ಸ್ಮಾರ್ಟ್‌ಫೋನ್ ಕದಿಯುತ್ತಿದ್ದ ಸ್ಮಾರ್ಟ್‌ಗಳ್ಳರ ಬಂಧನ

ಬೆಳಗಾವಿ/ಕಟಕೋಳ: ಜಾತ್ರೆ, ಸಂತೆಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡುತ್ತಿದ್ದ ಮೂವರು ಅಂತಾರಾಜ್ಯ ಮೊಬೈಲ್ ಕಳ್ಳರನ್ನು ಬುಧವಾರ ಕಟಕೋಳ ಠಾಣೆ ಪೊಲೀಸರು ಬಂಧಿಸಿ 10.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 210 ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.

ತೆಲಂಗಾಣ ರಾಜ್ಯದ ಹೈದರಾಬಾದ ಮೂಲದ ಲಿಂಗಂಪಲ್ಲಿ ಚಂದ್ರಾ ನಗರದ ಸಾಯಿರಾಮ ಶ್ರೀನಿವಾಸ ಪಾಸ್ಪುಲೇಟಿ (22), ಕಿರಣ ರಾಜ ಆಂಜನೇಯಲು ಪಾಸ್ಪುಲೇಟಿ (24), ಶ್ರೀಕಾಂತ ರಾಜ ಆಂಜನೇಯಲು ಪಾಸ್ಪುಲೇಟಿ (22) ಬಂಧಿತರು. ಎರಡು ವರ್ಷಗಳಿಂದ ಬಂಧಿತರು ರಾಮದುರ್ಗ ತಾಲೂಕಿನ ಕೆ.ಚಂದರಗಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಜಾತ್ರೆ, ಸಂತೆ ನಡೆಯುವ ಪ್ರದೇಶಕ್ಕೆ ತೆರಳಿ ಹೆಚ್ಚಿನ ಬೆಲೆಯ ಅಂದರೆ 10 ರಿಂದ 20 ಸಾವಿರ ರೂ. ಮೌಲ್ಯದ ಮೊಬೈಲ್ ಕಳವು ಮಾಡುತ್ತಿದ್ದರು.

ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಶಿವಾನಂದ ಬಸಪ್ಪ ಅಂಗಡಿ ಎಂಬುವವರು ಮೊಬೈಲ್ ಕಳ್ಳತನವಾಗಿರುವ ಕುರಿತು ಅ.9ರಂದು ಕಟಕೋಳ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡಿದ್ದ ಪಿಎಸ್‌ಐ ಎಸ್.ಎನ್.ನಾಯಕ ನೇತೃತ್ವದ ತನಿಖಾ ತಂಡ ಮೊಬೈಲ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರು ಹಲವು ತಿಂಗಳುಗಳಿಂದ ನೆರೆಯ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆ, ಸಂತೆ ಸೇರಿ ಇನ್ನಿತರ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಮೊಬೈಲ್ ಕಳವು ಮಾಡಿ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದ್ದು, ಮೊಬೈಲ್ ಕಳ್ಳರ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದ್ದು ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೇದೆ ಕಾರ್ಯಾಚರಣೆ

ಅ.10ರಂದು ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಬಳಿ ಬಂಧಿತ ಮೂವರು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಅದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಶಂಕಾಸ್ಪದವಾಗಿ ಮಾತನಾಡಿದ್ದಾರೆ. ಬಳಿಕ ಠಾಣೆಗೆ ಕರೆದುಕೊಂಡು ಬಂದು ಬ್ಯಾಗ್ ಪರಿಶೀಲನೆ ನಡೆಸಿದಾಗ ವಿವಿಧ ಕಂಪನಿಗಳ ಸ್ಮಾರ್ಟ್ ಫೋನ್ ಸಿಕ್ಕಿವೆ.ಈ ಮೊಬೈಲ್‌ಗಳ ಯಾವುದೇ ಖರಿದಿ ಬಿಲ್ ಬಂಧಿತರ ಬಳಿ ಇರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಜಾತ್ರೆ, ಸಂತೆಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿರುವ ಬಗ್ಗೆ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
10ಮಂಜು2,2ಎ:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಗಳನ್ನು ಮಾಲು ಸಮೇತ ಪೊಲೀಸರು ಬಂಧಿಸಿದ್ದಾರೆ.