ಕುತೂಹಲ ಮೂಡಿಸಿದ ಸುಮಲತಾ-ಎಸ್​.ಎಂ.ಕೃಷ್ಣಾ ಭೇಟಿ; ಹಿರಿಯರ ಆಶೀರ್ವಾದ ಸುಮಲತಾಗೆ ವರವಾಗುವುದೇ?

ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವ ನಟಿ ಸುಮಲತಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮತದಾರರ ಮನದಲ್ಲಿ ಮನೆ ಮಾಡಿದೆ. ಈ ಮಧ್ಯೆ ಸುಮಲತಾ ಅವರು ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರನ್ನು ಭೇಟಿ ಮಾಡಿರುವುದು ರಾಜಕಾರಣದಲ್ಲಿ ರೋಚಕ ಬದಲಾವಣೆಯಾಗುವ ಮುನ್ಸೂಚನೆ ಕಾಣುತ್ತಿದೆ.

ಶುಕ್ರವಾರ ಸದಾಶಿವನಗರದಲ್ಲಿರುವ ಎಸ್​.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿದ ಸುಮಲತಾ ಅವರು ಚುನಾವಣೆ ಕುರಿತು ಮಾತುಕತೆ ನಡೆಸಿದರು. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅವರು ನಮ್ಮ‌ ಹಿರಿಯರಾಗಿರುವ ಎಸ್.ಎಂ.ಕೃಷ್ಣ ಅವರ ಆಶೀರ್ವಾದ ತೆಗೆದುಕೊಂಡು ಹೋಗಲು ನಾನಿವತ್ತು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

ಮಂಡ್ಯ ರಾಜಕೀಯ ವಾತಾವರಣ ಹೇಗಿದೆ ಎಂಬುವುದನ್ನು ಅವರಿಗೆ ತಿಳಿಸಿ ಆಶೀರ್ವಾದ ಪಡೆದಿದ್ದೇನೆ. ನನಗೆ ಬೆಂಬಲ ಕೊಡ್ತೀವಿ ಎಂದು ಬಿಜೆಪಿಯವರು ಅಧಿಕೃತವಾಗಿ ಹೇಳಿಲ್ಲ. ಮಂಡ್ಯದಲ್ಲಿ ಅಂಬರೀಷ್​ ಹೆಸರನ್ನು ಎಲ್ಲರೂ ಉಪಯೋಗಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ನನಗನಿಸುತ್ತಿದೆ ಎಂದು ವಿರೋಧಿಗಳನ್ನು ಕುಟುಕಿದರು.

ಬಿಜೆಪಿಗೆ ಹೋಗುವ ಬಗ್ಗೆ ಚರ್ಚಿಸಿಲ್ಲ. ಜೆಡಿಎಸ್​ನಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಸಿಎಂ ಎಚ್​ಡಿಕೆ ಹಾಗೂ ದೇವೇಗೌಡರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಸುಮಲತಾ ಅವರು ಸಿಎಂ ಹೇಳಿಕೆ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದರು.

ಸುಮಲತಾಗೆ ನನ್ನ ಸಹಮತ ಇದೇ
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಸ್​.ಎಂ.ಕೃಷ್ಣ ಅವರು ನಾಲ್ಕು ದಿನಗಳ ಕೆಳಗೆ ಅಶೋಕ್ ಅವರು ಬಂದು ಮಂಡ್ಯ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದರು. ಸುಮಲತಾ ಅವರು ಚುನಾವಣೆಗೆ ನಿಲ್ಲಬೇಕು ಎಂದು ಪ್ರಸ್ತಾವನೆ ಮಾಡಿದ್ದೇನೆ. ಬಿಜೆಪಿಯಿಂದ ಟಿಕೆಟ್​ ಕೊಡಿ ಎಂದು ಹೇಳಿದ್ದೇನೆ. ಸುಮಲತಾ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ನಿರ್ಧಾರ ತೆಗೆದುಕೊಳ್ಳಲಿದೆ. ಅವರು ಪಕ್ಷೇತರವಾಗಿ ನಿಂತರೆ ಬಿಜೆಪಿ ತಿರ್ಮಾನದಂತೆ ನಾನು ನಡೆಯುತ್ತೇನೆ. ಕುಟುಂಬ ರಾಜಕೀಯವನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಹಾಗೇ ಸುಮಲತಾರಿಗೆ ನನ್ನ ಸಹಮತ ಇದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

One Reply to “ಕುತೂಹಲ ಮೂಡಿಸಿದ ಸುಮಲತಾ-ಎಸ್​.ಎಂ.ಕೃಷ್ಣಾ ಭೇಟಿ; ಹಿರಿಯರ ಆಶೀರ್ವಾದ ಸುಮಲತಾಗೆ ವರವಾಗುವುದೇ?”

  1. Dear Sumalatha Ma’am, please don’t even think that your husband was not in BJP that’s why you can’t able to join BJP.

    Ask yourself once, if you really want to be a politician you can be in a congress or JDS , But! if you want be a leader Please join BJP.

    At the end we all expect a good news from you i hope you will give the same.

Comments are closed.