ಸಮಾಜ ಕಟ್ಟುವ ಸ್ವಾಮಿಗಳು ಇಂದಿನ ಅಗತ್ಯ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಧರ್ಮ ಸಂಸ್ಕೃತಿ ಪಸರಿಸುವ ಉತ್ತಮ ಧಾರ್ಮಿಕ ಕೇಂದ್ರದ ಅವಶ್ಯಕತೆ ಇತ್ತು. ಹುಕ್ಕೇರಿ ಹಿರೇಮಠ ಈ ಕೊರತೆ ನೀಗಿಸಿದೆ.ಮುಂಬರುವ ದಿನಗಳಲ್ಲಿ ಹಿರೇಮಠ ಈ ಭಾಗದಲ್ಲಿ ಧರ್ಮಪೀಠದ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಲಿ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿದರು.

ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದಲ್ಲಿ ಭಾನುವಾರ ಆಯೋಜಿಸಿದ್ದ ಸುವಿಚಾರ ಚಿಂತನ ಸಮಾರಂಭ, ಶಿವದೀಕ್ಷೆ ಹಾಗೂ ಅಯ್ಯಚಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬೆಳಗಾವಿ ಭಾಗದಲ್ಲಿ ಸಮಾಜದ ಜನ ಸಾಕಷ್ಟಿದ್ದರೂ ಧರ್ಮಪೀಠಗಳ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜ ಕಟ್ಟುವ ಸ್ವಾಮಿಗಳು ನಮಗೆ ಬೇಕಾಗಿದ್ದಾರೆ. ಸಮಾಜ ಒಡೆಯುವ ಮತ್ತು ಜನರ ಮನಸ್ಸು ಕಲುಷಿತಗೊಳಿಸುವ ಸ್ವಾಮಿಗಳಲ್ಲ .ಕೆಲವರು ಧರ್ಮದ ಆಶಯಗಳನ್ನು ಕೆಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ವೀರಶೈವ ಧರ್ಮ ಉತ್ಕೃಷ್ಟ ಆದರ್ಶಗಳನ್ನು ಇಟ್ಟುಕೊಂಡಿದೆ. ಭೌತಿಕ, ವೈಚಾರಿಕವಾಗಿ ನಾವು ಸಾಕಷ್ಟು ಬೆಳೆದಿದ್ದೇವೆ. ಆದರೆ, ಧಾರ್ಮಿಕವಾಗಿ ಎಡವಿದ್ದೇವೆ ಎಂಬ ಆತಂಕ ಧರ್ಮಪೀಠವನ್ನು ಕಾಡುತ್ತಿದೆ. ಪಂಚಪೀಠಗಳು, ಸಮನ್ವಯ ಭಾವನೆ ಹೊಂದಿದ ಮಠಾಧೀಶರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅದನ್ನು ಅನುಸರಿಸಬೇಕು. ಶಾಸಕ ಮಹಾಂತೇಶ ಕೌಜಲಗಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರಲ್ಲಿ ಧರ್ಮನಿಷ್ಠೆ ಇದೆ. ಉತ್ತರ ಕರ್ನಾಟಕ ಭಾಗದ ಜನರ ನಾಡಿಮಿಡಿತ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.

ಸಮಾಜದಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಕರ್ತವ್ಯ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಜನರಲ್ಲಿ ಧರ್ಮದ ತಿಳಿವಳಿಕೆ ಮೂಡಿಸಬೇಕು. ಈಗ ಧರ್ಮ, ಜಾತಿ ಹೆಸರಲ್ಲಿ ಸಂಘರ್ಷ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರವರ ಧರ್ಮ ಅವರಿಗೆ ಸರ್ವಶ್ರೇಷ್ಠ. ಸ್ವ ಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಒಳ್ಳೆಯದು. ಆಗ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ ಎಂದು ತಿಳಿಸಿದರು.

ಜನಪ್ರತಿನಿಧಿಗಳು ಬೇರೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಸಮಾಜದ ಒಳಿತಿಗೆ ದುಡಿಯಬೇಕು ಎಂದು ಶ್ರೀಗಳು ಆಶಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಬಜೆಟ್‌ನಲ್ಲಿ ಉತ್ತರ ಕರ್ನಾಟಕದಲ್ಲಿ ಅನ್ಯಾಯವಾಗದಂತೆ ಈ ಭಾಗದ ಜನಪ್ರತಿಗಳು ಒಟ್ಟಾಗಿ ದನಿಯೆತ್ತಬೇಕು ಎಂದರು.

ಶಾಸಕ ಮಹಾಂತೇಶ ಕೌಜಲಗಿ, ಪೂಜ್ಯರ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಮುಂದೆ ಸಾಗಿದರೆ ಸಾರ್ಥಕ ಬದುಕನ್ನು ನಡೆಸಬಹುದು ಎಂದರು.

ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ನಾನು ಉತ್ತರ ಕರ್ನಾಟಕದ ಜನರ ದನಿಯಾಗಿ ಕೆಲಸ ಮಾಡುತ್ತೇನೆ. ಕೃಷ್ಣಾಕಣಿವೆ ಜನರ ಗೋಳಿನ ಕುರಿತು ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತುತ್ತೇನೆ. ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತ ಬಂದಿದ್ದು, ಮುಂದೆಯೂ ಪಕ್ಷಾತೀತವಾಗಿ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

ಸಂಸದ ಸುರೇಶ ಅಂಗಡಿ, ಪಂಚಪೀಠಗಳು ಮಾನವ ಕುಲಕ್ಕೆ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಮುನ್ನಡೆಯುತ್ತಿವೆ. ಈ ಹಾದಿಯಲ್ಲೇ ನಾವು ಸಾಗಬೇಕು ಎಂದರು. ವಟುಗಳಿಗೆ ಅಯ್ಯಚಾರ ದೀಕ್ಷೆ ನೀಡಲಾಯಿತು.