ಸಾಮಾಜಿಕ ಜಾಲತಾಣಗಳು ನಮ್ಮಲ್ಲಿ ಅಸೂಯೆ, ಅತೃಪ್ತಿಯನ್ನು ಹೆಚ್ಚಿಸುತ್ತಿವೆ

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಜನರಲ್ಲಿ ಅಸೂಯೆ ಮತ್ತು ಜೀವನದ ಕುರಿತು ಅತೃಪ್ತಿ ಭಾವನೆ ಹೆಚ್ಚುತ್ತಿದೆ ಎಂದು ಪುಸ್ತಕವೊಂದು ತಿಳಿಸಿದೆ.

ಫೇಸ್​ಬುಕ್​, ಟ್ವಿಟರ್​, ಇನ್ಸ್ಟಾಗ್ರಾಂ, ಪಿಂಟರೆಸ್ಟ್​, ಪೆರಿಸ್ಕೋಪ್​ ಮತ್ತು ಯೂಟ್ಯೂಬ್​ನಂತಹ ಸಾಮಾಜಿಕ ಜಾಲತಾಣಗಳಿಂದಾಗಿ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು ಮತ್ತು ಅವರೊಂದಿಗೆ ಮಾತುಕತೆ ನಡೆಸಬಹುದು. ಆದರೆ ಈ ಸಂದರ್ಭದಲ್ಲಿ ಜನರು ತಮ್ಮ ಬಳಿ ಇರುವ ವಸ್ತುಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಇದು ಪರಸ್ಪರರನ್ನು ಹೋಲಿಸಿಕೊಳ್ಳುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಆಶೀಶ್​ ಮುಖರ್ಜಿ ತಮ್ಮ ‘ದಿ ಇಂಟರ್​ನೆಟ್​ ಟ್ರ್ಯಾಪ್​’ ಪುಸ್ತಕದಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ಮನುಷ್ಯರ ಮೇಲಾಗುವ ಪರಿಣಾಮಗಳ ಕುರಿತು ಸಮೀಕ್ಷೆ ನಡೆಸಿದಾಗ ಫೇಸ್​ಬುಕ್​ ಬಳಕೆದಾರರಲ್ಲಿ ಬೇರೆ ಭಾವನೆಗಳಿಗೆ ಹೋಲಿಸಿದರೆ ಅಸೂಯೆ ಹೆಚ್ಚಿರುವುದು ಕಂಡು ಬಂದಿತ್ತು. ಬೇರೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದರಿಂದ ಅಸೂಯೆ ಹೆಚ್ಚುತ್ತಿರುವುದು ದೃಢಪಟ್ಟಿತ್ತು.

ಅಸೂಯೆ ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿ ನಮ್ಮ ಮೇಲೆ ಪರಿಣಾಮ ಬೀರಬಹುದು. ಕೆಲವರಿಗೆ ಕಷ್ಟಪಟ್ಟು ಕೆಲಸ ಮಾಡಲು ಉತ್ತೇಜನ ನೀಡಬಹುದು. ಕೆಲವರು ಅಸೂಯೆಯ ಭಾವನೆಯನ್ನು ಹೆಚ್ಚಿಸಿಕೊಂಡು ತಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇದು ಮುಂದೊಂದು ದಿನ ಅವರು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆಶೀಶ್​ ಮುಖರ್ಜಿ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *