ನವದೆಹಲಿ: ಸತತ 2ನೇ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿ ತವರಿಗೆ ಮರಳಿದ ಭಾರತ ಹಾಕಿ ತಂಡಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಅದ್ದೂರಿ ಸ್ವಾಗತ ನೀಡಲಾಯಿತು. ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಸೇರಿ ಪುರುಷರ ಹಾಕಿ ತಂಡದ ಕೆಲ ಸದಸ್ಯರು ನವದೆಹಲಿಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ತಂಡದ ಸದಸ್ಯರನ್ನು ಹೂಮಾಲೆ ಮತ್ತು ಸಂಗೀತ ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು. ಬಳಿಕ ರಾಷ್ಟ್ರೀಯ ಕ್ರೀಡಾಂಗಣದ ಎದುರು ಹಾಕಿ ದಂತಕಥೆ ಮೇಜರ್ ಧ್ಯಾನ್‌ಚಂದ್ ಪ್ರತಿಮೆಗೆ ಆಟಗಾರರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ನಂತರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಕೇಂದ್ರ ಸರ್ಕಾರದ ವತಿಯಿಂದ ತಂಡಕ್ಕೆ 2.40 ಕೋಟಿ ರೂಪಾಯಿ ಬಹುಮಾನ ವಿತರಿಸಿದರು.
ಇದೇ ವೇಳೆ ಆಟಗಾರರ ಹಸ್ತಾಕ್ಷರವುಳ್ಳ ಜೆರ್ಸಿಯನ್ನು ಸಚಿವರಿಗೆ ಉಡುಗೊರೆಯಾಗಿ ನೀಡಲಾಯಿತು. ಈ ನಡುವೆ, 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ವರೆಗೂ ಹರ್ಮಾನ್‌ಪ್ರೀತ್ ಸಿಂಗ್ ಅವರೇ ಭಾರತ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಬೋಲಾನಾಥ್ ಸಿಂಗ್ ಖಾತ್ರಿಪಡಿಸಿದರು. ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭಕ್ಕೆ ಧ್ವಜಧಾರಿಯಾಗಿರುವ ಗೋಲು ಕೀಪರ್ ಶ್ರೀಜೇಶ್ ಪ್ಯಾರಿಸ್‌ನಲ್ಲೇ ಉಳಿದುಕೊಂಡಿದ್ದಾರೆ.
ಹೃದಯ ಸ್ಪರ್ಶಿ ಸ್ವಾಗತದ ಬಳಿಕ ಮಾತನಾಡಿದ ಹರ್ಮಾನ್‌ಪ್ರೀತ್,ನಮಗೆ ನೀಡಬೇಕಾದ ಬೆಂಬಲದ ಜತೆಗೆ ನಮ್ಮಅವಶ್ಯಕತೆಗಳನ್ನು ಪೂರೈಸಲಾಗಿದೆ. ಇದಕ್ಕೆ ನಿಜವಾಗಿಯೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಮಗೆ ಹೆಮ್ಮೆಯೊಂದಿಗೆ ಸಂತೋಷವನ್ನುಂಡು ಮಾಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಸಾಧನೆ ಹಾಕಿ ಕ್ರೀಡೆಗೆ ದೊಡ್ಡ ಸಾಧನೆಯಾಗಿದೆ. ಹಾಕಿ ಮೇಲೆ ಜನರು ತೋರುತ್ತಿರುವ ಪ್ರೀತಿ, ನಮ್ಮ ಜವಾಬ್ದಾರಿಯನ್ನು ದ್ವಿಗುಣಗೊಳಿಸುತ್ತದೆ. ನಾವು ಮೈದಾನಕ್ಕೆ ಬಂದಾಗಲೆಲ್ಲಾ ನಾವು ಪದಕದೊಂದಿಗೆ ಮರಳಲು ಪ್ರಯತ್ನಿಸುತ್ತೇವೆ. ಭಾರತೀಯ ಅಭಿಮಾನಿಗಳು ಕಂಚಿನ ಪದಕವನ್ನು ಸ್ವೀಕರಿಸಿದ ರೀತಿ ಹಾಗೂ ಆಟಗಾರರನ್ನು ಅಭಿನಂದಿಸುತ್ತಿರುವುದು ವಿವರಿಸಲಾಗದ ಭಾವನೆ ಎಂದು ಸಂಭ್ರಮ ಹಂಚಿಕೊಂಡರು. 1972ರ ನಂತರ ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಕ್ರೀಡಾ ಸಚಿವರ ಅಭಿನಂದನೆ: ತವರಿಗೆ ಮರಳಿದ ಭಾರತ ಹಾಕಿ ತಂಡದ ಆಟಗಾರರನ್ನು ಪರಿಶ್ರಮವನ್ನು ಶ್ಲಾಘಿಸಿದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು, ನೀವು ಭಾರತಕ್ಕೆ ಅಪಾರ ವೈಭವವನ್ನು ತಂದಿದ್ದೀರಿ. ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಅವರ ಕನಸುಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿದ್ದೀರಿ. ನಿಮ್ಮ ಸಾಧನೆಗೆ ಇಡೀ ರಾಷ್ಟ್ರ ಹೆಮ್ಮೆ ಪಡುತ್ತಿದೆ. ಈ ಗೆಲುವು, ನಿಮ್ಮ ಪರಿಶ್ರಮ ತಂಡದ ಕೆಲಸ ಮತ್ತು ಅದಮ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಭಾರತದಲ್ಲಿ ಹಾಕಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದರ ಜತೆಗೆ ದೇಶದ ಕ್ರೀಡಾ ಪ್ರತಿಭೆಯನ್ನು ಪೋಷಿಸಲು ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸರ್ಕಾರ ಬದ್ಧ ಎಂಬುದನ್ನು ಪುನರುಚ್ಚರಿಸಿದರು.