ಬೆಳಗಾವಿ: ಇಲ್ಲಿನ ಅಲೈನ್ಸ್ ಕ್ಲಬ್ ಸ್ಮಾರ್ಟ್‌ಸಿಟಿ, ಅಲೈನ್ಸ್ ಕ್ಲಬ್ ಸಾಂಬ್ರಾ ಏರ್‌ಪೋರ್ಟ್ ಬೆಳಗಾವಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ಕ್ಲಬ್ ರಸ್ತೆಯ ಸ್ಯಾಫ್ರಾನ್ ಹೋಟೆಲ್‌ನಲ್ಲಿ ಜರುಗಿತು.

ಅಧ್ಯಕ್ಷರಾಗಿ ಆನಂದ ಶೆಟ್ಟಿ, ಉಪಾಧ್ಯಕ್ಷರಾಗಿ ಎಸ್.ಐ. ಘನಮುಖಿ, ವೀರೇಶ ಚಿನಿವಾಲರ, ಕಾರ್ಯದರ್ಶಿಯಾಗಿ ಮಿನಾಲ ಕಾಲಕುಂದ್ರಿಕರ ಪದಗ್ರಹಣ ಮಾಡಿದರು. ನೂತನ ಪದಾಧಿಕಾರಿಗಳಿಗೆ ಅಲೈನ್ಸ್ ಸಂಸ್ಥಾಪಕ ಜಿಲ್ಲಾ ಗವರ್ನರ್ ದಿನಕರ ಶೆಟ್ಟಿ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿ, ‘ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿರುವ ಇಂದಿನ ದಿನಗಳಲ್ಲಿ ನಗು ಮರೆಯಾಗುತ್ತಿದೆ. ಸ್ನೇಹ, ಬಾಂಧವ್ಯಗಳು ಬದುಕನ್ನು ಬರಡು ಮಾಡುತ್ತಿವೆ. ಒಂದೇ ಮನೆಯಲ್ಲಿದ್ದರೂ ಕುಟುಂಬ ಸದಸ್ಯರ ಮನಸ್ಸುಗಳು ವಿಮುಖವಾಗುತ್ತಿವೆ. ಇಂತಹ ಪರಿಸ್ಥಿತಿ ಬದಲಾಗಬೇಕಿದ್ದರೆ ಜೀವನದಲ್ಲಿ ನಗು ಇರಬೇಕು. ್ರೆಂಡ್‌ಶಿಪ್, ರಿಲೇಷನ್‌ಶಿಪ್‌ಗಳೆನ್ನುವ ‘ಶಿಪ್’ ಗಟ್ಟಿಯಾಗಿ ಮುನ್ನಡೆಯುತ್ತಿದ್ದರೆ ಸಮಾಜ ಸದೃಢವಾಗಿರುತ್ತದೆ. ಸಮಾಜವನ್ನು ಸದೃಢಗೊಳಿಸುವ ಕಾರ್ಯದಲ್ಲಿ ಪತ್ರಕರ್ತರ ಪಾತ್ರವೂ ಹಿರಿದಾಗಿದೆ ಎಂದ ಅವರು, ಸಾಮಾಜಿಕ ಕಾರ್ಯಗಳಿಗೆ ರಾಣಿ ಚನ್ನಮ್ಮ ವಿವಿ ಸದಾ ಬೆಂಬಲವಾಗಿರುತ್ತದೆ’ ಎಂದರು. ಡಾ. ನವಿನಾ ಶೆಟ್ಟಿಗಾರ, ಪ್ರಭಾಕರ ಶೆಟ್ಟಿ, ಡಾ.ಡಿ.ಎಂ.ಬೆನ್ನೂರ, ಪ್ರಸನ್ನಕುಮಾರ ಶೆಟ್ಟಿ, ಮಂದಾಕಿನಿ ಅಪ್ಪುಗೊಳ, ಭಂಟರ್ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ಉಪಸ್ಥಿತರಿದ್ದರು. ಜಿ.ಎಸ್.ಸೋನಾರ್ ನಿರೂಪಿಸಿದರು. ಆರ್.ಎನ್. ತೋಟಗೇರ ಸ್ವಾಗತಿಸಿದರು.
ಮಹೇಶ್ ವಿಜಾಪುರಗೆ ಮಾಧ್ಯಮ ರತ್ನ
ಕಾರ್ಯಕ್ರಮದಲ್ಲಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸ್ಥಾನಿಕ ಸಂಪಾದಕ ಮಹೇಶ್ ವಿಜಾಪುರ, ‘ಇನ್ ಬೆಳಗಾವಿ’ ಸುದ್ದಿ ವಾಹಿನಿ ಸಂಪಾದಕ ರಾಜಶೇಖರ ಪಾಟೀಲ, ‘ಹಳ್ಳಿ ಸಂದೇಶ’ ದಿನಪತ್ರಿಕೆ ಸಂಪಾದಕ ಕುಂತಿನಾಥ ಕಲಮನಿ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.