More

  ಎಸ್.ಎಂ. ಕೃಷ್ಣ ಸಾಧನೆ-ಸಿದ್ಧಿಗಳ ಪರಿಚಯ; ಕೃಷ್ಣಪಥ ಸಹಿತ ಆರು ಗ್ರಂಥಗಳ ಲೋಕಾರ್ಪಣೆ

  ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧೀಮಂತಿಕೆ, ದೂರದರ್ಶಿ ತ್ವ ನಾಯಕತ್ವದ ಬಹುಮುಖ್ಯ ಮೌಲ್ಯಗಳು. ದೇಶ ಹಾಗೂ ರಾಜ್ಯದ ಪ್ರಗತಿ ಜತೆಗೆ ಭವಿಷ್ಯ ರೂಪಿಸುವಲ್ಲಿಯೂ ನಾಯಕತ್ವ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟಿದ್ದಾರೆ.

  ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಕೃಷ್ಣಪಥ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎಂ.ಕೃಷ್ಣ ಅವರ ಸಾಧನೆ-ಸಿದ್ಧಿಗಳ ಪರಿಚಯ ಹಾಗೂ ‘ಸ್ಮೃತಿವಾಹಿನಿ’ ಸಹಿತ ಐದು ಆಕರ ಗ್ರಂಥಗಳನ್ನು ಲೋಕಾರ್ಪಣೆ ಮಾಡಿದ ಅವರು, ಪ್ರಜಾಪ್ರಭುತ್ವದ ಸಾಂಸ್ಕೃತಿಕ ನಾಯಕತ್ವ ಸದೃಢಗೊಳಿಸುವ ವಿಷಯದಲ್ಲಿ ಕೃಷ್ಣ ಅವರಂತಹ ನಾಯಕತ್ವದ ಅಗತ್ಯವಿದೆ ಎಂದರು.

  ಎಸ್​ಎಂಕೆ ಐದು ದಶಕಗಳ ಸಾರ್ಥಕ ಸಂಸದೀಯ ಬದುಕಿನ ನೆನಪು ‘ಕೃಷ್ಣಪಥ’ ಬಿಡುಗಡೆಗೊಳಿಸಿದ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್, ಸಹಜ ನಾಯಕತ್ವ, ಸೇವಾ ತತ್ಪರತೆ, ಚಾಣಾಕ್ಷತೆ, ಪ್ರಖರ ಚಿಂತನೆ, ಆಡಳಿತಾತ್ಮಕ ಕೌಶಲಗಳು ಕೃಷ್ಣ ಅವರಲ್ಲಿದ್ದ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಾ.ರಾಜ್ ಅಪಹರಣ, ಕಾವೇರಿ ಬಿಕ್ಕಟ್ಟು, ಕ್ಷಾಮದಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಹೇಳಿದರು.

  ಕವಿ ಡಾ.ಸಿದ್ಧಲಿಂಗಯ್ಯ ಮಾತನಾಡಿ, ಕೃಷ್ಣ ಸಿಎಂ ಆಗಿದ್ದಾಗ ಕುವೆಂಪು ರಚಿತ ಕವನಕ್ಕೆ ಅಧಿಕೃತ ನಾಡಗೀತೆ ಸ್ಥಾನಮಾನ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೀಟುಗಳಲ್ಲಿ ಶೇ.5 ಮೀಸಲು, ವಿಕಾಸಸೌಧ ನಿರ್ವಣ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದಲ್ಲಿ ಆಯೋಗ ರಚನೆ ಇತ್ಯಾದಿ ಮಹತ್ವದ ಸಾಧನೆಗಳಾಗಿವೆ ಎಂದು ಬಣ್ಣಿಸಿದರು. ಆಧ್ಮಾತಿಕ ಚಿಂತಕ ಪಾವಗಡ ಪ್ರಕಾಶರಾವ್ ಮಾತನಾಡಿ, ವಾಕ್, ವದನ ಮತ್ತು ವಿನಯ ಸಂಹಿತೆ ಎಸ್.ಎಂ.ಕೃಷ್ಣರಲ್ಲಿ ಹಾಸುಹೊಕ್ಕಾಗಿವೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಗ್ರಂಥಗಳನ್ನು ಪರಿಚಯಿಸಿದರು.

  ಹಣ ಬಲದ ಮೇಲೆ ಪ್ರಜಾಪ್ರಭುತ್ವ

  ರಾಜಕೀಯದ ಮೇಲೆ ಹಣದ ಪ್ರಭಾವ ಕಡಿಮೆಯಾಗದ ಹೊರತು ನೈಜ ಪ್ರಜಾಪ್ರಭುತ್ವ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಳವಳ ವ್ಯಕ್ತಪಡಿಸಿದರು. ಹಣ ಬಲದ ಮೇಲೆ ಪ್ರಜಾಪ್ರಭುತ್ವ ನಿಂತಿದ್ದು, ಮೌಲ್ಯಗಳು ಕಡಿಮೆಯಾಗಿದ್ದರತ್ತ ಯುವ ಜನತೆ ಗಮನಹರಿಸಿ, ಚಿಂತನೆ ನಡೆಸಬೇಕು.

  ಜವಬ್ದಾರಿ ಹೊತ್ತರೆ ಸುಲಭ ಪರಿಹಾರ ಸಾಧ್ಯವಿದೆ ಎಂದರು. ನಾನು ಓದುತ್ತಿದ್ದ ಕಾಲೇಜಿನ ಪ್ರಾಚಾರ್ಯ ನಾರಾಯಣ (ನ್ಯಾ.ಎಂ.ಎನ್.ವೆಂಕಟಾಚಲಯ್ಯ ಅವರ ತಂದೆ) ಸೇವೆಯಿಂದ ವಯೋ ನಿವೃತ್ತರಾದಾಗ ವಿದ್ಯಾರ್ಥಿಗಳೆಲ್ಲ ಸೇರಿ ನೀಡಿದ್ದ 64 ರೂ. ಕಾಣಿಕೆ ದುಬಾರಿಯದು ಎಂದು ಸ್ವೀಕರಿಸಲು ಹಿಂಜರಿದಿದ್ದರು ಎಂದ ಎಸ್​ಎಂಕೆ, ನನ್ನ ತಂದೆಯವರ ಪ್ರಭಾವ, ಮೌಲ್ಯಗಳು, ಮದ್ದೂರು-ಮಂಡ್ಯದ ಮಣ್ಣಿನ ಋಣ ಹಾಗೂ ಜನರಿಂದ ಲಭಿಸಿದ ಹಲವು ಅವಕಾಶಗಳು ರಾಜಕೀಯ ಜೀವನ, ಸಾಧನೆಗೆ ನೆರವಾದವು. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ರಾಜ್ ಅಪಹರಣದಂತಹ ಸವಾಲುಗಳನ್ನು ಎದೆಗುಂದದೆ ನಿಭಾಯಿಸುವುದಕ್ಕೂ ಸಾಧ್ಯವಾಯಿತು ಎಂದು ಸ್ಮರಿಸಿದರು.

  ರೂಪವತಿಯರ ಮುತ್ತಿಗೆ!

  ಎಸ್.ಎಂ.ಕೃಷ್ಣ ಅವರದು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಕ ವ್ಯಕ್ತಿತ್ವ. ಮಹಾರಾಜ ಕಾಲೇಜ್ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಗೆ ಸ್ಪರ್ಧಿಸಿ ಕೃಷ್ಣ ಸೋತಿದ್ದರು. ಆದರೆ, ಕಾಲೇಜ್​ನಲ್ಲಿ 101 ವಿದ್ಯಾರ್ಥಿನಿಯರಲ್ಲಿ 92 ವೋಟುಗಳು ಕೃಷ್ಣರಿಗೆ ಬಂದಿದ್ದವು. ಅವರ ಪುಸ್ತಕದಲ್ಲಿದ್ದ ಈ ಸಂಗತಿ ಉಲ್ಲೇಖಿಸಿದ ನ್ಯಾ.ಎಂ.ಎನ್.ವೆಂಕಟಾಚಲಯ್ಯ, ಈಗಲೂ ಕೃಷ್ಣ ಚುನಾವಣೆಗೆ ಸ್ಪರ್ಧಿಸಿದರೆ ಶೇ.90 ಮಹಿಳೆಯರು ಮತ ಚಲಾಯಿಸುವುದು ಗ್ಯಾರಂಟಿ ಎಂದು ನಗೆಚಟಾಕಿ ಹಾರಿಸಿ, ಸಭಾಂಗಣದಲ್ಲಿ ನಗೆಬುಗ್ಗೆ ಹರಿಸಿದರು.

  ಡಲ್ಲಾಸ್​ನಲ್ಲಿ ಓದುತ್ತಿದ್ದಾಗಲೂ 10 ಜನ ರೂಪವತಿ ಯರು ಮುತ್ತಿಕೊಂಡಿದ್ದರು. ನಾನೆಂದೂ ಲಕ್ಷ್ಮಣ ರೇಖೆ ದಾಟಲಿಲ್ಲವೆಂದು ಕೃಷ್ಣ ಒಂದು ಕಡೆ ಹೇಳಿದ್ದಾರೆ. ಆದರೆ, ಆ ರೂಪವತಿಯರು ಲಕ್ಷ್ಮಣ ರೇಖೆ ದಾಟ ಲಿಲ್ಲವೆಂದು ಕೃಷ್ಣ ಹೇಳಿಲ್ಲವೆಂದು ವೆಂಕಟಾಚಲಯ್ಯ ಮತ್ತೊಮ್ಮೆ ನೆರೆದ ಜನರಲ್ಲಿ ನಗೆಯುಕ್ಕಿಸಿದರು.

  ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಆಧುನಿಕ ಬೆಂಗಳೂರು ಕಟ್ಟಿದರು. ಐಟಿ-ಬಿಟಿಗೆ ಉತ್ತೇಜನ ನೀಡಿದ್ದರಿಂದಾಗಿ ಜಾಗತಿಕ ಮಟ್ಟದಲ್ಲಿ ಪ್ರಾಶಸ್ಱ ಗಳಿಸಿತು.

  | ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts