ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ

ಚಿಕ್ಕಮಗಳೂರು: ಮನುಷ್ಯನೊಳಗೆ ಅನೇಕ ಮುಖವಾಡಗಳಿದ್ದು, ಅವುಗಳನ್ನು ರಂಗಾಭಿನಯದ ಮೂಲಕ ಬಯಲುಗೊಳಿಸಿ ನೈಜ ಮನುಷ್ಯನನ್ನಾಗಿಸುವುದು ರಂಗ ಕಲೆ ಎಂದು ರಂಗಕರ್ವಿು ಪಿ.ವೇಲಾಯುಧನ್ ಹೇಳಿದರು.

ನಗರದ ಎಂಜಿ ರಸ್ತೆ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ಕ್ಯಾತನಬೀಡು ಪ್ರತಿಷ್ಠಾನದಿಂದ ಆಯೋಜಿಸಿದ್ದ ವಿಶ್ವರಂಗಭೂಮಿ ಒಂದು ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗಭೂಮಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಇರುವ ಒಂದು ದೊಡ್ಡ ಶಿಕ್ಷಣ ಕೇಂದ್ರ. ಕಿರಿಯರಿಂದ ಹಿರಿಯರವರೆಗೆ ಅಭಿರುಚಿಯನ್ನು ಬೆಳೆಸಿಕೊಳ್ಳಬಹುದಾದ ಸಹಬಾಳ್ವೆಯ ನೀತಿಪಾಠವನ್ನು ರಂಗಭೂಮಿ ಕಲಿಸುತ್ತದೆ. ಇಂತಹ ಕಲಾ ಚಟುವಟಿಕೆಗಳು ಹೆಚ್ಚಾದಷ್ಟು ಸಮಾಜದ ಆರೋಗ್ಯ ವೃದ್ಧಿಸುತ್ತದೆ ಎಂದರು.

ರಂಗಭೂಮಿಯಲ್ಲಿ ಅನೇಕ ಪ್ರಕಾರಗಳಿವೆ. ಎಲ್ಲ ಪ್ರಕಾರಗಳು ಮನುಷ್ಯ ಸಮಾಜಕ್ಕೆ ಒಪ್ಪಿತವಾದ ಪ್ರಕಾರಗಳೆ. ಒಂದು ಕಾಲದಲ್ಲಿ ರಂಗಭೂಮಿ ಕೇವಲ ಸಾಂಸ್ಕೃತಿಕ ನೋಟವಾಗಿತ್ತು. ಈಗ ಅದು ಸಮಾಜ ಪರಿವರ್ತನೆಯ ನೋಟವಾಗಿದೆ. ರಂಗಭೂಮಿ ಚಟುವಟಿಕೆ ಮೂಲಕ ಒಂದು ಪ್ರದರ್ಶನ ಮನುಷ್ಯನೊಳಗಿರಬಹುದಾದ ಆಂತರಿಕ ಕ್ಷೋಭೆ ಕಳಚಿ ಉಲ್ಲಾಸ ತಂದುಕೊಡುತ್ತದೆ ಎಂದು ವಿಶ್ಲೇಷಿಸಿದರು.

ಸದಸ್ಯ ನಟರಾಜ್ ಎಸ್. ಕೊಪ್ಪಲು ಮಾತನಾಡಿ, ನಮ್ಮ ಹಳ್ಳಿಗಳಲ್ಲಿಯೂ ರಂಗಭೂಮಿ ಚಟುವಟಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಜನ ಸಮುದಾಯವನ್ನು ಒಂದೆಡೆ ಕೂಡಿಸುವಂತಹ ಕೆಲಸ ಆಗಬೇಕಿದೆ ಎಂದರು.

ರಂಗಕರ್ವಿು ಮಂಜುನಾಥ ಸ್ವಾಮಿ ಮಾತನಾಡಿ, ಎಲ್ಲ ಕಾಲಗಳಲ್ಲೂ ಹಾಯಲೇಬೇಕಾದ ತಲ್ಲಣಗಳಲ್ಲಿ ರಂಗಭೂಮಿಯೂ ಒಂದು. ಆದಿ. ಮಧ್ಯಮ, ಅಂತ್ಯದೊಳಗೆ ಎಲ್ಲ ರಂಗಕರ್ವಿುಗಳು ಸಾಗಲೇಬೇಕಿದೆ ಎಂದರು.

ಹಿರಿಯ ಶಿಲ್ಪಿ ಜಯಣ್ಣಾಚಾರ್, ಉಪನ್ಯಾಸಕ ವಿಶ್ವಮೂರ್ತಿ, ರಂಗಕರ್ವಿು ರಮೇಶ್ ಬೇಗಾರ್ ಮಾತನಾಡಿದರು. ಆಶಯ ನುಡಿಯಾಡಿದ ಜನದನಿ ಸಂಘಟನೆ ಅಧ್ಯಕ್ಷ ಬಿ.ಅಮ್ಜದ್ ರಂಗಾಭಿನಯವನ್ನು ಪ್ರದರ್ಶಿಸಿ ಗಮನ ಸೆಳೆದರು. ಸಂಚಲನ ತಂಡದ ಮಂಜುನಾಥ್ ರಂಗಗೀತೆಗಳನ್ನು ಹಾಡಿದರು. ಬಿಸಲೇಹಳ್ಳಿ ಸೋಮಶೇಖರ್ ರಂಗಾಭಿನಯದ ಮೂಲಕ ಕಾರ್ಯಕ್ರಮಕ್ಕೆ ರಂಗು ತಂದರು.