ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದ ಅತಿ ಕಿರಿಯ, ಹಿರಿಯ ಸಚಿವರು ಯಾರು ಗೊತ್ತಾ?

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಎರಡನೇ ಭಾರಿಗೆ ಸರ್ಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಸರಾಸರಿ 60 ವರ್ಷದೊಳಗಿನವರಲ್ಲಿ 43 ವರ್ಷ ವಯಸ್ಸಿನ ಸ್ಮೃತಿ ಇರಾನಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ.

ಅನುರಾಗ್‌ ಸಿಂಗ್‌ ಠಾಕೂರ್‌ 44, ಮನ್​ಸುಖ್​ ಮಾಂಡವಿಯಾ ಮತ್ತು ಸಂಜೀವ್‌ ಕುಮಾರ್‌ ಬಾಲಾಯನ್‌ ಇಬ್ಬರು 46 ವರ್ಷ ಮತ್ತು ಕಿರಣ್‌ ರಿಜಿಜು ಅವರು 47 ವರ್ಷದವರಾಗಿದ್ದು, ಸಂಪುಟದಲ್ಲಿ ಕಿರಿಯರಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಮೊದಲ ಬಾರಿಗೆ ಸಚಿವರಾಗುತ್ತಿರುವ ರಾಮೇಶ್ವರ್​ ತೇಲಿ ಮತ್ತು ದೇಬಶ್ರಿ ಚೌಧರಿ ಅವರು 48 ವರ್ಷದವರಾಗಿದ್ದಾರೆ. ಬಿಜೆಪಿಯ ಮೈತ್ರಿ ಪಕ್ಷ ಲೋಕ ಜನಶಕ್ತಿಯ ನಾಯಕ 73 ವರ್ಷದ ರಾಮ್​ ವಿಲಾಸ್​ ಪಾಸ್ವಾನ್​ ಅವರು ಅತ್ಯಂತ ಹಿರಿಯರಾಗಿದ್ದಾರೆ. ಥಾವರ್​ ಚಂದ್​ ಗೆಹ್ಲೋಟ್​ ಮತ್ತು ಸಂತೋಷ್​ ಕುಮಾರ್​ ಗಂಗ್ವಾರ್​ ಇಬ್ಬರು 71 ವರ್ಷ ವಯಸ್ಸಿನವರಾಗಿದ್ದಾರೆ.

ಈ ಹಿಂದಿನ ಮೋದಿ ಸರ್ಕಾರದಲ್ಲಿ 65 ಮೀರಿದ ಸಚಿವರನ್ನು ಹೊಂದಿದ್ದರಿಂದಾಗಿ ಈ ಬಾರಿ ಸಚಿವ ಸಂಪುಟ ಸದಸ್ಯರ ಸರಾಸರಿ ವಯೋಮಿತಿಯನ್ನು ಇಳಿಸಲಾಗಿದೆ.

ಈ ಮಧ್ಯೆ ಆರೋಗ್ಯ ಸಮಸ್ಯೆಯಿಂದಾಗಿ 66 ವರ್ಷದ ಅರುಣ್‌ ಜೈಟ್ಲಿ ಅವರು ಸಂಪುಟದಿಂದ ಹೊರಗುಳಿದಿದ್ದು, 67 ವರ್ಷದ ಸುಷ್ಮಾ ಸ್ವರಾಜ್‌ ಅವರನ್ನು ಕೂಡ ಆರೋಗ್ಯ ಸಮಸ್ಯೆಯಿಂದಾಗಿ ಸಂಪುಟದಿಂದ ಹೊರಗುಳಿಸಲಾಗಿದೆ.

ಇದರೊಂದಿಗೆ ಶಿವಸೇನೆಯ ಹಿರಿಯ ನಾಯಕ ಅನಂತ್‌ ಗೀತೆ(68), ಹರಿಯಾಣದ ಹಿರಿಯ ನಾಯಕ ಚೌಧರಿ ಬೀರೆಂದರ್‌ ಸಿಂಗ್‌(73), ಆರು ಬಾರಿ ಸಂಸದರಾಗಿದ್ದ ರಾಧಾಮೋಹನ್‌ ಸಿಂಗ್‌(70), ಮಾಜಿ ಕೇಂದ್ರ ಪ್ರವಾಸೋದ್ಯಮ ಸಚಿವ ಆಲ್ಫೋನ್ಸ್‌ ಕಣ್ಣಂತನಮ್‌(65), ದೆಹಲಿ ಬಿಜೆಪಿ ನಾಯಕ ವಿಜಯ್‌ ಗೋಯಲ್‌(65), ಪಾನ್‌ ರಾಧಾಕೃಷ್ಣನ್‌(67), ಎಸ್‌ ಎಸ್‌ ಆಹ್ಲುವಾಲಿಯ(67), ಕರ್ನಾಟಕದ ರಮೇಶ್‌ ಜಿಗಜಿಣಗಿ(66) ಸೇರಿದಂತೆ ಇನ್ನು ಹಲವರು ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಂಚಿತರಾಗಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *