ಸಿಇಗಳಿಗೆ ಒಗ್ಗದ ಸ್ಮಾರ್ಟ್ ಸಿಟಿ!

ನಮ್ಮನ್ನು ಸ್ಮಾರ್ಟ್​ಸಿಟಿ ಯೋಜನೆಯಲ್ಲಿನ ಹುದ್ದೆಗಳಿಗೆ ನಿಯೋಜಿಸಬೇಡಿ ಎಂದು ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್​ಗಳು ಸರ್ಕಾರಕ್ಕೆ ದಂಬಾಲು ಬಿದ್ದಿರುವ ವಿಚಿತ್ರ ಪ್ರಸಂಗ ನಡೆದಿದೆ.

ಕರ್ನಾಟಕ ನಾಗರಿಕ ಸೇವಾ ನಿಯಮಗಳಂತೆ ಮುಖ್ಯ ಇಂಜಿನಿಯರ್​ಗಳು ಇಲಾಖಾ ಮುಖ್ಯಸ್ಥ ದರ್ಜೆಯ ಅಧಿಕಾರಿಗಳಾಗಿರುತ್ತಾರೆ. ಆದರೆ, ಸ್ಮಾರ್ಟ್ ಸಿಟಿಗಳಲ್ಲಿ ಅಧೀನ ಅಧಿಕಾರಿಗಳ ಕೆಳಗಡೆ ಮುಖ್ಯ ಇಂಜಿನಿಯರ್​ಗಳು ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಸ್ಮಾರ್ಟ್ ಸಿಟಿಯಿಂದ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸ್ಮಾರ್ಟ್ ಸಿಟಿ ಗಳಲ್ಲಿ ಮುಖ್ಯ ಇಂಜಿನಿಯರ್​ಗಳನ್ನು ಪ್ರಧಾನ ವ್ಯವಸ್ಥಾಪಕರ (ತಾಂತ್ರಿಕ) ಹುದ್ದೆಗೆ ಎದುರಾಗಿ ಪರಿಗಣಿಸಲಾಗುತ್ತಿದೆ. ಇದು ವ್ಯವಸ್ಥಾಪಕರ ನಿರ್ದೇಶಕರ (ಕೆಎಎಸ್) ಅಧೀನದಲ್ಲಿರುವ ಹುದ್ದೆಯಾಗಿದೆ. ವ್ಯವಸ್ಥಾಪಕ ನಿರ್ದೇಶಕರಾದವರು ಮುಖ್ಯ ಇಂಜಿನಿಯರ್​ಗಳಿಗಿಂತ ಹಲವಾರು ಪಟ್ಟು ಕೆಳಗಿನ ಹಂತದ ಅಧಿಕಾರಿಗಳಾಗಿರುತ್ತಾರೆ. ಹೀಗಾಗಿ ಕೆಳಹಂತದ ಅಧಿಕಾರಿಗಳ ಅಧೀನದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಉಂಟಾಗಿದೆ. ಅಲ್ಲದೆ ಜಂಟಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳನ್ನು ಸೃಷ್ಟಿಸಿ ಅಲ್ಲಿಗೆ ಸಹಾಯಕ ಆಯುಕ್ತ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ.

ಈ ರೀತಿ ಉನ್ನತ ಮಟ್ಟದ ಅಧಿಕಾರಿಗಳನ್ನು ಕೆಳಹಂತದ ಅಧಿಕಾರಿಗಳ ಅಧೀನದಲ್ಲಿ ಕೆಲಸ ನಿರ್ವಹಿಸಲು ನೇಮಿಸುವುದು ನ್ಯಾಯಸಮ್ಮತವಲ್ಲ ಎಂಬುದು ಮುಖ್ಯ ಇಂಜಿನಿಯರ್​ಗಳ ವಾದ. ಈ ಕಾರಣದಿಂದ ಸ್ಮಾರ್ಟ್ ಸಿಟಿ ಕಚೇರಿಗಳಿಂದ ಮುಖ್ಯ ಇಂಜಿನಿಯರ್​ಗಳ ಸೇವೆಯನ್ನು ಹಿಂಪಡೆಯುವಂತೆ ಕೋರಿದ್ದಾರೆ.

ಒಂದು ವೇಳೆ ಈ ಕಚೇರಿಗಳಿಗೆ ಮುಖ್ಯ ಇಂಜಿನಿಯರ್​ಗಳ ಸೇವೆ ತೀರ ಅವಶ್ಯವಿದ್ದಲ್ಲಿ ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳ ನಿಯೋಜನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವ್ಯಾಪ್ತಿಗೆ ಪಡೆದು, ಆ ಹುದ್ದೆಗೆ ಮುಖ್ಯ ಇಂಜಿನಿಯರ್​ಗಳಿಗಿಂತ ಉನ್ನತ ಶ್ರೇಣಿ ಅಧಿಕಾರಿಗಳನ್ನು ನಿಯೋಜಿಸುವಂತೆ ಮುಖ್ಯ ಇಂಜಿನಿಯರ್​ಗಳು ಮನವಿ ಮಾಡಿದ್ದಾರೆ. ‘ವಿಜಯವಾಣಿ’ಗೆ ಈ ಸಂಬಂಧ ದಾಖಲೆ ಲಭ್ಯವಾಗಿದೆ. ತಮ್ಮನ್ನು ಸ್ಮಾರ್ಟ್ ಸಿಟಿಯಲ್ಲಿ ನಿಯೋಜಿಸಬಾರದೆಂಬ ಮುಖ್ಯ ಇಂಜಿನಿಯರ್​ಗಳ ಮನವಿ ಬಗ್ಗೆ ಅನಧಿಕೃತ ಟಿಪ್ಪಣಿ ಹೊರಟಿದ್ದು, ಈ ಬಗ್ಗೆ ಸರ್ಕಾರಕ್ಕೆ ಜರೂರಾಗಿ ವರದಿ ನೀಡಬೇಕೆಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕೆಯುಐಡಿಎಫ್​ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ತೊಂದರೆ ಏನು?
  1. ಮುಖ್ಯ ಇಂಜಿನಿಯರ್ ಇಲಾಖೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಲೋಕೋಪಯೋಗಿ ಇಲಾಖೆ ಜತೆಗೆ ಜಲಸಂಪನ್ಮೂಲ ಗ್ರಾಮೀಣಾಭಿವೃದ್ಧಿ ಸೇರಿ ಯಾವುದೇ ಇಲಾಖೆಗೆ ಹೋದರೂ ಅವರ ಹುದ್ದೆ ಪ್ರಮುಖವಾಗಿರುತ್ತದೆ. ಎಲ್ಲ ಅಂತಿಮ ತೀರ್ವನವನ್ನು ಅವರೇ ಕೈಗೊಳ್ಳುತ್ತಾರೆ.
  2. ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿ ಬರುವ ಸ್ಮಾರ್ಟ್ ಸಿಟಿಗೆ ಲೋಕೋಪಯೋಗಿ ಇಲಾಖೆಯಿಂದ ನಿಯೋಜನೆಗೊಂಡ ಮುಖ್ಯ ಇಂಜಿನಿಯರ್​ಗಳಿಗೆ ಹಿಂಬಡ್ತಿಯ ಅನುಭವವಾಗಿದೆ. ತಮಗಿಂತ ಎರಡು ಮೂರು ಹಂತದ ಕೆಳಗಿರುವ ಅಧಿಕಾರಿಗಳನ್ನು ತಮ್ಮ ಮುಖ್ಯಸ್ಥರೆಂದು ಒಪ್ಪಿಕೊಳ್ಳಲು ಮುಖ್ಯ ಇಂಜಿನಿಯರ್​ಗಳಿಗೆ ಸಾಧ್ಯವಾಗುತ್ತಿಲ್ಲ.
  3. ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ಜವಾಬ್ದಾರಿಗೂ, ಸ್ಮಾರ್ಟ್ ಸಿಟಿಯಲ್ಲಿ ಜವಾಬ್ದಾರಿಗೂ ಬಹಳ ವ್ಯತ್ಯಾಸಗಳು ಕಂಡಿವೆ. ಪ್ರಸ್ತಾವನೆಗಳಿಗೆ ಅಂತಿಮ ಒಪ್ಪಿಗೆ ನೀಡುವಂತಹ ಅಧಿಕಾರಿಗಳು ಈಗ ಪ್ರಸ್ತಾವನೆ ಸಿದ್ಧಪಡಿಸುವ ಹಂತದಲ್ಲಿದ್ದಾರೆ.
  4. ತಾಂತ್ರಿಕವಾಗಿ ಹಾಗೂ ಜ್ಯೇಷ್ಠತೆಯಲ್ಲಿ ತಮಗಿಂತ ಕಿರಿಯರಾಗಿರುವವರ ಆದೇಶಗಳನ್ನು ಮುಖ್ಯ ಇಂಜಿನಿಯರುಗಳು ಒಪ್ಪಿಕೊಳ್ಳಬೇಕಾಗಿದೆ.

|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

Leave a Reply

Your email address will not be published. Required fields are marked *