ಮ್ಯಾನ್ ವರ್ಸಸ್ ವೈಲ್ಡ್​ನಲ್ಲಿ ಸಾಹಸಿ ಮೋದಿ: ಡಿಸ್ಕವರಿ ಚಾನೆಲ್​ನಲ್ಲಿ ಅನಾವರಣಗೊಂಡ ಪ್ರಧಾನಿ ನರೇಂದ್ರ ಮೋದಿ ಪರಿಸರ ಪರ್ಯಟನೆ

ಸಾಹಸಿಗ ಎಡ್ವರ್ಡ್ ಮೈಕಲ್ (ಬೇರ್ ಗ್ರಿಲ್) ಜತೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ‘ಮ್ಯಾನ್ ವರ್ಸಸ್ ವೈಲ್ಡ್’ ಕುತೂಹಲದ ಕಾರ್ಯಕ್ರಮ ಸೋಮವಾರ ರಾತ್ರಿ 9ಕ್ಕೆ ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಯಿತು. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ದಟ್ಟಡವಿಯಲ್ಲೂ ಪ್ರಧಾನಿ ಮೋದಿ, ಉತ್ಸಾಹದ ಚಿಲುಮೆಯಾಗಿ ಪರಿಸರ ಪರ್ಯಟನೆ ನಡೆಸಿದ್ದನ್ನು ವೀಕ್ಷಕರು ಕಣ್ತುಂಬಿಕೊಂಡರು.

ದೃಶ್ಯ 1

ಗ್ರಿಲ್ಸ್ ಮತ್ತು ಮೋದಿ ಪಯಣ ಪ್ರಶ್ನೋತ್ತರ ಮಾಲಿಕೆ ರೂಪದಲ್ಲಿ ನಿರೂಪಣೆಗೊಂಡಿತು. ಅರಣ್ಯದಲ್ಲಿ ಎಂಟು ಕಿ.ಮೀ. ಚಾರಣ ಮಾಡಿದ ಮೋದಿ, ಜಿಮ್ಮ ಕಾರ್ಬೆಟ್ ಅರಣ್ಯದ ಸೊಬಗನ್ನು ತೆರೆದಿಟ್ಟರು. ಪ್ರಕೃತಿಯನ್ನು ಬಹಳ ಹತ್ತಿರದಿಂದ ನೋಡಬೇಕೆಂದಿದ್ದರೆ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಬನ್ನಿ. ಭಾರತದ ಸೊಬಗು ಇರುವುದು ವೈವಿಧ್ಯದ ಏಕತೆಯಲ್ಲಿ. ನಾವು ಪ್ರಕೃತಿ ಜತೆಗೆ ಸಂಘರ್ಷಕ್ಕೆ ಇಳಿದರೆ, ನಮಗೆ ದೊರೆಯುವುದು ಅದೇ ಎಂದರು.

ದೃಶ್ಯ 2

ಗುಜರಾತ್ ವಡ್​ನಗರದಲ್ಲಿ ಜನನ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ, ಟೀ ಮಾರಾಟ ಮಾಡುತ್ತಿದ್ದ ತಂದೆಗೆ ಸಹಾಯ ಮಾಡಿದ್ದು, ರೈಲ್ವೆ ನಿಲ್ದಾಣದಲ್ಲಿ ಟೀ ಮಾರಾಟ ಮಾಡುತ್ತಿದ್ದ ವಿಷಯವನ್ನು ಮೋದಿ ಗ್ರಿಲ್ಸ್ ಜತೆ ಹಂಚಿಕೊಂಡರು. ಬಡತನದ ಕಾರಣ ಬಟ್ಟೆ ತೊಳೆಯಲು ಮತ್ತು ಸ್ನಾನಕ್ಕೆ ಸಾಬೂನು ಇಲ್ಲದ ದಿನಗಳನ್ನು ನೆನೆದ ಮೋದಿ, ಕನಿಷ್ಠ ಅಗತ್ಯದಲ್ಲೇ ಬದುಕು ಸಾಗಿಸುವುದು ರೂಢಿಯಾಗಿದೆ ಎಂದರು. ಈ ಮಧ್ಯೆ, ಆನೆಯ ಲದ್ದಿಯನ್ನು ತೆಗೆದುಕೊಂಡ ಗ್ರಿಲ್ಸ್ ಅದನ್ನು ತಾವು ಮೂಸಿ, ಪ್ರಧಾನಿ ಮೋದಿಗೂ ಆಘ್ರಾಣಿಸಿದರು.

ದೃಶ್ಯ 3

ಬದುಕು ಕಟ್ಟಿಕೊಳ್ಳುವ ಪಯಣದಲ್ಲಿ ಪ್ರಕೃತಿಯ ಕೊಡುಗೆ ಬಹಳಷ್ಟಿದೆ ಎಂದ ಮೋದಿ, 17-18 ವರ್ಷದವನಿದ್ದಾಗ ಮನೆ ಬಿಟ್ಟೆ. ಹೀಗಾಗಿ ಆತ್ಮರಕ್ಷಣೆ ಗೊತ್ತಿದೆ ಎಂದು ಹೇಳಿದರು. ಆದರೂ ಗ್ರಿಲ್ಸ್, ಹುಲಿ ದಾಳಿ ಮಾಡಿದರೆ ರಕ್ಷಣೆಗೆ ಇರಲಿ ಎಂದು ಪ್ರಧಾನಿಗೆ ಮರದ ಕೋಲಿಗೆ ಚಾಕು ಕಟ್ಟಿ ಈಟಿ ಮಾಡಿಕೊಟ್ಟು, ‘ನೀವು ಭಾರತದ ಬಹಳ ಮಹತ್ವದ ವ್ಯಕ್ತಿ ಇದು ನಿಮ್ಮ ರಕ್ಷಣೆಗೆ ಇರಲಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ನಾನು ಪಡೆದ ಸಂಸ್ಕಾರ ಹಿಂಸೆಯದ್ದಲ್ಲ. ಆದರೂ ನಿಮ್ಮ ಬಲವಂತಕ್ಕೆ ಇಟ್ಟುಕೊಂಡಿರುವೆ ಎಂದು ನಸುನಕ್ಕರು. ಹಿಮಾಲಯದ ಪ್ರಕೃತಿ ಇಷ್ಟವಾಯಿತು. ಕೆಲವು ವರ್ಷ ಅಲ್ಲಿದ್ದೆ. ಸಂತರನ್ನು ಸಂದರ್ಶಿಸಿದೆ. ಅಲ್ಲಿನ ಅನುಭವ ಈಗಲೂ ನನಗೆ ಚೈತನ್ಯ ನೀಡುತ್ತಿದೆ ಎಂದು ಮೋದಿ ಹೇಳಿದರು.

ದೃಶ್ಯ 4

ನದಿಯೊಂದರ ಬಳಿಗೆ ಬಂದ ಗ್ರಿಲ್ಸ್ ಮತ್ತು ಮೋದಿ, ದಡದಲ್ಲಿ ಹಜ್ಜೆ ಹಾಕಿದರು. ಈ ವೇಳೆ, ಮೋದಿ ಆರ್​ಎಸ್​ಎಸ್ ಸಂಪರ್ಕ, ಸಮಾಜ ಸೇವೆ, ಗುಜರಾತನಲ್ಲಿ 13 ವರ್ಷ ಮುಖ್ಯಮಂತ್ರಿಯಾಗಿದ್ದ ಅನುಭವವನ್ನು ಚುಟುಕಾಗಿ ಹೇಳಿದರು. ಸಿಎಂ ಮತ್ತು ಪ್ರಧಾನಿಯಾಗಿ ನನ್ನ ಮಂತ್ರ ಅಭಿವೃದ್ಧಿ. ಶ್ರೀಸಾಮಾನ್ಯರ ಕನಸು ನನಸಾಗಬೇಕು ಎಂಬುದು ನನ್ನ ಕನಸು ಇದನ್ನು ಈಡೇರಿಸಲು ಶ್ರಮಿಸುತ್ತಿರುವೆ. ಈ 18 ವರ್ಷಗಳಲ್ಲಿ ನಾನು ಸಾರ್ವಜನಿಕ ಬದುಕಿನಿಂದ ಬಿಡುವ ಏನಾದರೂ ಪಡೆದಿದ್ದರೆ ಇದು ನಿಮ್ಮೊಂದಿಗೆ ಅರಣ್ಯಯಾನಕ್ಕೆ ಬಂದ ಈ ದಿನಗಳು ಎಂದು ಮೋದಿ ಹೇಳಿದರು. ಗುಜರಾತನಲ್ಲಿರುವ ತಮ್ಮ ತಾಯಿ ಬಗ್ಗೆ ಮಾತನಾಡಿದ ಮೋದಿ, ಅಮ್ಮನಿಗೆ 97 ವರ್ಷ, ಈಗಲೂ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ ಎಂದರು.

ದೃಶ್ಯ 5

ಪ್ಲಾಸ್ಟಿಕ್ ಹಾಳೆಯಲ್ಲಿ ಮರದ ಬೊಂಬುಗಳನ್ನು ಹಾಕಿ ನಿರ್ವಿುಸಿದ ತೆಪ್ಪದಲ್ಲಿ ಗ್ರಿಲ್ಸ್ ಮತ್ತು ಮೋದಿ ನದಿಯನ್ನು ದಾಟಿದ ದೃಶ್ಯ ರೋಚಕವಾಗಿತ್ತು. ಮೊದಲು ಮೋದಿಯನ್ನು ತೆಪ್ಪದಲ್ಲಿ ಕೂರಿಸಿ ನದಿಯಲ್ಲಿ ಸ್ವಲ್ಪ ದೂರ ತಳ್ಳಿದ ಗ್ರಿಲ್ಸ್ ನಂತರ ತಾವು ಅದಕ್ಕೆ ಹತ್ತಿಕೊಂಡರು. ನದಿ ದಾಟುವ ಸಂದರ್ಭದಲ್ಲಿ ಬೇವಿನ ಎಲೆಯನ್ನು ಮೋದಿ ಆಘ್ರಾಣಿಸಿದರು. ಇದು ಭಾರತದ ಸೊಗಡು ಎಂದು ಮೋದಿ ಬಣ್ಣಿಸಿದರು. ಭಾರತೀಯರು ವೈಯಕ್ತಿಕವಾಗಿ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಆದರೆ, ಸಾಮಾಜಿಕವಾಗಿ ಅದನ್ನು ರೂಢಿಸಿಕೊಳ್ಳುವುದನ್ನು ಪ್ರಯತ್ನಪೂರ್ವಕವಾಗಿ ಅಭ್ಯಸಿಸಬೇಕು ಮತ್ತು ಇದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದೆ. ಮಹಾತ್ಮ ಗಾಂಧಿಯವರ ನೀತಿಯನ್ನು ಯೋಜನೆ ರೂಪದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮೋದಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಹೇಳಿದರು. ನಾನೆಂದು ದಿಗಿಲುಗೊಂಡಿಲ್ಲ, ಅಧೀರನಾದ ಸಂದರ್ಭ ಇಲ್ಲ. ನನ್ನ ಆತ್ಮಶಕ್ತಿ ಬಹಳ ಗಟ್ಟಿಯಾಗಿದೆ. ನಾನಾ ಯಾವತ್ತೂ ಸಕಾರಾತ್ಮಕವಾಗಿ ಚಿಂತಿಸುವೆ ಎಂದರು. ಒಂದು ತಾಸು ಬಿತ್ತರಗೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಗ್ರಿಲ್ಸ್ ಜತೆಗಿನ ಒಡನಾಟ ಉತ್ತಮವಾಗಿತ್ತು ಮತ್ತು ಈ ಕಾರ್ಯಕ್ರಮ ಜನರಿಗೆ ಆಕರ್ಷಣೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು.

180 ರಾಷ್ಟ್ರಗಳಲ್ಲಿ ಬಿತ್ತರ

ಈ ವಿಶೇಷ ಕಾರ್ಯಕ್ರಮವು ಡಿಸ್ಕವರಿಯ12 ಚಾನಲ್​ಗಳಲ್ಲಿ 180 ದೇಶಗಳಲ್ಲೂ ಇದು ಬಿತ್ತರವಾಗಿದೆ. ‘ಮ್ಯಾನ್ ವರ್ಸಸ್ ವೈಲ್ಡ್’ ಪ್ರಚಾರದ ದೃಶ್ಯವನ್ನು (ಟೀಸರ್) ಕೇಂದ್ರ ಪ್ರವಾಸೋದ್ಯಮ ಇಲಾಖೆ ‘ಇನ್​ಕ್ರೆಡಿಬಲ್ ಇಂಡಿಯಾ’ ವೆಬ್​ಸೈಟ್​ನಲ್ಲಿ ಹಾಕಿತ್ತು. ಪ್ರಧಾನಿ ಮೋದಿ ಪ್ರವಾಸೋದ್ಯಮದ ಬಹುದೊಡ್ಡ ರಾಯಭಾರಿಯಾಗಿದ್ದು, ಈ ಕಾರ್ಯಕ್ರಮವು ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೆಳಿದ್ದರು.

ಮನೆಯಲ್ಲೇ ಮೊದಲ ಪಾಠ

ಪರಿಸರ ಸಂರಕ್ಷಣೆ ಬಗ್ಗೆ ತಮಗಿರುವ ಕಾಳಜಿ ಬಾಲ್ಯದಿಂದಲೇ ಬಂದಿದ್ದು ಎಂದು ಗ್ರಿಲ್ಸ್​ಗೆ ಮಾಹಿತಿ ನೀಡಿದ ಮೋದಿ, ನಾವು ಬಡವರಾಗಿದ್ದರಿಂದ ನಮ್ಮ ಸಂಬಂಧಿಯೊಬ್ಬರು ಕಟ್ಟಿಗೆ ಕಡಿದು ವ್ಯಾಪಾರ ಮಾಡುವ ನಿರ್ಧಾರ ಮಾಡಿದ್ದರು. ಆದರೆ ನಮ್ಮ ಅಜ್ಜಿ ಅದಕ್ಕೆ ಒಪ್ಪಲಿಲ್ಲ. ನಾವು ಹಸಿವಿನಿಂದಿದ್ದರೂ ಸರಿ ಮರಗಳನ್ನು ಕಡಿಯಬಾರದು ಎಂದು ತಾಕೀತು ಮಾಡಿದ್ದರು ಎಂದರು. ನಾವು ಮುಂದಿನ 50 ವರ್ಷದ ಪ್ರಕೃತಿ ಸ್ಥಿತಿ ಬಗ್ಗೆ ಯೋಜನೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಖಂಡಿತ ಪ್ರಶ್ನಿಸುತ್ತದೆ.

ಪ್ರಕೃತಿಗೆ ಕಾಳಜಿ ಅಗತ್ಯ

ಪ್ರಕೃತಿಯನ್ನು ನಾವು ಪ್ರೀತಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದ ಮೋದಿ ತಿಳಿಸಿದರು. ನಾವು ಪ್ರತಿ ಸಸಿ, ಮರಗಳಲ್ಲೂ ದೇವರನ್ನು ಕಾಣುತ್ತೇವೆ. ವಿಶೇಷವಾಗಿ ನಮ್ಮ ಮನೆ ಎದುರಿಗಿರುವ ತುಳಸಿ ಸಸಿಯನ್ನು ನಾವು ಮನೆಯ ಸದಸ್ಯನಂತೆಯೇ ಪರಿಗಣಿಸುತ್ತೇವೆ. ಅದು ನಮಗೆ ದೈವಿ ಸ್ವರೂಪ ಎಂದು ತುಳಸಿ ವಿವಾಹದ ಬಗ್ಗೆ ಗ್ರಿಲ್ಸ್​ಗೆ ಮಾಹಿತಿ ನೀಡಿದರು.

ಕನ್ನಡದಲ್ಲೂ ಡಿಸ್ಕವರಿ ಆರಂಭ

‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮವು ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ಮಲಯಾಳಂ, ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲಿ ಪ್ರಸಾರವಾಗಲಿದೆ. ಅಮೆರಿಕದಲ್ಲಿ 8 ಭಾಷೆಗಳಲ್ಲಿ ಪ್ರಸಾರವಾಗಲಿದೆ. ಪ್ರಧಾನಿ ಮೋದಿ ಭಾಗಿಯಾಗಿರುವ ಈ ವಿಶೇಷ ಕಾರ್ಯಕ್ರಮ ಕನ್ನಡದಲ್ಲೂ ಪ್ರಸಾರವಾಗಲಿದೆಯೇ ಎಂದು ಕುಂದಾಪುರದ ಕೊಡ್ಲಾಡಿ ಕಿರಣ್ ಎಂಬುವರು ಡಿಸ್ಕವರಿ ಚಾನಲ್​ಗೆ ಟ್ವೀಟ್ ಮೂಲಕ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸ್ಕವರಿ ನೆಟ್​ವರ್ಕ್ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕಿ ಮೇಘಾ, ಹೌದು ಎಂದಿದ್ದರು. ಜ್ಞಾನವಾಹಿನಿಗಳು ಕನ್ನಡದಲ್ಲಿ ಬರಬೇಕು ಎಂಬ ಒತ್ತಾಯದ ನಡುವೆಯೇ ಪ್ರಸಿದ್ಧ ಡಿಸ್ಕವರಿ ವಾಹಿನಿ ಸೋಮವಾರದಿಂದ ಕನ್ನಡ ಪ್ರಸಾರ ಆರಂಭಿಸಿರುವುದಕ್ಕೆ ಸ್ವಾಗತ ವ್ಯಕ್ತವಾಗಿದೆ.

ಮೋದಿ ಜತೆಗಿನ ಅನುಭವ ಅತ್ಯುತ್ತಮ. ವಿಷಮ ಪರಿಸ್ಥಿತಿಯಲ್ಲಿ ಸಮಚಿತ್ತದಿಂದ ಇರುವ ಮೋದಿಗೆ ವಿಶ್ವನಾಯಕರಿಗೆ ಇರಬೇಕಾದ ಗುಣ ಇದೆ. ಇಂಥ ಪ್ರಧಾನಿಯನ್ನು ನಾನು ಹಿಂದೆಂದೂ ಕಂಡಿರಲಿಲ್ಲ.

| ಮೈಕಲ್ ಗ್ರಿಲ್ಸ್ ‘ಮ್ಯಾನ್ ವರ್ಸಸ್ ವೈಲ್ಡ್’ನ ನಿರೂಪಕ

ಮೊಸಳೆ ಹಿಡಿದಿದ್ದ ಮೋದಿ

ನದಿಯಲ್ಲಿ ಸಾಕಷ್ಟು ಮೊಸಳೆಗಳಿವೆ, ನಿಮಗೆ ಭಯವಾಗುವುದಿಲ್ಲವೆ? ಅಥವಾ ಮೊಸಳೆ ಜತೆ ನಿಮಗೇನಾದರೂ ಅನುಭವವಾಗಿದೆಯಾ? ಎಂದು ಗ್ರಿಲ್ಸ್ ಕೇಳಿದರು. ನಗುತ್ತ ಪ್ರತಿಕ್ರಿಯಿಸಿದ ಮೋದಿ, ಬಾಲ್ಯದಲ್ಲಿ ಒಮ್ಮೆ ಮೊಸಳೆ ಮರಿಯೊಂದನ್ನು ಮನೆಗೆ ತಂದಿದ್ದ ಕಥೆ ಬಿಚ್ಚಿಟ್ಟರು. ನಾನು ಕೆರೆಗೆ ಸ್ನಾನಕ್ಕೆ ಹೋಗುತ್ತಿದ್ದೆ. ಚಿಕ್ಕ ಮೊಸಳೆ ಮರಿಯೊಂದನ್ನು ಹಿಡಿದುಕೊಂಡು ಮನೆಗೆ ಬಂದಿದ್ದೆ. ನನ್ನನ್ನು ಪ್ರೀತಿಯಿಂದಲೇ ಗದರಿದ ಅಮ್ಮ, ಪ್ರಾಣಿ ಹಿಂಸೆ ಮಹಾಪಾಪ ಎಂದು ಬುದ್ಧಿ ಹೇಳಿದರು. ಹೀಗಾಗಿ ಮೊಸಳೆಯನ್ನು ವಾಪಸ್ ಕೆರೆಗೆ ಬಿಟ್ಟೆ ಎಂದರು.

ಪ್ರಕೃತಿ ಸೊಬಗಿನಲ್ಲಿ ಭಾರತ ಖಂಡಿತವಾಗಿಯೂ ಜಾಗತಿಕ ತಾಣ. ಇಲ್ಲಿನ ಸಸ್ಯ, ಪ್ರಾಣಿಗಳ ವೈವಿಧ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಕಾರ್ಯಕ್ರಮ ಅನುವು ಮಾಡಿಕೊಟ್ಟಿತು. ಅವಕಾಶ ನೀಡಿದ ಗ್ರಿಲ್ಸ್​ಗೆ ಧನ್ಯವಾದ.

| ನರೇಂದ್ರ ಮೋದಿ ಪ್ರಧಾನಿ

Leave a Reply

Your email address will not be published. Required fields are marked *