ಏನಾದರೂ ಹೇಳಿದರೆ ಸಿಡುಕುವ ಪುತ್ರಿಯ ನಡವಳಿಕೆಗೆ ನಕ್ಕು ಸುಮ್ಮನಾಗುವ ಸ್ಮೃತಿ ಇರಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಸ್ಮೃತಿ ಇರಾನಿ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಅವರು ರಾಜಕೀಯ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ. ಕೆಲಸದ ಒತ್ತಡದ ನಡುವೆಯೂ ತಮ್ಮ ಕುಟುಂಬದವರಿಗಾಗಿ ಸಾಕಷ್ಟು ಸಮಯ ಮೀಸಲಿರುವಂತೆ ನೋಡಿಕೊಳ್ಳುತ್ತಾರೆ. ಮಗಳೊಂದಿಗಿನ ತಮ್ಮ ಒಡನಾಟವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾರೆ.


ಜೋಯಿಷ್​ ಇರಾನಿ ಇವರ ಹಿರಿಯ ಪುತ್ರಿ. 15 ವರ್ಷದವರಾಗಿರುವ ಇವರು ಹೈಸ್ಕೂಲ್​ ವಿದ್ಯಾರ್ಥಿನಿ. ಎಲ್ಲ ಹದಿಹರೆಯದ ಮಕ್ಕಳಂತೆ ಇವರದ್ದೂ ಸ್ವಲ್ಪ ಸಿಡುಕು ಸ್ವಭಾವ. ಅಮ್ಮ ತಮಗೆ ಏನಾದರೂ ಹೇಳಿದರೆ ಕೆಲವೊಮ್ಮೆ ಸಿಡುಕುತ್ತಾರೆ. ಇಲ್ಲವೇ ಮುನಿಸಿಕೊಳ್ಳುತ್ತಾರೆ. ಆಗ ಇವರ ತಲೆ ಮೊಟಕಬೇಕೆನಿಸಿದರೂ ತಡೆದುಕೊಂಡು, ನಕ್ಕು ಸುಮ್ಮನಾಗುವುದಾಗಿ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.


ತಮ್ಮ ಮಾತಿಗೆ ಹುಸಿಮುನಿಸು ತೋರುತ್ತಿರುವ ಪುತ್ರಿಯೊಂದಿಗೆ ತಾವು ಇರುವ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿ, ಈಕೆಗೆ ಹೊಡೆಯಬೇಕೆನಿಸಿದರೂ ತಡೆದುಕೊಂಡು, ನಕ್ಕು ಸುಮ್ಮನಾಗುತ್ತೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಅವರ ಈ ಪೋಸ್ಟ್​ ವೈರಲ್​ ಆಗಿದ್ದು, ಸಾಕಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಇದು ಎಲ್ಲ ತಾಯಂದಿರು ಅನುಭವಿಸುವ ಕಷ್ಟ ಎಂದು ಪ್ರಕ್ರಿಯೆಯಲ್ಲಿ ತಿಳಿಸಿದ್ದಾರೆ.