More

    ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಐತಿಹಾಸಿಕ ಸ್ಥಳ ಅಭಿವೃದ್ಧಿ ಮಾಡಿ

    ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಪುರಾತನ ಮತ್ತು ಐತಿಹಾಸಿಕ ಸ್ಥಳಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಿ. ಅವಶ್ಯವಿದ್ದಲ್ಲಿ ವಿಶೇಷ ಸಮಿತಿ ರಚನೆ ಮಾಡುವುದು ಸೂಕ್ತ ಎಂದು ಅಧಿಕಾರಿಗಳಿಗೆ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸೂಚಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆಯ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪುರಾತನ ಸ್ಥಳಗಳ ಸಂರಕ್ಷಣೆ, ಅಭಿವೃದ್ಧಿ ಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ನಗರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದರು.

    ಬೀದಿ ನಾಯಿಗಳಿಗೆ ಮರುವಸತಿ ಕೇಂದ್ರ: ಮಕ್ಕಳ ಮೇಲೆ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಬೀದಿ ಹಸುಗಳಿಗೆ ಮರುವಸತಿ ಕೇಂದ್ರ ನಿರ್ಮಿಸಿರುವ ಮಾದರಿಯಲ್ಲಿಯೇ ಬೀದಿ ನಾಯಿಗಳಿಗೂ ಮರುವಸತಿ ಕೇಂದ್ರ ಸ್ಥಾಪಿಸುವುದು ಅವಶ್ಯಕವಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ಟ್ರಾಮಾ ಸೆಂಟರ್ ಆರಂಭಿಸುವ ಮುನ್ನ ಅದರ ಸಾಧಕ-ಬಾಧಕ ಬಗ್ಗೆ ಪರಿಶೀಲನೆ ನಡೆಸಿ ಎಂದರು.

    ಕಳಪೆ ಕಾಮಗಾರಿ ಆರೋಪ: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳು ಗುಣಮಟ್ಟವಾಗಿಲ್ಲ. ಕಳಪೆ ಮರಳು ಇತರ ವಸ್ತುಗಳ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಹಾಗಾಗಿ ಖಾಸಗಿ ಗುಣಮಟ್ಟ ನಿಯಂತ್ರಣ ಸಮಿತಿ ರಚನೆ ಮಾಡಿ ಎಂದು ಸಲಹೆ ನೀಡಿದರು.

    ಖುದ್ದು ಸ್ಥಳ ಪರಿಶೀಲಿಸಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳುವ ಮುನ್ನ ಪಾಲಿಕೆ, ಲೋಕೋಪಯೋಗಿ, ಜಿಲ್ಲಾಡಳಿತ, ಸ್ಮಾರ್ಟ್‌ಸಿಟಿ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಡಿಸಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಇದ್ದರು.

    14 ಕಾಮಗಾರಿಗಳ ಟೆಂಡರ್ ಬಾಕಿ

    ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ 64 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಅಡಿಯಲ್ಲಿ 60 ಬಸ್‌ಗಳಿಗೆ ಜಿಪಿಎಸ್, 8 ಟ್ರಾಫಿಕ್ ಸಿಗ್ನಲ್‌ಗಳಿಗೆ ಸಿಸಿ ಕ್ಯಾಮರಾ, 65 ಆಂಬುಲೆನ್ಸ್ ಗಳಿಗೆ ಜಿಪಿಎಸ್, 46 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. 60 ಕೋಟಿ ರೂ. ವೆಚ್ಚದ 14 ಕಾಮಗಾರಿಗಳ ಟೆಂಡರ್ ಬಾಕಿ ಉಳಿದಿವೆ. ಫೆ. 4ರಂದು ರಾಜ್ಯಮಟ್ಟದ ಹೂಡಿಕೆದಾರರ ಸಮಾವೇಶ ನಡೆಯಲಿದ್ದು,ಪಿಪಿಪಿ ಕಾಮಗಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಆಗುವ ಸಾಧ್ಯತೆ ಇದೆ. ಜಾಗದ ಸಮಸ್ಯೆಯಿಂದಾಗಿ ಸಿಟಿ ಬಸ್ ನಿಲ್ದಾಣ, ಪಾರ್ಕಿಂಗ್ ನಿರ್ಮಾಣದ ಕಾಮಗಾರಿ ಆರಂಭವಾಗಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದರು.

    ಕಮಾಡೆಂಟ್ ಕಂಟ್ರೋಲ್ ಸೆಂಟರ್‌ಗೆ ತಂತ್ರಜ್ಞಾನದಲ್ಲಿ ಪರಿಣಿತ, ಪ್ರಾಮಾಣಿಕ ವ್ಯಕ್ತಿಯೊಬ್ಬನನ್ನು ನಿಯೋಜನೆ ಮಾಡಿ. ನಿರ್ಲಕ್ಷೃ ಮಾಡುವವರನ್ನು ನೇಮಿಸಿದರೆ 40 ಕೋಟಿ ರೂ. ವೆಚ್ಚದ ಈ ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ.
    | ಸುರೇಶ ಅಂಗಡಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts