ಮನಪಾ ಸಭೆ ಗದ್ದಲ, ಕೋಲಾಹಲ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕಸಾಯಿಖಾನೆಗೆ ಸ್ಮಾರ್ಟ್ ಹಣ ವಿವಾದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಭಾರಿ ಸದ್ದುಮಾಡಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿಖಾನೆಯನ್ನು 15 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಮನಪಾ ಆಡಳಿತ ಪಕ್ಷ ಕಾಂಗ್ರೆಸ್ ಸಮರ್ಥಿಸಿಕೊಂಡರೆ, ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಇದು ಬುಧವಾರದಸಭೆಯಲ್ಲಿ ಸದಸ್ಯರ ಮಧ್ಯೆ ಮಾತಿನ ಸಮರ, ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಕಲಾಪದ ಬಹುತೇಕ ಸಮಯ ಕಸಾಯಿಖಾನೆ ಚರ್ಚೆಗೆ ಸೀಮಿತವಾಯಿತು.
ಸಭೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಹೈಕೋರ್ಟ್ ಆದೇಶದನ್ವಯ ನಗರದ ಒಳಗೆ ಕಸಾಯಿಖಾನೆ ಇರುವಂತಿಲ್ಲ. ಕುದ್ರೋಳಿ ಕಸಾಯಿಖಾನೆ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಇಂದಿಗೂ ಅನುಮತಿ ನೀಡಿಲ್ಲ. ಕಸಾಯಿಖಾನೆಗೆ ನಮ್ಮ ವಿರೋಧವಿಲ್ಲ. ಆದರೆ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗೆ ಉಸ್ತುವಾರಿ ಸಚಿವರು ಆಸಕ್ತಿ ವಹಿಸಿ 15 ಕೋಟಿ ರೂ.ನೀಡುವುದಕ್ಕೆ ವಿರೋಧವಿದೆ. ನಗರದ ಹೊರಗೆ ಕಸಾಯಿಖಾನೆ ನಿರ್ಮಿಸಲು 10 ಲಕ್ಷ ರೂ. ಖರ್ಚು ಮಾಡಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ತಕ್ಷಣ ಕಸಾಯಿಖಾನೆ ಸ್ಥಳಾಂತರಿಸಬೇಕು ಎಂದರು. ಕುದ್ರೋಳಿ ದೇವಸ್ಥಾನದ ಬಳಿ ರುವ ಕಾರಣ, ಕಸಾಯಿಖಾನೆ ಸ್ಥಳಾಂತರಿಸುವುದು ಅಗತ್ಯ ಎಂದು ರೂಪಾ.ಡಿ.ಬಂಗೇರ ಹೇಳಿದರು. ಕಸಾಯಿಖಾನೆಯಲ್ಲಿ ಅಕ್ರಮವಾಗಿ ದನಗಳನ್ನು ಕಡಿಯುತ್ತಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ವಿವರದಲ್ಲಿ ಬಹಿರಂಗವಾಗಿದೆ , ಇದಕ್ಕೆ ಯಾರು ಹೊಣೆ ಎಂದು ವಿಜಯ ಕುಮಾರ್ ಶೆಟ್ಟಿ ಪ್ರಶ್ನಿಸಿದರು.

ಚರಂಡಿಯಲ್ಲಿ ಜಾನುವಾರು ರಕ್ತ!:  ಈ ಹಿಂದೆ ಕಣ್ಣೂರಿನಲ್ಲಿ ಕಸಾಯಿಖಾನೆಗಾಗಿ 8 ಎಕರೆ ಜಾಗ ನಿಗದಿಪಡಿಸಿದ್ದರೂ, ಅಂತಿಮವಾಗಿಲ್ಲ. ಕುದ್ರೋಳಿ ಕಸಾಯಿಖಾನೆಯ ಅವ್ಯವಸ್ಥೆಯಿಂದ ತ್ಯಾಜ್ಯನೀರಿನ ಜತೆ ಪ್ರತಿದಿನ ಐದಾರು ಟ್ಯಾಂಕರ್‌ನಷ್ಟು ಜಾನುವಾರು ರಕ್ತ ಹರಿಯುತ್ತಿದೆ. ನೈಮರ್ಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಕಸಾಯಿಖಾನೆಯ ಆಧುನೀಕರಣ ಅಗತ್ಯ ಎಂದು ಆಡಳಿತ ಪಕ್ಷದ ದೀಪಕ್ ಪೂಜಾರಿ ಹೇಳಿದರು. ಮಹಾಬಲ ಮಾರ್ಲ, ಶಶಿಧರ ಹೆಗ್ಡೆ ಮುಂತಾದವರು ಕಸಾಯಿಖಾನೆ ಅಭಿವೃದ್ಧಿ ಸಮರ್ಥಿಸಿದರು.

ಆಯುಕ್ತರ ಮಾತಿಗೆ ಕಿಡಿ:  ಸ್ಮಾರ್ಟ್ ಸಿಟಿ ಸಭೆಯಲ್ಲೇ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದೆ. ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ನಿರ್ದೇಶಕರಾಗಿರುವ ಕೆಲವು ಅಧಿಕಾರಿಗಳು ಕೂಡ ನೇರವಾಗಿ ಬೋರ್ಡ್ ಮೀಟಿಂಗ್‌ನಲ್ಲಿ ಅನುಮತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಪ್ರತಿಪಕ್ಷದ ಸದಸ್ಯ ಪ್ರೇಮಾನಂದ ಶೆಟ್ಟಿ ಹೇಳಿದರು. ಇಲ್ಲಿ ಚರ್ಚೆ ನಡೆಸುವುದು ಅಪ್ರಸ್ತುತ. ಸಭೆಯಲ್ಲಿ ಯಾರೂ ವಿರೋಧಿಸಿಲ್ಲ. ದೃಢೀಕರಣ ಸಂದರ್ಭ ವಿರೋಧಿಸಿದ್ದರು ಎಂದು ಆಯುಕ್ತ ಮಹಮ್ಮದ್ ನಜೀರ್ ಹೇಳಿದರು. ಆಯುಕ್ತರ ಉತ್ತರವನ್ನು ಆಕ್ಷೇಪಿಸಿದ ಬಿಜೆಪಿ ಸದಸ್ಯ ಚರ್ಚೆ ಅಪ್ರಸ್ತುತ ಎಂದು ಮೇಯರ್ ಹೇಳಲಿ. ಆಯುಕ್ತರಿಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದರು. ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ. ಸ್ಮಾರ್ಟ್ ಸಿಟಿ ಸಭೆಯ ದಾಖಲೆಗಳಲ್ಲಿ ನಮ್ಮ ವಿರೋಧ ಉಲ್ಲೇಖವಿದೆ. ಈ ಹಿಂದೆ ಕ್ಲಾಕ್ ಟವರ್‌ಗೆ ಸ್ಮಾರ್ಟ್ ಸಿಟಿ ಯೋಜನೆಯ ಹಣ ನೀಡುವ ಬಗ್ಗೆ ಆಯುಕ್ತರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಪ್ರೇಮಾನಂದ ಶೆಟ್ಟಿ ತಿರುಗೇಟು ನೀಡಿದರು.

ಅಭಿವೃದ್ಧಿ ಖಚಿತ ಎಂದ ಮೇಯರ್:  ಸ್ಮಾರ್ಟ್ ಸಿಟಿ ಯೋಜನೆಯಡಿ ಕಸಾಯಿಖಾನೆ ಅಭಿವೃದ್ಧಿ ನಿಗದಿಯಾಗಿದೆ. ತಾತ್ಕಾಲಿಕವಾಗಿ ಅಭಿವೃದ್ಧಿ ಅಗತ್ಯವೂ ಇದೆ. ಬಳಿಕ ಸೂಕ್ತ ಜಮೀನು ಲಭ್ಯವಾದರೆ ಕಸಾಯಿಖಾನೆ ಸ್ಥಳಾಂತರ ಮಾಡಲಾಗುವುದು ಎಂದು ಮೇಯರ್ ಕೆ.ಭಾಸ್ಕರ್ ಸಭೆಗೆ ತಿಳಿಸಿದರು. ಸ್ಥಳಾಂತರ ಮಾಡುವ ಹಾಗಿದ್ದರೆ ಈಗ 15 ಕೋಟಿ ಖರ್ಚು ಮಾಡುವ ಅಗತ್ಯ ಏನಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಏರು ಸ್ವರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಮೇಯರ್ ಪೀಠದ ಮುಂಭಾಗದಲ್ಲಿ ವಾಗ್ವಾದ ನಡೆಸಿದ ಕಾರಣ ಸಭೆಯಲ್ಲಿ ಕೋಲಾಹಲ ಉಂಟಾಯಿತು.