More

    ಕಣಿವೆ ಪ್ರದೇಶದಲ್ಲಿ ಪ್ರೀಪೇಯ್ಡ್​ ಮೊಬೈಲ್​ನ ವಾಯ್ಸ್​ ಕಾಲ್​, ಎಸ್​ಎಂಎಸ್​ ಸೇವೆ ಮರುಸ್ಥಾಪನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಸಮಯದಲ್ಲಿ ಹೇರಲಾಗಿದ್ದ ಕೆಲವು ನಿರ್ಬಂಧಗಳಲ್ಲಿ ಒಂದಾದ ಪ್ರೀಪೇಯ್ಡ್​ ಮೊಬೈಲ್​ ಸಂಪರ್ಕವನ್ನು ಕಣಿವೆ ಪ್ರದೇಶದಲ್ಲಿ ಶನಿವಾರ ಮರುಸ್ಥಾಪಿಸಲಾಗಿದೆ.

    ಇಂದಿನಿಂದ ಪ್ರೀಪೇಯ್ಡ್​ ಮೊಬೈಲ್​ನ ವಾಯ್ಸ್​ ಕಾಲ್​ ಮತ್ತು ಎಸ್​ಎಂಎಸ್​ ಸೇವೆಯನ್ನು ಮರುಸ್ಥಾಪಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಪ್ರಮುಖ ನಿರ್ಬಂಧಗಳಲ್ಲಿ ಒಂದಾಗಿದ್ದ ಮೊಬೈಲ್​ ಸಂಪರ್ಕ ನಿರ್ಬಂಧ ತೆರವಿನಿಂದಾಗಿ ಕಣಿವೆ ಜನರಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ.

    ಕಾಶ್ಮೀರದ ಕುಪ್ವಾರ ಮತ್ತು ಬಂಡಿಪೋರ ಸೇರಿದಂತೆ ಜಮ್ಮುವಿನ 10 ಜಿಲ್ಲೆಗಳ ಪೋಸ್ಟ್​ಪೇಯ್ಡ್​ ಸಿಮ್​ನ 2ಜಿ ಇಂಟರ್ನೆಟ್​ ಸೇವೆಯನ್ನು ಕೆಲವು ನಿರ್ಬಂಧಗಳೊಂದಿಗೆ ಮರುಸ್ಥಾಪಿಸಲಾಗುವುದು ಎಂದು ಹಿರಿಯ ಅಧಿಕಾರಿ ರೋಹಿತ್​ ಕನ್ಸಾಲ್​ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಟೆಲಿಕಾಂ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಲಾಗಿದೆ.​

    ಪೋಸ್ಟ್​ಪೇಯ್ಡ್​ ಸಿಮ್​ಗಳಿಗೆ ಇಂಟರ್ನೆಟ್​ ಸಂಪರ್ಕ ನೀಡಲು ಟೆಲಿಕಾಂ ಸೇವಾ ಪೂರೈಕೆದಾರರು ಚಂದಾದಾರರ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.

    ಸಂವಿಧಾನದ ಅಡಿಯಲ್ಲಿ ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷದ ಆಗಸ್ಟ್​ ತಿಂಗಳಿನಲ್ಲಿ ಕೇಂದ್ರ ಸರ್ಕಾರ ತೆಗೆದುಹಾಕಿತ್ತು. ಅಲ್ಲದೆ, ಜಮ್ಮ ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿತ್ತು. ಇದಕ್ಕೂ ಮುನ್ನ ಕಣಿವೆ ನಾಡಿನ ತುಂಬೆಲ್ಲಾ ಬಿಗಿ ಭದ್ರತೆ ಏರ್ಪಡಿಸಿ, ಮುಂಜಾಗ್ರತ ಕ್ರಮವಾಗಿ ಇಂಟರ್ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಕೆಲವು ನಿರ್ಬಂಧಗಳು ಹಾಗೇ ಇದ್ದು, ಮುಂದಿನ ದಿನಗಳಲ್ಲಿ ಒಂದೊಂದಾಗಿ ನಿರ್ಬಂಧಗಳನ್ನು ಅಧಿಕಾರಿಗಳ ಸಡಿಲಿಗೊಳಿಸಲಿದ್ದಾರೆ.

    ಕಳೆದ ಶುಕ್ರವಾರವಷ್ಟೇ ಕಾಶ್ಮೀರ ಮೇಲಿನ ನಿರ್ಬಂಧ ಸಂಬಂಧ ಸುಪ್ರೀಂಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅಂತರ್ಜಾಲ ಅಮಾನತ್ತನ್ನು ತಕ್ಷಣವೇ ಮರು ಪರಿಶೀಲಿಸಬೇಕಾಗಿದೆ. ಇಂತಹ ನಿರ್ಬಂಧಗಳು ಕೆಲವೇ ಸಮಯಗಳವರೆಗೆ ಮಾತ್ರ ಇರಬೇಕು. ಇದು ಕೂಡ ನ್ಯಾಯಾಂಗ ಪರಿಶೀಲನೆಯ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್​ ತಿಳಿಸಿದ್ದು, ಮುಕ್ತ ಓಡಾಟ, ಅಂತರ್ಜಾಲ ಹಾಗೂ ಮೂಲಭೂತ ಸ್ವಾತಂತ್ರ್ಯದ ಮೇಲಿನ ನಿರ್ಬಂಧ ಅಧಿಕಾರದ ಅನಿಯಂತ್ರಿತ ವ್ಯಾಯಮ ಆಗಬಾರದು ಎಂದು ಹೇಳಿತು. ಒಂದು ವಾರದೊಳೆಗೆ ಇಂಟರ್ನೆಟ್​ ಸೇವೆಯನ್ನು ಮರುಸ್ಥಾಪಿಸಲು ಸೂಚಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts