಬರು ಮಾತ್ರ ಕಾರ್ಡ್ ಉಪಯೋಗ ಪಡೆದು, ಅದರಲ್ಲಿರುವ ಅಂಶಗಳನ್ನು ಗಮನಿಸಿ ಕೃಷಿ ಮಾಡುತ್ತಿದ್ದಾರೆ. ಉಳಿದವರು ಮನೆಯಲ್ಲಿ ಎತ್ತಿಟ್ಟಿದ್ದಾರೆ. ಕಾರ್ಡ್‌ನಲ್ಲಿ ವಿವರಿಸಲಾಗಿರುವ ಅಂಶಗಳ ಕುರಿತು ಮಾಹಿತಿ ನೀಡಲು ಇಲಾಖೆಯಲ್ಲಿ ಯಾರೂ ಲಭ್ಯವಿಲ್ಲ. ದೀರ್ಘಾವಧಿಯಲ್ಲಾದರೂ ನಿಜವಾದ ಉದ್ದೇಶ ಈಡೇರಬೇಕಾದರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಇಲಾಖೆಯ ಸಂಬಂಧಿತ ಅಧಿಕಾರಿಗಳು ರೈತರ ಬಳಿಗೆ ತೆರಳಿ ಕಾರ್ಡ್‌ನಲ್ಲಿ ತಿಳಿಸಿರುವಂತೆ ರೈತರ ಜಮೀನಿಗೆ ಸೂಕ್ತ ಮಾಹಿತಿ ನೀಡುವುದು ಅಗತ್ಯ ಎನ್ನುತ್ತಾರೆ ಬೆಳ್ತಂಗಡಿಯ ಭತ್ತ ಕೃಷಿಕ ಪ್ರಭಾಕರ ಮಯ್ಯ.

ಮೊದಲ ಹಂತದಲ್ಲಿ ನಿಗದಿತ ಗುರಿಯನ್ನು ತಲುಪಿ ಎಲ್ಲ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗಿದೆ. ದ್ವಿತೀಯ ಹಂತದಲ್ಲಿ ಕಾರ್ಡ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಭೂಮಿ ಸಾಫ್ಟ್‌ವೇರ್ ಪ್ರಕಾರ 10 ಸೆಂಟ್ಸ್ ಜಾಗವಿದ್ದವರೂ ರೈತರೆಂದು ನಮೂದಿಸಲ್ಪಟ್ಟಿದೆ. ಆದರೆ ಈ ಬಾರಿ 20 ಸೆಂಟ್ಸ್ ಮೇಲ್ಪಟ್ಟವರಿಗೆ ಮಾತ್ರ ಕಾರ್ಡ್ ಜನರೇಟ್ ಮಾಡಲಾಗುತ್ತದೆ.
– ಡಾ.ವೀಣಾ ಕೆ.ಆರ್, ಮಾಹಿತಿ ಅಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ದ.ಕ.