ಕಾಗದದ ದೋಣಿ ಬಿಟ್ಟು ಪ್ರತಿಭಟನೆ

ಕಳಸ: ಮಂಜಿನಕಟ್ಟೆ ಸಮೀಪ ರಸ್ತೆಯ ಹೊಂಡಕ್ಕೆ ಕಳಸದ ಕೆಲ ಯುವಕರು ದೋಣಿ ಮಾಡಿ ಬಿಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಜನವರಿಯಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಕೇವಲ ಮೂರು ತಿಂಗಳಿನಲ್ಲಿ ಹೊಂಡ ಬಿದ್ದು ಶಿಥಿಲಾವಸ್ಥೆ ತಲುಪಿದ ಈ ರಸ್ತೆಯ ಅವ್ಯವಸ್ಥೆ ಬಗ್ಗೆ ವ್ಯಂಗ್ಯವಾಗಿ ಈಜುಕೊಳದ ಉದ್ಘಾಟನೆಯನ್ನು ಸನ್ನಿಲಿಯೋನ್ ಮತ್ತು ದೀಪಿಕಾ ಪಡುಕೋಣೆ ಮಾಡಲಿದ್ದಾರೆ ಎಂದು ಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. ಇದು ಸಾಕಷ್ಟು ವೈರಲಾಗಿ ಇಲಾಖೆಯನ್ನು ಮುಜುಗರವನ್ನುಂಟು ಮಾಡಿತ್ತು. ಭಾನುವಾರ ಮಂಜಿನಕಟ್ಟೆ ಸಮೀಪ ಗುಂಡಿಯಲ್ಲಿ ಕಾಗದದ ದೋಣಿಗಳನ್ನು ಬಿಡುವ ಮೂಲಕ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಳಸ ನಾಗರಿಕರಾದ ಟಿಟ್ಟು ತೋಮಸ್ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಪ್ರತಿಯೊಂದು ಕಾಮಗಾರಿಯೂ ಕಳಪೆ ಮಟ್ಟದಲ್ಲಿ ನಡೆಯುತ್ತಿರುವುರಿಂದ ಹೋಬಳಿಯ ಬಹುತೇಕ ರಸ್ತೆಗಳು ಶಿಥಿಲಾವಸ್ಥೆ ಕಾಣುತ್ತಿವೆ. ಇಂಜಿನಿಯರ್​ರನ್ನು ಅಮಾನತು ಮಾಡಬೇಕು. ಐದು ವರ್ಷಗಳಿಂದ ಮಾಡಿದ ಕಾಮಗಾರಿಯ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನೊರ್ವ ನಾಗರಿಕ ರಿಜ್ವಾನ್ ಮಾತನಾಡಿ, 1.16 ಕೋಟಿ ರೂ. ವೆಚ್ಚದ ಕಾಮಗಾರಿ ಮೂರು ತಿಂಗಳಿನಲ್ಲಿ ಶಿಥಿಲಗೊಂಡಿರುವುದು ಕಾಮಗಾರಿಯ ಗುಣಮಟ್ಟ ತಿಳಿಸುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕಳಸದ ನಾಗರಿಕರಾದ ವೀರೇಂದ್ರ, ಕೆ.ಸಿ. ಮಹೇಶ್, ಅನಿಲ್, ಸುನೀಲ್, ಶಿವಾನಂದ, ಹರ್ಷ, ಸುಬ್ರಹ್ಮಣ್ಯ, ಇರ್ಷಾದ್ ಇತರರು ಇದ್ದರು.