ಸಮಸ್ಯೆಯ ಸುಳಿಯಲ್ಲಿ ವಿದ್ಯಾರ್ಥಿಗಳು

ಮಂಜುನಾಥ ಸಾಯೀಮನೆ ಶಿರಸಿ

ತಾಲೂಕಿನ 6 ಪ್ರೌಢಶಾಲೆಗಳಿಗೆ ಈ ವರ್ಷದಿಂದ 8ನೇ ತರಗತಿಗೆ ಇಂಗ್ಲಿಷ್ ಮಾಧ್ಯಮಲ್ಲಿ ಶಿಕ್ಷಣ ನೀಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅನುಮತಿ ಪ್ರಕಟಿಸಲು ವಿಳಂಬವಾದ ಕಾರಣ ಇಂಗ್ಲಿಷ್ ಮಾಧ್ಯಮದ ಪುಸ್ತಕ ಪೂರೈಕೆಯಾಗದೇ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ತಾಲೂಕಿನ ಜಡ್ಡಿಗದ್ದೆ, ಇಸಳೂರು, ನಗರದ ಸರ್ಕಾರಿ ಉರ್ದು ಶಾಲೆ, ಬನವಾಸಿಯ ಉರ್ದು ಶಾಲೆ, ಬೀಳೂರು ಪ್ರೌಢ ಶಾಲೆ ಹಾಗೂ ಬಂಡಲ ಪ್ರೌಢ ಶಾಲೆಗೆ ಈ ವರ್ಷ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸಲು ಅನುಮತಿ ಲಭಿಸಿದೆ. ವಾಸ್ತವವಾಗಿ ಜೂನ್ ತಿಂಗಳಿನಲ್ಲಿ ಸರ್ಕಾರ ಈ ಅನುಮತಿ ಪ್ರಕಟಿಸಬೇಕಿತ್ತು. ಆದರೆ, ಆದೇಶ ಪ್ರತಿ ಎಲ್ಲ ಶಾಲೆಗಳ ಕೈ ಸೇರಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ ! ಅಷ್ಟರೊಳಗಾಗಿ ಈ ಶಾಲೆಗಳಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತೃ ಭಾಷೆ ಮಾಧ್ಯಮದಲ್ಲಿ ಶಿಕ್ಷಣ ಆರಂಭಿಸಲಾಗಿದೆ. ಅನುಮತಿ ಪತ್ರ ಕೈ ಸೇರುವ ವೇಳೆ ಪುಸ್ತಕಕ್ಕಾಗಿ ಬೇಡಿಕೆ ಸಲ್ಲಿಸುವ ಅವಧಿ ಮುಕ್ತಾಯಗೊಂಡಿತ್ತಲ್ಲದೆ, ಪುಸ್ತಕಗಳ ಪೂರೈಕೆ ಆರಂಭಗೊಂಡಿತ್ತು. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದ ಪುಸ್ತಕ ಲಭಿಸಿಲ್ಲ. ಬೇರೆ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಂದ ಕಳೆದ ವರ್ಷದ ಪುಸ್ತಕವನ್ನು ಕೆಲ ಶಾಲೆಗಳಲ್ಲಿ ನೀಡಲಾಗಿದ್ದರೆ, ಇನ್ನು ಕೆಲವೆಡೆ ಝುರಾಕ್ಸ್ ಮಾಡಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.

ಜಡ್ಡಿಗದ್ದೆ ಪ್ರೌಢಶಾಲೆಯ 15, ಇಸಳೂರು ಪ್ರೌಢಶಾಲೆಯ 14, ಸರ್ಕಾರಿ ಉರ್ದು ಪ್ರೌಢಶಾಲೆಯ 25, ಬನವಾಸಿಯ ಉರ್ದು ಪ್ರೌಢಶಾಲೆಯ 20, ಬೀಳೂರು ಪ್ರೌಢಶಾಲೆಯ 10 ಮತ್ತು ಬಂಡಲ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸಿದ್ದಾರೆ. ಹೆಚ್ಚುವರಿ ಪುಸ್ತಕಗಳು ಎಲ್ಲಿ, ಎಷ್ಟಿವೆ ಎಂಬುದನ್ನು ಶಿಕ್ಷಣ ಇಲಾಖೆ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸುತ್ತಿದೆ. ಕೊರತೆಯಿರುವ ಶಾಲೆಗೆ ಪುಸ್ತಕ ತರಿಸಿಕೊಳ್ಳಲು ಅವಕಾಶವಿದೆ. ಆದರೆ, 8ನೇ ತರಗತಿಯ ಇಂಗ್ಲಿಷ್ ಮಾಧ್ಯಮದ ಪುಸ್ತಕಗಳು ಕಲಬುರಗಿ, ಕೋಲಾರದಂತಹ ದೂರದ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ ಇದ್ದು, ಅಲ್ಲಿಂದ ತರಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಈಗ ಒಟ್ಟು 84 ಸೆಟ್ ಇಂಗ್ಲಿಷ್ ಮಾಧ್ಯಮದ ಪುಸ್ತಕಗಳ ಬೇಡಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸಲ್ಲಿಸಿದ್ದೇವೆ ಎನ್ನುತ್ತಿದ್ದಾರೆ ಅಧಿಕಾರಿಗಳು.

ಪ್ರಾಥಮಿಕ ಶಾಲೆಗೂ ಪುಸ್ತಕದ ಸಮಸ್ಯೆ !: ತಾಲೂಕಿನ ಪ್ರಾಥಮಿಕ ಶಾಲೆಗಳಿಗೂ ಅಗತ್ಯ ಪ್ರಮಾಣದ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. 151656 ಉಚಿತ ವಿತರಣೆ ಪುಸ್ತಕಗಳಲ್ಲಿ ಇನ್ನೂ 5287 ಪುಸ್ತಕಗಳು ಬರಬೇಕಿದೆ. ಖಾಸಗಿ ಶಾಲೆಗಳಿಗೆ ಪೂರೈಸುವ ಮಾರಾಟದ ಪುಸ್ತಕಗಳು 4127 ಪೂರೈಕೆ ಆಗಬೇಕಿತ್ತಾದರೂ ಇನ್ನೂ 1648 ಪುಸ್ತಕಗಳು ಬರಬೇಕಾಗಿವೆ !

1ನೇ ತರಗತಿ ನಲಿಕಲಿ ವಿಭಾಗದ ಉರ್ದು, ಗಣಿತ, ಪರಿಸರ ಅಧ್ಯಯನ ವಿಷಯಗಳ ತಲಾ 179 ಪುಸ್ತಕಗಳು, 3ನೇ ತರಗತಿಯ ಉರ್ದು ರೀಡರ್, ಗಣಿತ 1 ಮತ್ತು 2 ತಲಾ 208 ಪುಸ್ತಕಗಳು, 4ನೇ ತರಗತಿಯ ಉರ್ದು 208, 5ನೇ ತರಗತಿಯ ಗಣಿತ 187, 6ನೇ ತರಗತಿಯ ಉರ್ದು ಮಾಧ್ಯಮದ ಗಣಿತ 1 ಮತ್ತು 2ರ ತಲಾ 207 ಪುಸ್ತಕಗಳು, 7ನೇ ತರಗತಿಯ ಇಂಗ್ಲಿಷ್ ತೃತೀಯ ಭಾಷೆ 209 ಪುಸ್ತಕಗಳು, ಉರ್ದು ಮಾಧ್ಯಮದ ವಿಜ್ಞಾನ 193 ಪುಸ್ತಕಗಳು, 8ನೇ ತರಗತಿಯ ಸಂಸ್ಕೃತ 138 ಪುಸ್ತಕಗಳು, 9ನೇ ತರಗತಿಯ ಉರ್ದು ಮಾಧ್ಯಮ ಸಮಾಜ ವಿಜ್ಞಾನ 137, ಸಂಸ್ಕೃತ 176, 10 ನೇ ತರಗತಿಯ 137 ಸಂಸ್ಕೃತ ಪುಸ್ತಕಗಳು ಇನ್ನೂ ಬರಬೇಕಾಗಿದೆ. ಮುಖ್ಯವಾಗಿ ಸರ್ಕಾರಿ ಪ್ರೆಸ್​ನಲ್ಲಿ ಸಿದ್ಧಗೊಳ್ಳಬೇಕಿದ್ದ ಪುಸ್ತಕಗಳೇ ಇನ್ನೂ ಬರಬೇಕಿವೆ!

ಬರಬೇಕಿರುವ ಪುಸ್ತಕಗಳ ಬಗೆಗೆ ಶಿಕ್ಷಣ ಇಲಾಖೆಗೆ ನಿರಂತರ ಸಂರ್ಪಸುತ್ತಿದ್ದೇವೆ. ಮುಂದಿನ ವಾರ ಎಲ್ಲ ಪುಸ್ತಕಗಳೂ ಬರುವ ಸಾಧ್ಯತೆ ಇದೆ. ——ಸದಾನಂದ ಸ್ವಾಮಿ,  ಕ್ಷೇತ್ರ ಶಿಕ್ಷಣಾಧಿಕಾರಿ ಶಿರಸಿ