ಪಡೀಲ್‌ನಲ್ಲೇ ಸ್ಮಾರ್ಟ್ ಸರ್ವೀಸ್ ಬಸ್ ನಿಲ್ದಾಣ

<ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಒಲವು>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ನೂತನ ಸರ್ವೀಸ್ ಬಸ್ ನಿಲ್ದಾಣವನ್ನು ನಗರದ ಹೊರವಲಯದ ಪಡೀಲ್‌ನಲ್ಲಿ ನಿರ್ಮಿಸುವ ಬಗ್ಗೆ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಹೆಚ್ಚಿನ ಒಲವು ವ್ಯಕ್ತವಾಯಿತು.

ಈ ಹಿಂದೆ ಗುರುತಿಸಲಾದ ಪಂಪ್‌ವೆಲ್ ಪರಿಸರದ ಬದಲು ಪಡೀಲ್‌ನಲ್ಲಿ ಸರ್ವೀಸ್ ಬಸ್ ನಿಲ್ದಾಣ ನಿರ್ಮಿಸುವುದು ಸೂಕ್ತ. ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ, ಭವಿಷ್ಯದ ಜಿಲ್ಲಾಧಿಕಾರಿ ಕಚೇರಿ ಇರುವ ಕಾರಣ ಹಾಗೂ ನಗರ ವಿಸ್ತರಣೆ ಉದ್ದೇಶದಿಂದ ಪಡೀಲ್ ಹೊಸ ಬಸ್ ನಿಲ್ದಾಣಕ್ಕೆ ಸೂಕ್ತ ಪ್ರದೇಶ ಎನ್ನುವ ಅಭಿಪ್ರಾಯ ಸಭೆಯಲ್ಲಿ ಚರ್ಚೆಯಾಗಿದೆ. ಪಂಪ್‌ವೆಲ್ ಜತೆಗೆ ಕೂಳೂರು ಪ್ರದೇಶ ಕೂಡ ಸಭೆಯ ಪರಿಶೀಲನೆಯಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ನೂತನ ಬಸ್ ನಿಲ್ದಾಣ ನಿರ್ಮಾಣದ ಜತೆಯಲ್ಲೇ ಬಸ್ ಬೇ ನಿರ್ಮಾಣ ಮತ್ತು ಇದಕ್ಕಾಗಿ ಆದ್ಯತೆಯಲ್ಲಿ ಸ್ಥಳ ಗುರುತಿಸುವ ಕೆಲಸ ಅಂತಿಮಗೊಳಿಸಲು ಸಭೆ ತೀರ್ಮಾನಿಸಿತು. ಸೆಂಟ್ರಲ್ ಮಾರುಕಟ್ಟೆ ನವೀಕರಣ ಸಂದರ್ಭ ಇಲ್ಲಿನ ರಖಂ ಮಾರಾಟಗಾರರಿಗೆ ಬೈಕಂಪಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಲಾಯಿತು.

ಸಲಹಾ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಭಾಸ್ಕರ್ ಕೆ., ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಂಗಳೂರು ಸ್ಮಾರ್ಟ್‌ಸಿಟಿ ಕಂಪನಿ ಆಡಳಿತ ನಿರ್ದೇಶಕ ನಾರಾಯಣಪ್ಪ, ಜಂಟಿ ಆಡಳಿತ ನಿರ್ದೇಶಕ ನಾಗರಾಜ ಎಲ್. ನಾಯಕ್, ನಿರ್ದೇಶಕ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಮಹಮ್ಮದ್ ನಜೀರ್ ಉಪಸ್ಥಿತರಿದ್ದರು.