ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆರೋಪ ಆಧಾರ ರಹಿತ

ಶಿವಮೊಗ್ಗ: ನಾನು ಹಾಗೂ ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದ ಅವಧಿಯಲ್ಲಿ ಯಾವುದೆ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಆರೋಪ ಆಧಾರ ರಹಿತ. ವಿಧಾನಸಭೆ ಚುನಾವಣೆ ಸೋಲಿನ ಹತಾಶೆಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ವೈ.ರಾಘವೇಂದ್ರ ಹೇಳಿದರು.

ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಂಪೂರ್ಣ ವಿವರ ನೀಡಿದ ಅವರು, ಜಿಲ್ಲಾ ಕಾಂಗ್ರೆಸ್​ನ ಒಳಜಗಳದಿಂದ ಜನರನ್ನು ಬೇರೆಡೆ ಸೆಳೆಯಲು ಆ ಪಕ್ಷದ ಜಿಲ್ಲಾಧ್ಯಕ್ಷರು ವಿನಾಕಾರಣ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

ತುಮರಿ ಸೇತುವೆ ಯೋಜನೆಯನ್ನು ಪರಿಷ್ಕರಿಸಿ ಯೋಜನಾ ವೆಚ್ಚ ಕಡಿತಗೊಳಿಸಿರುವುದು ನಿಜ. ಹಾಗೆಂದ ಮಾತ್ರಕ್ಕೆ ಯೋಜನೆಯನ್ನೇ ಕೈ ಬಿಟ್ಟಿದ್ದಾರೆ ಎಂದರ್ಥವಲ್ಲ. ಈ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಂದ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಮರ್ಪಕ ಬಳಕೆ: ನಾನು ಹಾಗೂ ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದ ಅವಧಿಯಲ್ಲಿ ಕೇಂದ್ರದ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಹೆಚ್ಚಿನ ಅನುದಾನ ತಂದಿದ್ದೇವೆ. ಬಂಡವಾಳ ಹಿಂತೆಗೆತ ಪಟ್ಟಿಯಲ್ಲಿದ್ದ ವಿಐಎಸ್​ಎಲ್​ಅನ್ನು ಪಟ್ಟಿಯಿಂದ ಹೊರಬಾರದಂತೆ ನೋಡಿಕೊಂಡು ಪುನಶ್ಚೇತನಕ್ಕೆ ಕೇಂದ್ರ ಮುಂದಾಗುವಂತೆ ಪ್ರಯತ್ನಿಸಿದ್ದೇವೆ. ಅಡಕೆ ಬೆಳೆಗಾರರ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿವರಿಸಿದರು.

ಶಿವಮೊಗ್ಗಕ್ಕೆ ಹೆಚ್ಚಿನ ರೈಲು ಸೇವೆ ಸಿಗುವಂತೆ ಮಾಡಿದ್ದೇವೆ. ಶಿವಮೊಗ್ಗ-ಬೀರೂರು ಮಾರ್ಗ ಡಬ್ಲಿಂಗ್​ಗೆ ಅನುದಾನ ಮಂಜೂರಾಗಿದೆ. ಶಿವಮೊಗ್ಗ, ಸಾಗರದಲ್ಲಿ ಗಾರ್ವೆಂಟ್ಸ್ ಸ್ಥಾಪನೆಯಾಗಿ ಹೆಚ್ಚು ಮಂದಿಗೆ ಉದ್ಯೋಗ ಸಿಗುವಂತೆ ಮಾಡಿದ್ದೇವೆ ಎಂದರು.

ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಯಡಿಯೂರಪ್ಪ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೆಡಿಕಲ್ ಕಾಲೇಜು, ಕೃಷಿ ವಿವಿ, ಆಯುರ್ವೆದಿಕ್ ಕಾಲೇಜು, ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಹೀಗೆ ಹತ್ತು ಹಲವು ಕಾಲೇಜುಗಳನ್ನು ಮಂಜೂರು ಮಾಡಿಸಿ ಜಿಲ್ಲೆಯನ್ನು ಶೈಕ್ಷಣಿಕ ಹಬ್ ಆಗಿಸಿದ್ದಾರೆ.

ನಾನು ಸಂಸದನಾಗಿದ್ದಾಗ ಶಿವಮೊಗ್ಗದಲ್ಲಿ ತುಂಗಾ ನದಿಗೆ 65 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ವಿುಸಲಾಗಿದೆ. ಶಿವಮೊಗ್ಗ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಎಂಆರ್​ಎಸ್- ಲಯನ್ಸ್ ಸಫಾರಿ ಹೆದ್ದಾರಿ ಕಾಮಗಾರಿ, ಬೈಂದೂರು- ರಾಣೆಬೆನ್ನೂರು ಕಾಮಗಾರಿ ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ, ಉಪಾಧ್ಯಕ್ಷ ಬಿಳಕಿ ಕೃಷ್ಣಮೂರ್ತಿ, ಪ್ರಮುಖರಾದ ಮಧುಸೂದನ್, ಅನಿತಾ ರವಿಶಂಕರ್, ಅಣ್ಣಪ್ಪ ರತ್ನಾಕರ ಶೆಣೈ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

              ಬಿವೈಆರ್ ತೆರೆದಿಟ್ಟ ಕಾಮಗಾರಿಗಳ ಪಟ್ಟಿ

 • ಬೀರೂರು-ಶಿವಮೊಗ್ಗ ಡಬ್ಲಿಂಗ್​ಗೆ 500 ಕೋಟಿ ರೂ.
 • ತಾಳಗುಪ್ಪ-ಸಿದ್ದಾಪುರ ಹೊಸ ರೈಲು ಮಾರ್ಗ 320 ಕೋಟಿ ರೂ.
 • ತಾಳಗುಪ್ಪ-ಹೊನ್ನಾವರ ಹೊಸ ಮಾರ್ಗ 2,500 ಕೋಟಿ ರೂ.
 • ಶಿವಮೊಗ್ಗ-ಬೆಂಗಳೂರು ನಡುವೆ ಹೆಚ್ಚುವರಿಯಾಗಿ ವಾರದಲ್ಲಿ ಮೂರು ದಿನ ಎಕ್ಸ್​ಪ್ರೆಸ್ ರೈಲು
 • ಉನ್ನತೀಕರಣವಾಗುತ್ತಿರುವ ಶಿವಮೊಗ್ಗ ನಗರದ ವಿದ್ಯಾನಗರ ರೈಲ್ವೆ ನಿಲ್ದಾಣ
 • ಕೆ-ಶಿಪ್ ಮೂಲಕ ಶಿವಮೊಗ್ಗ-ಶಿಕಾರಿಪುರ-ಆನಂದಪುರ ರಸ್ತೆ ನಿರ್ವಣಕ್ಕೆ 264.73 ಕೋಟಿ ರೂ.
 • ಶಿಕಾರಿಪುರ-ಹಾನಗಲ್ ನಡುವಿನ ರಸ್ತೆ ನಿರ್ವಣಕ್ಕೆ 224.70 ಕೋಟಿ ರೂ.
 • ಚಿತ್ರದುರ್ಗ-ಶಿವಮೊಗ್ಗ ದ್ವಿಪಥ ರಾಷ್ಟ್ರೀಯ ಹೆದ್ದಾರಿಗೆ 330 ಕೋಟಿ ರೂ.
 • ಎಂಆರ್​ಎಸ್ ಸರ್ಕಲ್​ನಿಂದ ಲಯನ್ ಸಫಾರಿವರೆಗೆ ಚತುಷ್ಪಥ ರಸ್ತೆಗೆ 95.82 ಕೋಟಿ ರೂ.
 • ತುಮರಿ ಸೇತುವೆ ನಿರ್ವಣಕ್ಕೆ 456 ಕೋಟಿ ರೂ.
 • ತುಮಕೂರು-ಶಿವಮೊಗ್ಗ ಚತುಷ್ಪಥ ರಸ್ತೆಗೆ 5,800 ಕೋಟಿ ರೂ.
 • ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರದಿಂದ 111 ಕೋಟಿ ರೂ.
 • ಅಮೃತ್ ಯೋಜನೆಯಡಿ ಶಿವಮೊಗ್ಗ ನಗರ ಪಾಲಿಕೆಗೆ 181 ಕೋಟಿ ಹಾಗೂ ಭದ್ರಾವತಿಗೆ 150 ಕೋಟಿ ರೂ.
 • ನೀರು ಸರಬರಾಜಿಗೆ ಶಿವಮೊಗ್ಗಕ್ಕೆ 65 ಹಾಗೂ ಭದ್ರಾವತಿಗೆ 45 ಕೋಟಿ ರೂ.
 • 132 ಬಿಎಸ್​ಎನ್​ಎಲ್ ಟವರ್​ಗಳು 2ಜಿ ಯಿಂದ 3ಜಿಗೆ
 • ಶಿವಮೊಗ್ಗದಲ್ಲಿ ಪಾಸ್​ಪೋರ್ಟ್ ಸೇವಾ ಕೇಂದ್ರ ಆರಂಭ
 • ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 25,172 ಫಲಾನುಭವಿಗಳಿಗೆ ಉಚಿತ ಅನಿಲ ಸಂಪರ್ಕ