ಡ್ರೖೆಯರ್​ನಲ್ಲಿತ್ತು ಹಾವು

ಸೋಮಾರಿತನದಿಂದಾಗಿಯೋ ಅಥವಾ ಮತ್ತಿನ್ನಾವುದಾದರೂ ಕಾರಣಕ್ಕೋ ಕಾಲನ್ನು ಎತ್ತಿಡುವುದಕ್ಕೂ ಯೋಚನೆ ಮಾಡುವವರು, ಭಯದ ಸನ್ನಿವೇಶ ಎದುರಾದಾಗ ಹಿಂದೂಮುಂದೂ ನೋಡದೆ ಹತ್ತು ಪಟ್ಟು ವೇಗದಲ್ಲಿ ಕಂಬಿ ಕೀಳುತ್ತಾರೆ ಎಂಬ ಮಾತಿಗೆ ಪುಷ್ಟಿನೀಡುವ ಘಟನೆಯೊಂದು ಫ್ಲೋರಿಡಾದಿಂದ ವರದಿಯಾಗಿದೆ. ಅಮಂಡಾ ವೈಸ್ ಎಂಬ ಮಹಿಳೆಯೊಬ್ಬಳು ವಾಷಿಂಗ್ ಮಷಿನ್-ಕಂ-ಡ್ರೖೆಯರ್​ನಲ್ಲಿ ಕೊಳೆಬಟ್ಟೆಗಳನ್ನೆಲ್ಲ ತೊಳೆಯಲು ಹಾಕಿದ್ದಳು. ಕೆಲ ಹೊತ್ತಿನ ನಂತರ, ಡ್ರೖೆಯರ್​ನಿಂದ ಬಟ್ಟೆಗಳನ್ನು ಹೊರತೆಗೆಯಲೆಂದು ಕೈಹಾಕಲು ಮುಂದಾದಾಗ ಕಂಡ ದೃಶ್ಯದಿಂದ ಅವಳ ಹೃದಯ ಬಾಯಿಗೆ ಬರುವಂತಾಯಿತಂತೆ. ಕಾರಣ ಮುದುರಿದ ಬಟ್ಟೆಗಳ ನಡುವೆ ಹಾವೊಂದು ‘ಸಿಂಬಿ ಸುತ್ಕೊಂಡು’ ಪಾಚ್ಕೊಂಡಿತ್ತು! ಅದು ‘ಕೇರೆಹಾವು’ ಎಂದು ಕರೆಯಲ್ಪಡುವ ಹಾವಿನ ಮತ್ತೊಂದು ಪ್ರಭೇದವಾಗಿತ್ತಂತೆ. ಸತ್ತೆನೋ ಕೆಟ್ಟೆನೋ ಎಂಬ ರೀತಿಯಲ್ಲಿ ಅಲ್ಲಿಂದ ಜಾಗಖಾಲಿಮಾಡಿದೆ ಎಂದು ಹೇಳಿಕೊಂಡಿರುವ ಆ ಮಹಿಳೆ, ತನ್ನ ಅದುವರೆಗಿನ ಜೀವನದಲ್ಲಿ ಯಾವತ್ತೂ ಅಷ್ಟು ವೇಗವಾಗಿ ಓಡಿರಲಿಲ್ಲವಂತೆ. ಕೆಲ ಹೊತ್ತಿನ ನಂತರ ಆಕೆಯ ಪತಿರಾಯರು ಘಟನಾ ಸ್ಥಳಕ್ಕೆ ಧಾವಿಸಿ, ಹಾವನ್ನು ಡ್ರೖೆಯರ್​ನಿಂದ ಹೊರತೆಗೆದನಂತೆ.