* ವಿದ್ಯುತ್ ಉಪ ಕೇಂದ್ರ (ಸಬ್ ಸ್ಟೇಷನ್) ಸ್ಥಾಪಿಸಬೇಕೆಂದು ಆಗ್ರಹ

ವಿಜಯವಾಣಿ ಸುದ್ದಿಜಾಲ ಹಾಸನ: ಬೇಲೂರು ತಾಲೂಕಿನ ಬಿಕ್ಕೊಡು ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರ (ಸಬ್ ಸ್ಟೇಷನ್) ಸ್ಥಾಪಿಸಬೇಕೆಂದು ಆಗ್ರಹಿಸಿ ಸಮಾಜ ಸೇವಕ ಕೆ.ಎಸ್.ತೀರ್ಥಪ್ಪ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಏಕಾಂಗಿ ಪ್ರತಿಭಟನೆ ನಡೆಸಿದರು.
ಹಿಂದಿನ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಬಿಕ್ಕೊಡು ಗ್ರಾಮಕ್ಕೆ ವಿದ್ಯುತ್ ಉಪ ಕೇಂದ್ರ ಮಂಜೂರು ಮಾಡಿದ್ದರು ಮಾತ್ರವಲ್ಲದೆ ಶೀಘ್ರವಾಗಿ ಕಾರ್ಯ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದುವರೆಗೆ ಯಾವುದೆ ಕೆಲಸಗಳಾಗಿಲ್ಲ ಎಂದರು.
ಬೇಲೂರು ತಾಲೂಕಿನ ಬಿಕ್ಕೊಡು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಇರುವುದರಿಂದ ಉಪ ಕೇಂದ್ರದ ಅವಶ್ಯಕತೆ ಇದೆ. ವಿದ್ಯುತ್ ಸಮಸ್ಯೆಯಿಂದ ಇಲ್ಲಿನ ರೈತರು ಬೆಳೆದಿರುವ ಶುಂಠಿ, ಕಾಫಿ ಮತ್ತು ಅಡಿಕೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಂಚಕಾರ ಎದುರಾಗಿದೆ ಎಂದರು.
ಇಲ್ಲಿ ವಿದ್ಯುತ್ ಉಪ ಕೇಂದ್ರದ ಸ್ಥಾಪನೆಯಿಂದ ಬಿಕ್ಕೊಡು ಹೋಬಳಿಯ ಕೆಸಗೋಡು ನೀಲನಹಳ್ಳಿ, ಮಲ್ಲೇಶ್ವರ ನಗರ, ಗೌತಮ್ ನಗರ, ಕೆರ್ಲೂರ್, ವಾಟೆಹೊಳೆ, ಗೊಳೇನಹಳ್ಳಿ, ಶಿಂಗುರವಳ್ಳಿ, ಗೇಕರವಳ್ಳಿ, ವಸಂತಕೂಲೆ, ಹಿರಿವಾಟೆ ಹೊಳಲು, ಗುಮ್ಮನಹಳ್ಳಿ, ಚಟ್ಟನಹಳ್ಳಿ, ಹೊಸಹಳ್ಳಿ, ಕೋಮನಹಳ್ಳಿ ಹೀಗೆ ಹಲವು ಗ್ರಾಮಗಳಿಗೆ ಸಹಕಾರಿಯಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.