ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿಗಳ ನೋಂದಣಿಗೆ ಹೊಸ ಮಾರ್ಗಸೂಚಿ ದರ ಅ.1ರಿಂದ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆ ತಿಳಿಸಿದ್ದು, ಆಸ್ತಿ ನೋಂದಣಿಗೆ ಜನ ಮುಗಿಬೀಳುತ್ತಿದ್ದಾರೆ. ಆದರೆ ಕಾವೇರಿ 2.0 ತಂತ್ರಾಂಶ ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ.
ರಾಜ್ಯದಲ್ಲಿ ಸ್ಥಿರಾಸ್ತಿಗಳ ಹೊಸ ಮಾರ್ಗಸೂಚಿ ದರ ಅ.1ರಿಂದ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ. ನೋಂದಣಿ ಮತ್ತು ಮುದ್ರಾಂಕ ಅಂದಾಜು ಶೇ.30 ಏರಿಕೆ ಆಗಲಿದೆ. ಇದರಿಂದ ತಪ್ಪಿಸಿಕೊಳ್ಳಲು ಮನೆ, ಸೈಟು, ಭೂಮಿ, ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆ ಪೂರ್ಣ ಮಾಡಿಕೊಳ್ಳಲು ಜನರು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಮುಗಿಬೀಳುತ್ತಿದ್ದಾರೆ. ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆಯಿಂದ 10 ನಿಮಿಷದಲ್ಲಿ ರಿಜಿಸ್ಟ್ರೇಷನ್ ಮುಗಿಯಲಿದೆ ಎಂಬ ಭರವಸೆ ಹುಸಿಯಾಗಿದ್ದು, 10 ತಾಸು ಆದರೂ ದಸ್ತಾವೇಜುಗಳ ನೋಂದಣಿ ಪೂರ್ಣವಾಗುತ್ತಿಲ್ಲ. ಕಳೆದ ಒಂದು ವಾರದಿಂದ ಜನರು ಪರದಾಡುತ್ತಿದ್ದಾರೆ. ಜನರಿಗೆ ಸಮಸ್ಯೆಯಾಗದಂತೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೂ ಕೆಲಸದ ಅವಧಿಯನ್ನು ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ.
2003ರಲ್ಲಿ ಡಿಜಿಟಲ್ ಆಡಳಿತ, ಇ-ಆಫೀಸ್ ಯೋಜನೆಯಡಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಳವಡಿಸಿದ್ದ ಕಾವೇರಿ 1.0 ಸಾಫ್ಟ್ವೇರ್ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇವುಗಳನ್ನು ನಿವಾರಿಸಲು 20 ವರ್ಷಗಳ ಬಳಿಕ ಕಾವೇರಿ 2.0ಕ್ಕೆ ಅಪ್ಗ್ರೇಡ್ ಮಾಡಲಾಗಿದೆ. ಪಾಸ್ಪೋರ್ಟ್ ಮಾದರಿ ಆನ್ಲೈನ್ ಸೇವೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಸರ್ವರ್ ಸಮಸ್ಯೆ ಬಗೆಹರಿದಿಲ್ಲ. ಹೊಸ ಸಾಫ್ಟ್ವೇರ್ನಲ್ಲಿ ಲಾಗಿನ್ ಆಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಸರ್ವರ್ ಗಿರಗಿಟ್ಟಲೆ ಹೊಡೆಯುತ್ತದೆ. ಪೇಮೆಂಟ್ಗೆ, ಋಣಭಾರ ಪತ್ರ, ಸರ್ಟಿಫೈಡ್ ಪತ್ರ ಸೇರಿ ಪ್ರತಿಯೊಂದು ಸೇವೆಗೂ ಜನರು ಪರದಾಡುವಂತಾಗಿದೆ. ನಗರಸಭೆ ಆಸ್ತಿಗಳ ನೋಂದಣಿಗೆ ಸಲ್ಲಿಸಿರುವ ಅರ್ಜಿಗಳು ಓಪನ್ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಇ-ಸ್ವತ್ತು ಆಸ್ತಿಗಳ ವಿವರ ಲಭ್ಯವಾಗದೆ ರಿಜಿಸ್ಟ್ರೇಷನ್ ಪೂರ್ಣವಾಗುತ್ತಿಲ್ಲ.
ಮತ್ತೊಂದೆಡೆ ಆನ್ಲೈನ್ ಪೇಮೆಂಟ್ ಮಾಡಿದಾಗ ಜನರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿದೆ. ಖಜಾನೆ-2ಗೆ ತಲುಪಿರುವ ಮಾಹಿತಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತೋರಿಸುತ್ತಿಲ್ಲ. ಮತ್ತೆ ಶುಲ್ಕ ಪಾವತಿಸುವಂತೆ ತೋರಿಸುತ್ತಿದೆ. ಪೇಮೆಂಟ್ ಮಾಹಿತಿ ಸಬ್ ರಿಜಿಸ್ಟ್ರಾರ್ಗೆ ಲಭ್ಯವಾಗುವವರೆಗೂ ಜನರು ಕಾಯುವಂತಾಗುತ್ತಿದೆ. ಇದರಿಂದ ನೋಂದಣಿ ಸಹ ಪೂರ್ಣವಾಗುತ್ತಿಲ್ಲ. ಆಸ್ತಿ ವರ್ಗಾವಣೆ ಸಲುವಾಗಿ ನೋಂದಣಿ ಮಾಡಿದಾಗ ಡಾಕ್ಯುಮೆಂಟ್ ಸಮ್ಮರಿ ರಿಪೋರ್ಟ್ನಲ್ಲಿ ಬರೆದುಕೊಟ್ಟವರ ಮತ್ತು ಬರೆಸಿಕೊಂಡವರ ಫೋಟೋ ಮತ್ತು ಬೆರಳಚ್ಚು ಮುದ್ರಣವಾಗಿತ್ತು. ಪ್ರಮಾಣ ಪತ್ರದಲ್ಲಿ ಅದಲುಬದಲು ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಜನರು ತಿದ್ದುಪಡಿ ನೋಂದಣಿ ಪತ್ರ ಮಾಡಿಸಿಕೊಳ್ಳಲು ಹೆಚ್ಚುವರಿ ಶುಲ್ಕ ಪಾವತಿಸುವ ದುಃಸ್ಥಿತಿ ಎದುರಿಸಬೇಕಾಗಿದೆ. ಒಂದು ಸಣ್ಣ ನೋಂದಣಿ ಪ್ರಕ್ರಿಯೆ ಮುಗಿಸಲು ಒಂದರಿಂದ ಎರಡು ದಿನಗಳು ಬೇಕಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳ ಅಧಿಕಾರಿ, ಸಿಬ್ಬಂದಿ ಮೇಲೂ ಒತ್ತಡ ಹೆಚ್ಚಾಗುತ್ತಿದೆ.
- ಅಧಿಕಾರಿ, ಜನರು ಎದುರಿಸುತ್ತಿರುವ ಸಮಸ್ಯೆ
- ನೋಂದಣಿ ಬಳಿಕ ತಹಸೀಲ್ದಾರ್ಗಳಿಗೆ ಜೆ ಸ್ಲಿಪ್ ಹೋಗುತ್ತಿಲ್ಲ
- ನಕಲು ಪ್ರತಿಗೆ ದೃಢೀಕರಣ ಪತ್ರವೆಂದು ನಮೂದು ಆಗುತ್ತಿಲ್ಲ
- ಮಾರ್ಟ್ಗೇಜ್ ಪತ್ರ ನೋಂದಣಿ ವೇಳೆ ಅಡಮಾನ ಮೊತ್ತವೇ ಕಾಣೆ
- ಖರೀದಿದಾರ, ಮಾರಾಟಗಾರರ ಹೆಸರುಗಳೇ ಅದಲು-ಬದಲು
- ನಿಗದಿತ ಸಮಯಕ್ಕೆ ನೋಂದಣಿಗೆ ಅವಕಾಶ ಕೊಡದೆ ಸದಾ ತೋರಿಸುತ್ತಿದೆ
- ಏಜೆಂಟ್ಗಳ ಸಹಾಯ ಇಲ್ಲದೆ ದಾಖಲೆ ಅಪ್ಲೋಡ್ಗೆ ಕಷ್ಟಸಾಧ್ಯ
- ಇನ್ಡೆಕ್ಸ್ ತಪ್ಪಾಗಿ ನಮೂದು ಆಗುತ್ತಿದ್ದು, ಸರಿಪಡಿಸಲು ಅಸಾಧ್ಯ.
ಸರ್ವರ್ ಸಮಸ್ಯೆ: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಬಗೆಹರಿದಿಲ್ಲ. ಕಾಲಕ್ಕೆ ತಕ್ಕಂತೆ ಇಂಟರ್ನೆಟ್ ಸ್ಪೀಡ್, ಬ್ಯಾಂಡ್ವಿಡ್ತ್ಗಳನ್ನು ಬದಲಾವಣೆ ತಂದಿಲ್ಲ. ದೂರದ ಊರುಗಳಿಂದ ಬರುವ ರೈತರು ಸರ್ಟಿಫೈಡ್ ಕಾಪಿ (ಸಿಸಿ), ಕರಾರು ಪತ್ರ, ಸಾಲ ತೀರುವಳಿ, ಋಣ ಬಾದ್ಯತಾ ಪತ್ರ ಮತ್ತು ಸಾಗುವಳಿ ಜಮೀನು ಒಪ್ಪಂದ ನೋಂದಣಿ ಆಗದೆ ಬರಿಗೈಲಿ ವಾಪಸ್ ಆಗುತ್ತಿದ್ದಾರೆ.
ಬೆಳಗ್ಗೆ 8-ರಾತ್ರಿ 8 ವರೆಗೆ ಕಚೇರಿ ಓಪನ್: ಅ.1 ರಿಂದ ಹೊಸ ಮಾರ್ಗಸೂಚಿ ದರ ಜಾರಿಗೆ ಬರುವ ಹಿನ್ನೆಲೆಯಲ್ಲಿ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಿಸಿಕೊಳ್ಳಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೆಚ್ಚು ಹೆಚ್ಚು ಜನರು ಬರುತ್ತಿದ್ದಾರೆ. ಮತ್ತೊಂದೆಡೆ ಕಾವೇರಿ 2.0 ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸೇವೆಯಲ್ಲಿ ವಿಳಂಬ ಆಗುತ್ತಿದೆ. ಅದಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಸಮಯ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೂ ಕಾರ್ಯ ನಿರ್ವಹಿಸಲಿವೆ. 4ನೇ ಶನಿವಾರ ಆದರೂ ಕಚೇರಿ ತೆರೆದಿರುತ್ತದೆ. ಈ ಕೆಲಸದ ಅವಧಿ ಸೆ.30ರವರೆಗೆ ಮಾತ್ರ ಜಾರಿಯಲ್ಲಿ ಇರಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಮುಂದಿನ ಕೆಲವು ವರ್ಷಗಳಲ್ಲಿ 7.6 ಕೋಟಿ ಸಾವು ಸಾಧ್ಯತೆ!