ಮಗಳ ಅನಾರೋಗ್ಯ: ನಿದ್ರೆಯಿಲ್ಲದೆ ಆಸ್ಪತ್ರೆಯಲ್ಲೇ ರಾತ್ರಿ ಕಳೆದರೂ ಪಂದ್ಯ ಗೆಲ್ಲಿಸಿ ಕ್ರೀಡಾ ಬದ್ಧತೆ ಮೆರೆದ ರಾಯ್​

ಲಂಡನ್​: ನಿನ್ನೆ(ಶುಕ್ರವಾರ) ಇಂಗ್ಲೆಂಡ್​ ಹಾಗೂ ಪಾಕಿಸ್ತಾನದ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದ ವೇಳೆ ಆಂಗ್ಲ ತಂಡದ ಆಟಗಾರನೊಬ್ಬ ಕ್ರೀಡಾ ಬದ್ಧತೆ ಮೆರೆದಂತಹ ಘಟನೆ ನಡೆದಿದೆ.

ಪಾಕ್​ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ಅಮೋಘ ಜಯಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಉತ್ತಮ ಆಟವಾಡಿದ ಜಾಸನ್​ ರಾಯ್​ 89 ಎಸೆತಗಳಲ್ಲಿ 114 ರನ್​ ಬಾರಿಸುವ ಮೂಲಕ ಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ, ಜಾಸನ್​ ಶತಕ ಸಂಭ್ರಮಿಸುವ ಸ್ಥಿತಿಯಲ್ಲಿ ಇರಲಿಲ್ಲ ಎಂಬುದ ಸತ್ಯ.

ಶುಕ್ರವಾರ ಪಂದ್ಯ ನಡೆದರೆ ಅದರ ಹಿಂದಿನ ಗುರುವಾರ ರಾತ್ರಿ ಇಡೀ ಜಾಸನ್​ ನಿದ್ದೆ ಇಲ್ಲದೇ ಕಳೆದಿದ್ದಾರೆ. ಮಗಳು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಅವಳನ್ನು ಆಸ್ಪತ್ರೆಗೆ ದಾಖಲಿಸಿ ಪತ್ನಿಯೊಂದಿಗೆ ಜಾಸನ್​ ಆಸ್ಪತ್ರೆಯಲ್ಲೇ ಉಳಿದಿದ್ದರು. ಕೇವಲ ಎರಡೇ ಗಂಟೆ ನಿದ್ದೆ ಮಾಡಿದ್ದ ಜಾಸನ್​ ಮರುದಿನ ಬೆಳಗ್ಗೆ ಬಂದು ಬ್ಯಾಟ್​ ಬೀಸಿದರು. ಎಲ್ಲಿಯೂ ತನಗೆ ಆಯಾಸವಾಗಿದೆ ಎಂಬುದನ್ನು ತೋರಿಸಿಕೊಳ್ಳದೇ ಉತ್ತಮ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖರಾದರು.

ಬೆಳಗಿನ ಸಮಯದಲ್ಲಿ ತುಸು ಕಷ್ಟವಾಯಿತು. ಆದರೂ ಇದು ನನಗೂ ಹಾಗೂ ನನ್ನ ಕುಟುಂಬಕ್ಕೂ ವಿಶೇಷ ಕ್ಷಣ ಎಂದು ರಾಯ್​ ಬಿಬಿಸಿ ರೆಡಿಯೋಗೆ ತಿಳಿಸಿದ್ದಾರೆ.

ಅನಾರೋಗ್ಯ ಕಾರಣ ನನ್ನ ಮಗಳನ್ನು ತಡರಾತ್ರಿ 1:30ರಲ್ಲಿ ಆಸ್ಪತ್ರೆಗೆ ದಾಖಲಿಸಿದೆವು. ಬೆಳಗ್ಗೆ 8:30ರ ವರೆಗೆ ನಾನು ಅಲ್ಲೆ ಉಳಿದಿದ್ದೆ. ಬಳಿಕ ತುಸು ಸಮಯ ನಿದ್ದೆ ಮಾಡಿ ಮತ್ತೆ ವಾರ್ಮ್​ ಅಪ್​ ಮಾಡಿಕೊಂಡ ಕ್ರೀಡಾಂಗಣಕ್ಕೆ ಇಳಿದೆ ಎಂದು ರಾಯ್​ ಹೇಳಿದ್ದಾರೆ.

ಕೇವಲ 84 ಎಸೆತದಲ್ಲಿ 114 ರನ್​ ಶತಕ ದಾಖಲಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಾಯ್​, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ನಿನ್ನೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 340 ರನ್​ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ ಆಂಗ್ಲ ಪಡೆ 49.3 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 341 ರನ್​ ಗಳಿಸುವ ಮೂಲಕ ಐದು ಏಕದಿನ ಪಂದ್ಯದ ಸರಣಿಯಲ್ಲಿ 3-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು. (ಏಜೆನ್ಸೀಸ್​)