ಶಿವಕುಮಾರ ಶ್ರೀಗಳ ಮೊಗದಲ್ಲಿ ನಗು

ತುಮಕೂರು: ಸಿದ್ಧಗಂಗೆಯ ಡಾ.ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡಿದೆ. 4 ಗಂಟೆಗೂ ಹೆಚ್ಚು ಕಾಲ ಸಹಜ ಉಸಿರಾಟವಾಡಿದ ಶ್ರೀಗಳ ಮೊಗದಲ್ಲಿ ನಗು ಕಾಣಿಸಿದೆ. 3-4 ದಿನಗಳಿಂದ ಆವರಿಸಿದ್ದ ಕಾಮೋಡ ನಿಧಾನವಾಗಿ ಚದುರುತ್ತಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಪರಮೇಶ್ ತಿಳಿಸಿದರು.

ಶನಿವಾರ ಬೆಳಗ್ಗೆ 6ರಿಂದ 10 ಗಂಟೆವರೆಗೆ ಸಹಜ ಉಸಿರಾಟ ನಡೆಸಿದ್ದಾರೆ. ವೆಂಟಿಲೇಟರ್ ನೆರವಿಲ್ಲದೆ ಉಸಿರಾಡುವುದು ಉತ್ತಮ ಬೆಳವಣಿಗೆ ಎನಿಸಿದೆ. ಶ್ರೀಗಳ ಆರೋಗ್ಯ ಚೇತರಿಕೆ ವೈದ್ಯರಿಗೂ ವಿಸ್ಮಯಕಾರಿ. ಬೆಳಗ್ಗೆ 5ಕ್ಕೆ ಶ್ರೀಗಳ ರಕ್ತ ಪರೀಕ್ಷೆ ಮಾಡಲಾಗಿದ್ದು, ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆಲ್ಬುಮಿನ್ ಅಂಶ ಶೇ.1 ಏರಿಕೆಯಾಗಿದ್ದು, ನಿರೀಕ್ಷೆಯಷ್ಟು ಏರಿಕೆಯಾಗುತ್ತಿಲ್ಲ ಎಂದರು. ಶ್ರೀಗಳ ಪಕ್ಕದಲ್ಲಿ ಕುಳಿತು ಸಿದ್ದಲಿಂಗ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಶ್ರೀಗಳ ಪಾದ ಸ್ಪರ್ಶಿಸಿ ಸಿದ್ದಲಿಂಗಶ್ರೀ ನಮಸ್ಕಾರ ಮಾಡಿದಾಗ ಕಣ್ಣು ತೆರೆದು ನೋಡಿ, ನಕ್ಕಿರುವುದು ಸಮಾಧಾನವೆನಿಸಿದೆ.

ಮಠದ ಭಕ್ತರು, ಮಕ್ಕಳು, ಸಿಬ್ಬಂದಿ ಶನಿವಾರ ದರ್ಶನಕ್ಕೆ ತೆರಳಿದ್ದ ವೇಳೆ ಶ್ರೀಗಳು ಕಣ್ಣು ಬಿಟ್ಟು ನೋಡುತ್ತಿದ್ದುದು, ಸಮಾಧಾನದ ಜತೆಗೆ ಸಂತಸಕ್ಕೆ ಕಾರಣವಾಗಿದೆ. ಶ್ರೀಗಳಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿ ಯಾದಗಿರಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಸಂಘಟನೆ ಕಾರ್ಯಕರ್ತರು ರಕ್ತದಿಂದ ಬರೆದ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಸಲ್ಲಿಸಿದರು.