![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಮೈಸೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ದಿಂದ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ವಿವಿಧ ಘೋಷಣೆಗಳನ್ನು ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ತಡೆಗಟ್ಟುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ಅದೇ ಹಾದಿಯಲ್ಲೇ ಅಧಿಕಾರ ನಡೆಸುತ್ತಿದೆ. ಬೆಲೆ ಏರಿಕೆಯ ಸಮರ್ಥನೆಗಾಗಿ ಗ್ಯಾರಂಟಿ ಯೋಜನೆಗಳ ಹೆಸರನ್ನು ಮುಂದೆ ತರಲಾಗುತ್ತಿದೆ ಎಂದು ದೂರಿದರು.
ವಾಸ್ತವವಾಗಿ ಕಾಂಗ್ರೆಸ್ ಸರ್ಕಾರದಲ್ಲಿಯೂ ಭ್ರಷ್ಟಾಚಾರ, ದುಂದುವೆಚ್ಚ ಮುಂದುವರಿದಿದೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ, ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪ ಇದಕ್ಕೆ ಸಾಕ್ಷಿಯಾಗಿವೆ. ಇನ್ನೊಂದು ಕಡೆ ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಕಾರಣವಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಲಕ್ಷಾಂತರ ಕೋಟಿ ರೂ. ಆದಾಯವನ್ನಾಗಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು.
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿಯೂ ಅಗ್ಗವಾಗಿ ದೊರೆತ ಪೆಟ್ರೋಲಿಯಂ ಉತ್ಪನ್ನಗಳ ಲಾಭ ಗ್ರಾಹಕರಿಗೆ ಸಿಗುವ ಬದಲು, ಬಂಡವಾಳಶಾಹಿಗಳ ಜೇಬು ತುಂಬುವಂತಾಯಿತು. ಇವೆರಡು ಪಕ್ಷಗಳು ಪರಸ್ಪರ ಕೆಸರೆರಚಾಟ ಮಾಡುತ್ತಿವೆಯೇ ಹೊರತು ಜನರ ಪರವಾದ ನಿಲುವು ತೆಗೆದುಕೊಂಡು ಬೆಲೆ ನಿಯಂತ್ರಿಸಲು ವಿಫಲವಾಗಿವೆ. ಇಂತಹ ಜನ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಸದಸ್ಯರಾದ ಎಂ.ಉಮಾದೇವಿ, ಚಂದ್ರಶೇಖರ ಮೇಟಿ, ವಿ.ಯಶೋದರಾ, ಪಿ.ಎಸ್.ಸಂಧ್ಯಾ, ಸೀಮಾ, ಹರೀಶ್, ಸುನೀಲ್, ಬಸವರಾಜು ಇತರರು ಇದ್ದರು.