ಏಕದಿನ ಸರಣಿಗೆ ಸ್ಮೃತಿ ಅಲಭ್ಯ

ಮುಂಬೈ: ಟೀಮ್ ಇಂಡಿಯಾ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಅಭ್ಯಾಸದ ವೇಳೆ ಬಲಗಾಲಿನ ಹೆಬ್ಬೆರಳ ಮೂಳೆ ಮುರಿತಕ್ಕೆ ಒಳಗಾಗಿರುವ ಸ್ಮೃತಿಗೆ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದು, ವೇಗದ ಬೌಲಿಂಗ್ ಆಲ್ರೌಂಡರ್ ಪೂಜಾ ವಸ್ತ್ರಾಕರ್​ರನ್ನು ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿ ಬದಲಿಯಾಗಿ ಪ್ರಕಟಿಸಿದೆ. ವಡೋದರದಲ್ಲಿ ಬುಧವಾರ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿ ಅ. 14ರಂದು ಕೊನೆಯಾಗಲಿದ್ದು, ಅದರ ಬೆನ್ನಲ್ಲಿಯೇ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಬೇಕಿದೆ. ಈ ನಡುವೆ ಸ್ಮೃತಿ ಗಾಯ ತಂಡದ ಆತಂಕಕ್ಕೆ ಕಾರಣವಾಗಿದೆ. ಅವರಿಗೆ ಎಷ್ಟು ದಿನಗಳ ವಿಶ್ರಾಂತಿ ಅಗತ್ಯವಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

‘ಎನ್​ಸಿಎ ಫಿಸಿಯೋಗಳ ಪರಿಶೀಲನೆ ಬಳಿಕ ಸ್ಮೃತಿಗೆ ಎಷ್ಟು ದಿನದ ವಿಶ್ರಾಂತಿ ಅಗತ್ಯವಿದೆ ಎನ್ನುವ ಮಾಹಿತಿ ತಿಳಿಯಲಿದೆ. ಗಾಯಗೊಂಡ ಬೆನ್ನಲ್ಲಿಯೇ ಚೇತರಿಕೆ ಎಷ್ಟು ದಿನ ಬೇಕಾಗುತ್ತದೆ ಎಂದು ತಿಳಿಸುವುದು ಕಷ್ಟ. ಮೊದಲಿಗೆ ಎಂಆರ್​ಐ ಸ್ಕ್ಯಾನ್​ಗೆ ಒಳಗಾಗಬೇಕಿದೆ’ ಎಂದು ಮಹಿಳಾ ತಂಡದ ಮುಖ್ಯ ಕೋಚ್ ಡಬ್ಲ್ಯುವಿ ರಾಮನ್ ತಿಳಿಸಿದ್ದಾರೆ. ತಂಡದಲ್ಲಿ ಮೀಸಲು ಆರಂಭಿಕ ಆಟಗಾರ್ತಿಯಾಗಿ ಪ್ರಿಯಾ ಪೂನಿಯಾ ಇದ್ದಾರೆ ಎಂದಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *