ಬಣ್ಣದ ಲೋಕಕ್ಕೆ ಮೇಘಾ ಶೆಟ್ಟಿ ಪದಾರ್ಪಣೆ

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಹೊಸ ನಟಿ ಮೇಘಾ ಶೆಟ್ಟಿ. ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿರುವ ಅವರು ಯಾವತ್ತೂ ನಟಿಯಾಗಬೇಕೆಂಬ ಕನಸು ಕಂಡವರಲ್ಲ. ಅದಕ್ಕಿಂತ ಹೆಚ್ಚಾಗಿ ಇದುವರೆಗೆ ಹವ್ಯಾಸಕ್ಕೂ ಕಾಲೇಜು ಅಥವಾ ಇನ್ಯಾವುದೇ ವೇದಿಕೆಗಳಲ್ಲಿ ಅಭಿನಯಿಸಿಲ್ಲ. ಆದರೆ ಈಗ ಏಕಾಏಕಿ ಕಿರುತೆರೆಯಲ್ಲಿ ಧಾರಾವಾಹಿ ನಾಯಕಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅದರಲ್ಲೂ, ಅನುಭವಿ ನಟ ಅನಿರುದ್ಧ್​ಗೆ ಜೋಡಿಯಾಗಿ ನಟಿಸುತ್ತಿರುವುದು ವಿಶೇಷ. ಮಂಗಳೂರು ಮೂಲದ ಮೇಘಾ ಕಿರುತೆರೆಗೆ ಕಾಲಿಟ್ಟಿದ್ದು ಅಚಾನಕ್ ಆಗಿ. ಎಂಬಿಎ ವ್ಯಾಸಂಗ ಮುಗಿಸಿ ಐಎಎಸ್ ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಸೋಷಿಯಲ್ ಮೀಡಿಯಾ ಮುಖಾಂತರ ಜೀ ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸಂರ್ಪಸಿದರು. ಆಗಲೇ ಸಿಕ್ಕಿದ್ದು ‘ಜೊತೆ ಜೊತೆಯಲಿ’ ಸೀರಿಯಲ್ ಆಫರ್. ಸಿಕ್ಕಿದ ಮೊದಲ ಅವಕಾಶದಲ್ಲೇ ನಟನೆಯ ಮೂಲಕ ಗಮನ ಸೆಳೆಯುವಲ್ಲಿ ಮೇಘಾ ಯಶಸ್ವಿಯಾದರು.

ಕಥೆಯಲ್ಲಿ ಮೇಘಾ ಅವರದ್ದು ‘ಅನು’ ಎಂಬ ಹೆಸರಿನ ಮುಗ್ಧ ಹುಡುಗಿಯ ಪಾತ್ರ. ಈ ಬಗ್ಗೆ ಅವರು ಹೀಗೆ ವಿವರಿಸುತ್ತಾರೆ. ‘ಮನೆಗೆ ಮಹಾಲಕ್ಷ್ಮೀ, ಅಪ್ಪ ಅಮ್ಮನ ಮುದ್ದಿನ ಮಗಳು, ಮಧ್ಯಮ ವರ್ಗದ ಕುಟುಂಬದ ಹುಡುಗಿ, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವುದಷ್ಟೇ ಆಕೆಯ ಆಸೆ-ಕನಸು. ಮನೆಯೇ ಪ್ರಪಂಚ, ಹೊರ ಪ್ರಪಂಚದ ಬಗ್ಗೆ ಏನೂ ಗೊತ್ತಿಲ್ಲ. ಒಟ್ಟಿನಲ್ಲಿ ಅವಳು ಮುಗ್ಧೆ’ ಎನ್ನುತ್ತಾರೆ ಮೇಘಾ. ಮೊದಲ ಬಾರಿ ಕ್ಯಾಮರಾ ಎದುರಿಸುವಾಗ ನರ್ವಸ್ ಆಗಿರಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವ ಅವರು, ‘ನನಗೆ ಸೀರಿಯಲ್ ಶುರುವಾಗುವ ಮುನ್ನ ನಿರ್ದೇಶಕರು ಚೆನ್ನಾಗಿ ತರಬೇತಿ ಕೊಟ್ಟರು. ಹಾಗಾಗಿ ಕ್ಯಾಮರಾ ಮುಂದೆ ಬರುವಾಗ ಅಂಥ ನರ್ವಸ್ ಏನೂ ಆಗಲಿಲ್ಲ. ಅನಿರುದ್ಧ್ ಹಾಗೂ ಎಲ್ಲ ಕಲಾವಿದರೂ ಚೆನ್ನಾಗಿ ಬೆಂಬಲ ನೀಡುತ್ತಿದ್ದಾರೆ. ಇನ್ನೂ ಹಲವು ಅನುಭವಿ ಕಲಾವಿದರ ಜತೆ ನಟಿಸಬೇಕು. ‘ಕಾಮಿಡಿ ಕಿಲಾಡಿ’ಗೆ ಒಮ್ಮೆ ಬಂದು ನಟಿಸು, ನಟನೆ ಬಗ್ಗೆ ಐಡಿಯಾ ಸಿಗುತ್ತೆ ಅಂತ ಯೋಗರಾಜ್ ಭಟ್ ಹೇಳಿದ್ದಾರೆ, ಹೋಗಬೇಕು’ ಎನ್ನುತ್ತಾರೆ.

ಕನ್ನಡದಲ್ಲಿ ಸಾಕಷ್ಟು ಸೀರಿಯಲ್​ಗಳು ಪ್ರಸಾರ ಆಗುತ್ತಿರುವುದರಿಂದ ಸಿಕ್ಕಾಪಟ್ಟೆ ಪೈಪೋಟಿ ಇದೆ. ಅದನ್ನು ಎದುರಿಸಲು ತಂಡದೊಂದಿಗೆ ಮೇಘಾ ಸಜ್ಜಾಗಿದ್ದಾರಂತೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಸಿನಿಮಾದಲ್ಲೂ ನಟಿಸುವ ಆಸೆ ಅವರಿಗಿದೆ. ಐಎಎಸ್ ವ್ಯಾಸಂಗದ ಯೋಜನೆಯನ್ನು ಸದ್ಯಕ್ಕೆ ಬಿಟ್ಟರೂ ಮುಂದಿನ ದಿನಗಳಲ್ಲಿ ಅದನ್ನು ಕಲಿಯುವ ಹಂಬಲವೂ ಇದೆಯಂತೆ.

ನಟನೆಯಲ್ಲಿ ನನಗೆ ಇದು ಮೊದಲ ಅನುಭವ, ಈ ಹಿಂದೆ ಎಲ್ಲಿಯೂ ನಟಿಸಿಲ್ಲ. ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್​ನಲ್ಲಿ ಭಾಗವಹಿಸುತ್ತಿದ್ದೆ. ಆದರೆ ಇಲ್ಲಿಯವರೆಗೆ ಡಾನ್ಸ್ ನಂಥ ಯಾವುದೇ ಕಾರ್ಯಕ್ರಮದಲ್ಲೂ ಪಾಲ್ಗೊಂಡಿಲ್ಲ. ಅವಕಾಶ ಕೊಟ್ಟ ಜೀ ಕನ್ನಡ ವಾಹಿನಿಗೆ ಧನ್ಯವಾದಗಳು.

| ಮೇಘಾ ಶೆಟ್ಟಿ, ನಟಿ

Leave a Reply

Your email address will not be published. Required fields are marked *