ಕ್ರಿಕೆಟ್ ಜಗತ್ತಿನೆದುರು ಆಸೀಸ್ ಕಣ್ಣೀರು!

ಜೊಹಾನ್ಸ್​ಬರ್ಗ್/ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಕ್ಲೀನ್​ಚಿಟ್ ಪಡೆದುಕೊಂಡಿದ್ದರೂ, ತಂಡದ ಕೋಚ್ ಸ್ಥಾನಕ್ಕೆ ಡರೇನ್ ಲೆಹ್ಮನ್ ರಾಜೀನಾಮೆ ನೀಡಿದ್ದಾರೆ. ಜೊಹಾನ್ಸ್​ಬರ್ಗ್​ನ ವಾಂಡರರ್ಸ್​ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯವೇ ಆಸೀಸ್ ಕೋಚ್ ಆಗಿ ತಮ್ಮ ಕೊನೆಯ ಪಂದ್ಯ ಎಂದು 48 ವರ್ಷದ ಲೆಹ್ಮನ್ ತಿಳಿಸಿದ್ದಾರೆ. ಇನ್ನೊಂದೆಡೆ ನಿಷೇಧ ಶಿಕ್ಷೆಗೆ ಗುರಿಯಾದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್, ಮಾಜಿ ಉಪನಾಯಕ ಡೇವಿಡ್ ವಾರ್ನರ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಗುರುವಾರ ತವರಿಗೆ ಮರಳಿದ್ದು, ದೇಶದ ಮುಂದೆ ಕ್ಷಮೆ ಯಾಚಿಸಿದ್ದಾರೆ. ಸ್ಮಿತ್ ಸಿಡ್ನಿ ಏರ್​ಪೋರ್ಟ್​ನಲ್ಲಿಯೇ ಸುದ್ದಿಗೋಷ್ಠಿ ನಡೆಸಿದರೆ, ಬ್ಯಾಂಕ್ರಾಫ್ಟ್ ಪರ್ತ್​ನಲ್ಲಿ ಮಾಧ್ಯಮಗಳ ಎದುರು ಮುಖಾಮುಖಿಯಾದರು. ಡೇವಿಡ್ ವಾರ್ನರ್ ಗುರುವಾರ ಸಂಜೆ ಸಿಡ್ನಿಗೆ ಆಗಮಿಸಿದ್ದು, ಅದಕ್ಕೂ ಮುನ್ನ ಟ್ವಿಟರ್​ನಲ್ಲಿ ದೇಶದ ಕ್ಷಮಯಾಚಿಸಿ ಸಂದೇಶ ಹಾಕಿದ್ದಾರೆ.

‘ಸ್ಮಿತ್ ಮಾಧ್ಯಮಗಳ ಎದುರು ಕಣ್ಣೀರಿಟ್ಟು ಕ್ಷಮೆಯಾಚಿಸಿದ ರೀತಿ ಭಾವುಕವಾಗಿತ್ತು. ಆಗಲೇ ನನ್ನ ನಿರ್ಧಾರ ಬದಲಿಸಿ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತೀರ್ವನಿಸಿದೆ’ ಎಂದು ಲೆಹ್ಮನ್ ಹೇಳಿದ್ದಾರೆ. ಜೊಹಾನ್ಸ್​ಬರ್ಗ್ ಟೆಸ್ಟ್​ಗೂ ಮುನ್ನ ನಡೆದ ಸುದ್ದಿಗೋಷ್ಠಿಗೆ ಭಾವುಕರಾಗಿಯೇ ಆಗಮಿಸಿದ ಲೆಹ್ಮನ್, ‘ಆಸೀಸ್ ತಂಡದ ಕೋಚ್ ಆಗಿ ಇದು ನನ್ನ ಕೊನೆಯ ಟೆಸ್ಟ್. ಸ್ಟೀವನ್ ಸ್ಮಿತ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮಾಧ್ಯಮಗಳ ಎದುರು ನಿಂತ ಕ್ಷಣದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಇಲ್ಲಿಗೆ ನಿಲ್ಲಬಾರದು ಮುಂದೆ ಸಾಗಬೇಕು. ಅದಕ್ಕಾಗಿ ಸರಿಯಾದ ನಿರ್ಧಾರ ಮಾಡುವುದು ಅಗತ್ಯವಾಗಿತ್ತು’ ಎಂದು ಹೇಳಿದ್ದಾರೆ.

ಸ್ಮಿತ್ ಕುರಿತಾಗಿ ನಿಜಕ್ಕೂ ದುಃಖ

ವಾಗುತ್ತಿದೆ. ಮಾಧ್ಯಮಗಳ ಎದುರು ಆತ ಅಳುತ್ತಿರುವುದನ್ನು ನೋಡಿದೆ. ಎಲ್ಲ ಆಟಗಾರರಿಗೂ ನೋವಾಗಿದೆ. ಹಿಂದೆಯೇ ಹೇಳಿದಂತೆ ಚೆಂಡು ವಿರೂಪದ ಕುರಿತಾಗಿ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2013ರಲ್ಲಿ ‘ಹೋಮ್ರ್ಕ್​ಗೇಟ್’ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಮಿಕಿ ಅರ್ಥರ್​ರನ್ನು ಕೋಚ್ ಹುದ್ದೆಯಿಂದ ವಜಾ ಮಾಡಿದ ಬಳಿಕ ಲೆಹ್ಮನ್ ನೇಮಕವಾಗಿದ್ದರು. ಲೆಹ್ಮನ್ ಅಡಿಯಲ್ಲಿ ಆಸೀಸ್ ಈವರೆಗೂ 57 ಟೆಸ್ಟ್ ಆಡಿದೆ (ವಾಂಡರರ್ಸ್​ನಲ್ಲಿ ಆಡಲಿರುವುದು 58ನೇ ಟೆಸ್ಟ್).

ಇದರಲ್ಲಿ 30 ಗೆಲುವು ಕಂಡಿದೆ. 2 ಆಶಸ್ ಸರಣಿಯ ಗೆಲುವುಗಳು ಇದರಲ್ಲಿ ಸೇರಿವೆ.

ಸ್ಮರಣೀಯ ದಿನದಂದೇ ಪದತ್ಯಾಗ!

ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ಡರೇನ್ ಲೆಹ್ಮನ್​ರ ಸ್ಮರಣೀಯ ಸಾಧನೆ 2015ರ ವಿಶ್ವಕಪ್ ಗೆಲುವು. 2015ರ ಮಾರ್ಚ್ 29 ರಂದು ತವರಿನ ಪ್ರೇಕ್ಷಕರ ಮುಂದೆ ಮೆಲ್ಬೋರ್ನ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಆಸ್ಟ್ರೇಲಿಯಾ 5ನೇ ಬಾರಿಗೆ ವಿಶ್ವಕಪ್ ಜಯಿಸಿತ್ತು. ಈ ಸಂಭ್ರಮಕ್ಕೆ ಮೂರು ವರ್ಷವಾದ ದಿನದಂದೇ ಲೆಹ್ಮನ್ ರಾಜೀನಾಮೆ ನೀಡಿದ್ದು ವಿಪರ್ಯಾಸ. 2019ರ ಆಶಸ್ ಸರಣಿ ಮುಗಿದ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿಯುವುದಾಗಿ ಲೆಹ್ಮನ್ ಈ ಹಿಂದೆ ತಿಳಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಸ್ಮಿತ್ ಹೇಳಿದ್ದು..

ನನ್ನೆಲ್ಲ ಸಹ ಆಟಗಾರರೆ, ವಿಶ್ವದೆಲ್ಲೆಡೆಯ ಅಭಿಮಾನಿಗಳೇ, ಆಕ್ರೋಶ ಹಾಗೂ ಬೇಸರದಲ್ಲಿರುವ ಆಸ್ಟ್ರೇಲಿಯಾದ ಪ್ರಜೆಗಳೆ ನನ್ನನ್ನು ಕ್ಷಮಿಸಿ. ಕೇಪ್​ಟೌನ್​ನಲ್ಲಿ ಆದ ಘಟನೆಗಳ ಎಲ್ಲ ವಿವರಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೊರತಂದಿದೆ. ಈ ರಾತ್ರಿ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿ ಸ್ಪಷ್ಟಪಡಿಸುವುದು ಏನೆಂದರೆ, ಈ ಪ್ರಕರಣದ ಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲಿದ್ದೇನೆ. ತೀರ್ಮಾನ ತೆಗೆದುಕೊಳ್ಳುವ ವೇಳೆ ನನ್ನಿಂದ ಗಂಭೀರ ತಪ್ಪಾಗಿದೆ. ಇದರ ಪರಿಣಾಮ ಈಗ ಅರ್ಥವಾಗಿದೆ. ಇದು ನನ್ನ ನಾಯಕತ್ವದ ವೈಫಲ್ಯ. ತಪು್ಪಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅದರಿಂದಾದ ಹಾನಿಯನ್ನು ಸರಿಪಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಿದ್ದೇನೆ. ಇದರಿಂದ ಒಂದು ಸಕಾರಾತ್ಮಕ ಅಂಶವನ್ನು ಹೇಳುವುದಾದರೆ.. ಎಲ್ಲರಿಗೂ ಇದು ಒಂದು ಪಾಠವಾಗಲಿ. ಬಹುಶಃ ಬದಲಾವಣೆಗೆ ನಾನು ಕಾರಣನಾಗುತ್ತೇನೆ ಎನ್ನುವ ನಂಬಿಕೆ ಇದೆ. ನನ್ನ ಜೀವನಪೂರ್ತಿ ಈ ಪ್ರಕರಣ ವಿಷಾದವಾಗಿ ಕಾಡಲಿದೆ ಎನ್ನುವುದು ಗೊತ್ತು. ನಾನೀಗ ದುಃಖದ ಮಡುವಿನಲ್ಲಿದ್ದೇನೆ. ಭವಿಷ್ಯದ ದಿನಗಳಲ್ಲಿ ನಿಮ್ಮೆಲ್ಲರ ಗೌರವವನ್ನು ಹಾಗೂ ಕ್ಷಮೆಯನ್ನು ಮತ್ತೆ ಪಡೆಯಲಿದ್ದೇನೆ ಎನ್ನುವ ವಿಶ್ವಾಸವಿದೆ. ದೇಶವನ್ನು ಪ್ರತಿನಿಧಿಸಿದ್ದು ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿದ್ದು ನನಗೆ ಹೆಮ್ಮೆಯ ವಿಷಯ. ಕ್ರಿಕೆಟ್ ವಿಶ್ವದ ಸರ್ವಶ್ರೇಷ್ಠ ಕ್ರೀಡೆ. ನನ್ನ ಜೀವನವೂ ಆಗಿತ್ತು. ಮತ್ತೊಮ್ಮೆ ಇದು ನನ್ನ ಜೀವನವಾಗಲಿದೆ. ನನ್ನನ್ನು ಎಲ್ಲರೂ ಕ್ಷಮಿಸಿಬಿಡಿ.

ಯುವ ಆಟಗಾರರಿಗೆ ಸ್ಮಿತ್ ಕಿವಿಮಾತು…

ನಾನು ಮೂರು ವಿಷಯ ಹೇಳಲು ಬಯಸುತ್ತೇನೆ. ಮೊದಲಿಗೆ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಕ್ರೀಡೆಯನ್ನು ನಾನು ಪ್ರೀತಿಸಿದೆ. ಕ್ರಿಕೆಟ್ ಪ್ರೀತಿ ಇರುವ ಮಕ್ಕಳಿಗೆ ಮನರಂಜನೆ ನೀಡುವುದನ್ನು ಇಷ್ಟಪಡುತ್ತಿದ್ದೆ. ಕ್ರಿಕೆಟ್ ಎನ್ನುವ ಕ್ರೀಡೆಯನ್ನು ಮಕ್ಕಳು ಹೆಚ್ಚೆಚ್ಚು ಆಡಬೇಕು ಎಂದು ಬಯಸಿದ್ದೆ. ಇನ್ನೆರಡು ವಿಷಯಗಳೆಂದರೆ, ಜೀವನದಲ್ಲಿ ಯಾವುದಾದರೂ ಪ್ರಶ್ನಾರ್ಥಕವಾದ ನಿರ್ಧಾರ ಮಾಡಬೇಕಾದ ಸಂದರ್ಭ ಬಂದಾಗ, ಇದರಿಂದ ಯಾರ ಮೇಲೆಲ್ಲಾ ಪರಿಣಾಮ ಬೀರುತ್ತದೆ ಎನ್ನುವುದನ್ನು ಯೋಚಿಸಿ. ಅದರಿಂದ ನಿಮ್ಮ ಪಾಲಕರ ಮೇಲೆ ಪರಿಣಾಮ ಬೀರುತ್ತದೆ. ನನ್ನ ತಂದೆ ಹೀಗೆ ನನ್ನ ಜತೆ ನಿಂತಿರುವುದನ್ನು ನೋಡಿದರೆ… ಸಂಕಟವಾಗುತ್ತದೆ. ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳು ಹಾಗೂ ಪ್ರಜೆಗಳಿಗೆ ನಾನು ನೀಡಿದ ನೋವಿಗಾಗಿ ಕ್ಷಮೆ ಕೇಳುತ್ತೇನೆ.

ಕಣ್ಣೀರಿಟ್ಟ ಸ್ಟೀವನ್

ಗುರುವಾರ ರಾತ್ರಿ ಸಿಡ್ನಿಗೆ ಆಗಮಿಸಿದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್, ವಿಮಾನ ನಿಲ್ದಾಣದಲ್ಲಿಯೇ ಸುದ್ದಿಗೋಷ್ಠಿ ನಡೆಸಿದರು. ಕೇವಲ 5 ನಿಮಿಷದ ಸುದ್ದಿಗೋಷ್ಠಿಯಲ್ಲಿ ಮೊದಲು ತಾವು ಬರೆದು ತಂದಿದ್ದ ಕ್ಷಮಾಪಣಾ ಪತ್ರವನ್ನು ಭಾವುಕರಾಗಿಯೇ ಸ್ಮಿತ್ ಓದಿದರು. ಆ ಬಳಿಕ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ಕಣ್ಣಲ್ಲಿ ನೀರು ತುಂಬಿಕೊಂಡೇ ಮಾತನಾಡುತ್ತಿದ್ದ ಸ್ಮಿತ್, ಪ್ರಕರಣ ತಮ್ಮ ಪಾಲಕರ ಮೇಲೆಯೂ ಪರಿಣಾಮ ಬೀರಿದೆ ಎಂದು ಹೇಳುವಾಗ ಬಿಕ್ಕಿ-ಬಿಕ್ಕಿ ಅತ್ತರು. ಸ್ಮಿತ್​ರ ಹಿಂದೆಯೇ ನಿಂತಿದ್ದ ಅವರ ತಂದೆ ಪೀಟರ್, ಮಗನ ಭುಜದ ಮೇಲೆ ಕೈಯಿಟ್ಟು ಸಮಾಧಾನ ಪಡಿಸಿದರು.

ಒಳ್ಳೆಯ ವ್ಯಕ್ತಿಗಳು ತಪು್ಪ ಮಾಡು ತ್ತಾರೆ. ನನ್ನ ತೀರ್ವನದಲ್ಲಾದ ಗಂಭೀರ ತಪು್ಪ ಇದಾಗಿದೆ. ಯಾರನ್ನೂ ಈ ಪ್ರಕರಣಕ್ಕೆ ಹೊಣೆ ಮಾಡುವುದಿಲ್ಲ. ಆಸ್ಟ್ರೇಲಿಯಾ ತಂಡದ ನಾಯಕನಾಗಿ ನನ್ನ ಗಮನದಲ್ಲಿಯೇ ಇದು ನಡೆದಿದೆ. ಕೇಪ್ ಟೌನ್​ನಲ್ಲಿ ಕಳೆದ ಶನಿವಾರ ನಡೆದ ಎಲ್ಲ ಘಟನೆಗಳಿಗೆ ನಾನೇ ಸಂಪೂರ್ಣ ಹೊಣೆ. | ಸ್ಟೀವನ್ ಸ್ಮಿತ್

 

ಸ್ಯಾಂಡ್​ಪೇಪರ್​ಗೇಟ್ ಪ್ರಕರಣದ ಸೈಡ್​ಎಫೆಕ್ಟ್

  • ಸಾಮರ್​ಸೆಟ್ ಕೌಂಟಿ ಕ್ಲಬ್ ಹೊಸ ಋತು ವಿಗಾಗಿ ಬ್ಯಾಂಕ್ರಾಫ್ಟ್ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿದೆ.
  • ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಪ್ರಾಯೋಜಕತ್ವ ಒಪ್ಪಂದ ರದ್ದು ಮಾಡಿದ ಮೆಗ್ಲೆನ್. 2017ರ ಆಗಸ್ಟ್​ನಲ್ಲಿ ಮೆಗ್ಲೆನ್ ಸಂಸ್ಥೆ, 100 ಕೋಟಿ ರೂ. ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು.
  • ತಮ್ಮ ಪ್ರಮಾದಕ್ಕಾಗಿ ಸ್ಮಿತ್​ಗೆ ಶಿಕ್ಷೆಯಾಗಿದೆ. ಆದರೆ, ಮಾಧ್ಯಮಗಳ ಮುಂದೆ ಆತ ಕಣ್ಣೀರಿಡುತ್ತಿರುವುದನ್ನು ನೋಡಿದರೆ, ಅವರು ಮುಂದೆಂದೂ ತಂಡದ ನಾಯಕರಾಗಲು ಸಾಧ್ಯವಿಲ್ಲ. ದುರ್ಬಲ ವ್ಯಕ್ತಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಆಸೀಸ್ ಮಾಜಿ ಪ್ರಧಾನಿ ಜಾನ್ ಹೊವಾರ್ಡ್ ಹೇಳಿದ್ದಾರೆ.
  • ಚೆಂಡು ವಿರೂಪ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ವ್ಯವಸ್ಥಾಪಕ ಜೇಮ್್ಸ ಸುದರ್​ಲ್ಯಾಂಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಸಿಎ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *