ಎಸ್.ಎಂ.ಕೃಷ್ಣ ಪ್ರಚಾರಕ್ಕೆ ಬರ್ತಾರಾ?

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ರಂಗೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂರನೇ ದಿನ ಪ್ರಚಾರ ಮಾಡಿದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಪ್ರಚಾರ ಆರಂಭಿಸಿದರು.

ಜೆಡಿಎಸ್ ಶಾಸಕರು, ಸಚಿವರು ಸೇರಿದಂತೆ ಅನೇಕರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ. ಆದರೆ, ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮೀ ಅಶ್ವಿನ್‌ಗೌಡ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರು ಇನ್ನೂ ಮೈಚಳಿ ಬಿಟ್ಟಿಲ್ಲ. ಅಮರಾವತಿ ಚಂದ್ರಶೇಖರ್ ಹಾಗೂ ಅಂಬಿ ಅಭಿಮಾನಿಗಳು ಮಾತ್ರ ಮೈತ್ರಿ ಅಭ್ಯರ್ಥಿ ಪರ, ಮಾಜಿ ಸಂಸದೆ ರಮ್ಯಾ ಅಭಿಮಾನಿಗಳು ಜೆಡಿಎಸ್ ವಿರುದ್ಧ ಮತ ಕೇಳುತ್ತಿದ್ದಾರೆ. ಈ ನಡುವೆ, ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಪ್ರಚಾರಕ್ಕೆ ಕರೆತರುವ ಪ್ರಯತ್ನಕ್ಕೆ ಬಿಜೆಪಿ ನಾಯಕರು ಕೈಹಾಕಿದಂತೆ ಕಾಣುತ್ತಿಲ್ಲ.

ಕೃಷ್ಣರ ಒಂದು ಸಂದೇಶ ಹಲವು ಚುನಾವಣೆಗಳಲ್ಲಿ ಫಲಿತಾಂಶವನ್ನೇ ತಿರುಚಿದ ಉದಾಹರಣೆಗಳಿದ್ದು, ಅವರನ್ನು ಬಳಕೆ ಮಾಡಿಕೊಳ್ಳಲು ಪಕ್ಷ ಮುಂದಾಗುವುದೇ? ಎಸ್.ಎಂ.ಕೃಷ್ಣ ಪ್ರಚಾರಕ್ಕೆ ಬರುವರೇ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಜತೆಗೆ, ಕೃಷ್ಣರವರು ಬಿಜೆಪಿ ಸೇರಿದರೂ ಅವರ ಬೆಂಬಲಿಗರಾರೂ ‘ಕಮಲ’ ಮುಡಿದಿಲ್ಲ. ಅವರ ಸಹೋದರನ ಪುತ್ರ ಗುರುಚರಣ್ ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಹಲವರು ‘ಕೈ’ ಹಿಡಿಯದ, ‘ಕಮಲ’ ಮುಡಿಯದಂತಹ ಅತಂತ್ರ ಸ್ಥಿತಿಯಲ್ಲಿದ್ದು, ಈ ಚುನಾವಣೆಯಲ್ಲಿ ಯಾವ ಪಾತ್ರ ವಹಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಇನ್ನು ಅಂಬಿ ಅಭಿಮಾನಿಗಳು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಅಂಬರೀಶ್ ಪ್ರಚಾರಕ್ಕೆ ಬರುತ್ತಾರಾ, ಇಲ್ಲವಾ ಎಂಬ ಪ್ರಶ್ನೆಗಳಿವೆ. ಆದರೆ, ಅವರು ಪ್ರಚಾರಕ್ಕೆ ಬರುವುದು ಶೇ.99 ರಷ್ಟು ಅನುಮಾನ.

ಅಂತೆಯೆ, ಮಾಜಿ ಸಂಸದೆ ರಮ್ಯಾ ಕ್ಷೇತ್ರ ಮರೆತಿದ್ದಾರೆ. ಆದರೂ ಅವರಿಗೆ ಕೆಲವು ಬೆಂಬಲಿಗರಿದ್ದು, ಅವರು ಜೆಡಿಎಸ್ ಅದರಲ್ಲೂ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಸಿಡಿದು ನಿಂತಿದ್ದಾರೆ. ಬಿಜೆಪಿಯನ್ನು ಕಟ್ಟಿಹಾಕಲು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ 37 ಸ್ಥಾನಗಳನ್ನಷ್ಟೇ ಗೆದ್ದಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನೀಡಿದ್ದಾರೆ. ಆದ್ದರಿಂದ ರಾಹುಲ್‌ಗಾಂಧಿ ಆಪ್ತರಲ್ಲಿ ಒಬ್ಬರಾಗಿರುವ ರಮ್ಯಾ, ದೋಸ್ತಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುತ್ತಾರಾ? ಜೆಡಿಎಸ್ ಪರ ಕೆಲಸ ಮಾಡಲು ತಮ್ಮ ಬೆಂಬಲಿಗರಿಗೆ ಸಂದೇಶ ನೀಡುತ್ತಾರಾ ಎಂಬ ಚರ್ಚೆಗಳು ಶುರುವಾಗಿವೆ.