ಮಾನ್ವಿ: ಸಮಾಜದಲ್ಲಿ ಅಶಾಂತಿ, ಕಲಹಗಳು ಅಸಹಿಷ್ಣುತೆ ಹೆಚ್ಚಾಗುತ್ತಿದ್ದು, ಸೌಹಾರ್ದ ಭಾವನೆ ಮತ್ತು ಶಾಂತಿ ಕಡಿಮೆಯಾಗುತ್ತಿದೆ ಎಂದು ಶ್ವೇತಾಂಬರ ಆಸ್ಥಾನಕವಾಸಿ ಜೈನ ಗುರು ನರೇಶ ಮುನೀಜಿ ಹೇಳಿದರು.
ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ರಾಯಚೂರಿಗೆ ಪಾದಯಾತ್ರೆ ತೆರಳುವ ಮಾರ್ಗದಲ್ಲಿ ಪಟ್ಟಣದಲ್ಲಿ ಜನರಿಗೆ ಶನಿವಾರ ಸಂದೇಶ ನೀಡಿದರು. ಜನರಲ್ಲಿ ನಂಬಿಕೆಗಳು ದೂರವಾಗುತ್ತಿದ್ದು, ಎಲ್ಲರನ್ನೂ ಪ್ರೀತಿಸುವ ಕೆಲಸವಾಗಬೇಕು ಎಂದರು. ಜೈನ ಮುನಿ ಸಾಲಿಭದ್ರ ಮುನಿಜಿ ಮಾತನಾಡಿ, ಪ್ರಾಣಿಗಳನ್ನು ಹಿಂಸೆ ಮಾಡದೆ ಪ್ರತಿಯೊಬ್ಬರೂ ಶಾಕಾಹಾರಿಗಳಾಗಬೇಕು. ವ್ಯಸನ ಮುಕ್ತರಾಗಿ ಆಹಿಂಸೆ, ಸತ್ಯ, ಧರ್ಮ, ನೀತಿ, ಬ್ರಹ್ಮಚರ್ಯ, ಪ್ರಾಮಾಣಿಕವಾದ ಸರಳ ಜೀವನವನ್ನು ನಡೆಸಿದಲ್ಲಿ ಪರಿವಾರ ಸ್ವರ್ಗದಂತಾಗಲಿದೆ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗಲಿದೆ. ಜೈನಮುನಿಗಳು ವರ್ಷದ ಎಂಟು ತಿಂಗಳು ಪಾದಚಾರಿಗಳಾಗಿ ಸಂಚಾರಿಸಿ ಉಳಿದ ನಾಲ್ಕು ತಿಂಗಳಲ್ಲಿ ಚಾತುರ್ಮಾಸ್ಯ ವ್ರತವನ್ನು ಒಂದು ನಿರ್ದಿಷ್ಟ ಪ್ರದೇಶ ಅಯ್ಕೆ ಮಾಡಿಕೊಂಡು ಆಚರಿಸುತ್ತಾರೆ. ಈ ಸಮಯದಲ್ಲಿ ಜನರಿಗೆ ಉತ್ತಮ ಸಂದೇಶ ನೀಡಲಾಗುವುದು ಎಂದು ತಿಳಿಸಿದರು.