ಬಯಸಿದ್ದು ಸ್ಮಾರ್ಟ್ ಫೋನ್, ಸಿಕ್ಕಿದ್ದು ಪಾನಿಪುರಿ ಪೌಡರ್ ಚೀಟಿ !

ಹನುಮಸಾಗರ: ಆನ್‌ಲೈನ್ ಮೂಲಕ 12 ಸಾವಿರ ರೂ.ಬೆಲೆ ಬಾಳುವ ಮೊಬೈಲ್ ಪಡೆಯಲು ಹೋದ ಯುವಕನೊಬ್ಬ ವಂಚನೆಗೆ ಒಳಗಾಗಿದ್ದಾನೆ. ಸಮೀಪದ ಯರಗೇರಾದ ಪರಶುರಾಮ ಮಡ್ಡಿ ವಂಚನೆಗೆ ಒಳಗಾದ ಯುವಕ. ಪಡೆಯಲು ಯತ್ನಿಸಿದ್ದು, 12 ಸಾವಿರ ರೂ. ಬೆಲೆಯ ಸ್ಮಾರ್ಟ್‌ಫೋನ್. ಆದರೆ, ಸಿಕ್ಕಿದ್ದು ಮಾತ್ರ 5 ರೂ. ಬೆಲೆಯ ಪಾನಿಪುರಿ ಚೀಟಿ, ಹಿತ್ತಾಳೆಯ ಆಮೆ, ಉಂಗುರ ಮತ್ತಿತರ ವಸ್ತುಗಳು.

ನಡೆದದ್ದೇನು?: ಪರಶುರಾಮನಿಗೆ ದೂರವಾಣಿ ಕರೆಯೊಂದು ಬಂದಿದೆ. ಇವರ ಮೊಬೈಲ್ ನಂಬರ್ ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾಗಿದ್ದು, 1600 ರೂ. ಕೊಟ್ಟು ಪಾರ್ಸಲ್ ಬಿಡಿಸಿಕೊಂಡರೆ 12 ಸಾವಿರ ಬೆಲೆ ಬಾಳುವ ಸ್ಮಾರ್ಟ್‌ಫೋನ್ ಸಿಗಲಿದೆ ಎಂದು ಆ ಕಡೆಯ ವ್ಯಕ್ತಿ ಹೇಳಿದ್ದಾರೆ. ಈ ಆಫರ್‌ಗೆ ಮಾರುಹೋದ ಪರಶುರಾಮ ಸಂಪೂರ್ಣ ವಿಳಾಸ ತಿಳಿಸಿದ್ದಾನೆ. ಸೋಮವಾರ ಯುವಕನಿಗೆ ಅಂಚೆ ಮೂಲಕ ಪಾರ್ಸಲ್ ಬಂದಿದ್ದು, 1600 ರೂ. ಪಾವತಿಸಿ ಪಾರ್ಸಲ್ ಪಡೆದು ತೆರೆದು ನೋಡಿದಾಗಲೇ ತಾನು ಮೋಸ ಹೋಗಿದ್ದು ಗೊತ್ತಾಗಿದೆ. ಬಂದ ಪಾರ್ಸಲ್ ಮೇಲೆ ಎಸ್‌ಎಲ್‌ಎನ್ ಎಂಟರ್‌ಪ್ರೈಜಿಸ್, 5ನೇ ಮೇನ್, ಬಳ್ಳಾರಿ ರಸ್ತೆ ಬೆಂಗಳೂರು-24 ಎಂದಿದೆ.