ಮಾಸಾಶನಕ್ಕಾಗಿ ತಪ್ಪದ ಸಂಕಷ್ಟ

ಬ್ಯಾಡಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಸಾಮಾಜಿಕ ಭದ್ರತೆ ಯೋಜನೆಗಳ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ವಯೋವೃದ್ಧರು ನಿತ್ಯ ತಹಸೀಲ್ದಾರ್, ಉಪಖಜಾನೆ ಹಾಗೂ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ.

ಅಂಗವಿಕಲರು, ವಿಧವೆಯರು, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ಮೈತ್ರಿ ಯೋಜನೆ ಮೂಲಕ ಸರ್ಕಾರ ಮಾಸಾಶನ ನೀಡುತ್ತಿದೆ. ಆದರೆ, ಸಮಯಕ್ಕೆ ಸರಿಯಾಗಿ ಮಾಸಾಶನ ಸಿಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ.

ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಫಲಾನುಭವಿಗಳ ಮಾಸಾಶನ ಖಜಾನೆಯಿಂದ ಪ್ರತಿ ತಿಂಗಳು 1ರಿಂದ 5ನೇ ತಾರೀಖಿನೊಳಗೆ ಚೆಕ್ ಮೂಲಕ ಅಂಚೆ ಕಚೇರಿಗೆ ತಲುಪಲಿದೆ. ಬಳಿಕ ಬ್ಯಾಂಕ್​ನಿಂದ ಅಂಚೆ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಆದರೆ, ಅಂಚೆ ಇಲಾಖೆಯಿಂದ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ ಎಂದು ದೂರಲಾಗುತ್ತಿದೆ.

ಹಣ ಕೊರತೆ ವಿಳಂಬಕ್ಕೆ ಕಾರಣ: ಪಟ್ಟಣದ 35 ಸಾವಿರ ಜನರಿಗೆ ಅಂಚೆ ತಲುಪಿಸಲು 4 ಸಿಬ್ಬಂದಿ ಮಂಜೂರಾಗಿದ್ದು, ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಅಂಚೆ ಕಚೇರಿಯಿಂದ ಒಟ್ಟು 15 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ 1.5 ಕೋಟಿ ರೂ. ಬಿಡುಗಡೆಯಾಗುತ್ತದೆ. ಅಂಚೆ ಅಧಿಕಾರಿಗಳು ಹೇಳುವಂತೆ ದಿನವೊಂದಕ್ಕೆ 5 ಲಕ್ಷ ರೂ. ನೀಡುತ್ತಿದ್ದು, ಫಲಾನುಭವಿಗಳಿಗೆ ವಿತರಿಸಲು ಸಾಲುತ್ತಿಲ್ಲ. ದಿನಕ್ಕೆ ಕನಿಷ್ಠ 10 ಲಕ್ಷ ರೂ. ಬೇಕಿದೆ. ಜಿಲ್ಲಾಧಿಕಾರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರ ನೇತೃತ್ವದಲ್ಲಿ ಬ್ಯಾಂಕ್ ಹಾಗೂ ಅಂಚೆ ಮುಖ್ಯಸ್ಥರ ಸಭೆ ನಡೆಸಿ, ಬೇಡಿಕೆಯಿದ್ದಷ್ಟು ಹಣ ನೀಡಲು ಸೂಚಿಸಿದೆ. ಆದರೆ, ಹಣ ಪೂರೈಕೆಯಾಗದಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.

6 ತಿಂಗಳಿಂದ ಹಣ ಸಿಕ್ಕಿಲ್ಲ: 2018ರ ಜೂನ್​ನಲ್ಲಿ ತಾಲೂಕಿನ ಫಲಾನುಭವಿಗಳಿಗೆ ವಿತರಣೆಯಾಗಬೇಕಿದ್ದ 16,29,600 ರೂ. ಕೆ2 ವ್ಯವಸ್ಥೆ ಮೂಲಕದ ಮಾಸಾಶನ ಇಂದಿಗೂ ಬಾರದಂತಾಗಿದೆ. ತಾಂತ್ರಿಕ ದೋಷದಿಂದ ಬಾಕಿ ಉಳಿದುಕೊಂಡಿದ್ದು, ಬಹುತೇಕ ಫಲಾನುಭವಿಗಳಿಗೆ ಜೂನ್ ಬಾಕಿ ಉಳಿದುಕೊಂಡಿದೆ ಎಂಬ ಮಾಹಿತಿ ಇಲ್ಲವಾಗಿದೆ. ಪ್ರತಿ ತಿಂಗಳು ಫಲಾನುಭವಿಗಳಿಗೆ ಹಣ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲವೆಂದೇ ಫಲಾನುಭವಿಗಳು ತಿಳಿದುಕೊಂಡಿದ್ದಾರೆ.

ಬ್ಯಾಡಗಿಯಲ್ಲಿ 4 ಅಂಚೆಪೇದೆ ಹುದ್ದೆ ಮಂಜೂರಾತಿಯಿದ್ದು, ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. 2 ಜನ ದಿನಗೂಲಿಗೆ ಅವಕಾಶವಿದೆ. ಬ್ಯಾಂಕ್​ನಿಂದ ಯಾವುದೇ ಹಣಕಾಸಿನ ಸಮಸ್ಯೆಯಿಲ್ಲ. ಪ್ರಿಂಟರ್, ಸಿಬ್ಬಂದಿ ಸಮಸ್ಯೆಗೆ ಇಲಾಖೆ ತಕ್ಷಣ ಸ್ಪಂದಿಸಿದೆ. ಜೂನ್ ತಿಂಗಳ ಬಾಕಿ ಹಣ ಕುರಿತು ಗಮನಕ್ಕೆ ಬಂದಿಲ್ಲ. ತಕ್ಷಣ ಹಣ ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.

| ಮಂಜುನಾಥ ಹುಬ್ಬಳ್ಳಿ ಅಂಚೆ ವ್ಯವಸ್ಥಾಪಕರು ಹಾವೇರಿ

ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆ ಮೊತ್ತ ಸಮರ್ಪಕವಾಗಿ ತಲುಪಲು ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳ, ಪ್ರಿಂಟರ್ ಹಾಗೂ ಅಂಚೆ ಪೇದೆಗಳ ಕೊರತೆಯಿದೆ. ಅಧಿಕಾರಿಗಳು ತಕ್ಷಣ ಸಮಸ್ಯೆ ಇತ್ಯರ್ಥಪಡಿಸಿ, ವಯೋವೃದ್ಧರಿಗೆ ಅನುಕೂಲ ಮಾಡಿಕೊಡಬೇಕು.

| ಎಂ.ಡಿ. ಚಿಕ್ಕಣ್ಣನವರ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ಜಿಲ್ಲಾ ಸಂಚಾಲಕ

ನನಗೆ ಸರ್ಕಾರದ ಮಾಸಾಶನದ ಹಣ ಸಮರ್ಪಕವಾಗಿ ತಲುಪುತ್ತಿಲ್ಲ. ಕಳೆದ ವಾರ ಅಕ್ಟೋಬರ್ ಮಾಸಾಶನ ಬಂದಿದೆ. 1 ತಿಂಗಳ ಬಾಕಿಯಿದ್ದು, ವೃದ್ಧನಾದ ನನಗೆ ಔಷಧಿ ಹಾಗೂ ಜೀವನಕ್ಕೆ ತೀವ್ರ ತೊಂದರೆಯಾಗಿದೆ. ಜೂನ್ ಹಣ 6 ತಿಂಗಳಾದರೂ ಬಂದಿಲ್ಲ. ಇದಕ್ಕಾಗಿ ಕಚೇರಿಗೆ ಅಲೆದಾಡಿ ಸಾಕಾಗಿದೆ.

| ಶಶಿಧರಸ್ವಾಮಿ ಗೊಲ್ಲರಹಳ್ಳಿಮಠ ಫಲಾನುಭವಿ