ವೀರಾಪುರದ ರಸ್ತೆ ಕೆಸರುಗದ್ದೆ

ತರೀಕೆರೆ: ವೀರಾಪುರ ಹೊಸೂರು ಗ್ರಾಮದ ಜನರಿಗೆ ಗುಂಡಿ, ಗೊಟರಿಂದ ಕೂಡಿರುವ ಕೊಚ್ಚೆ ರಸ್ತೆಯೇ ಗತಿಯಾಗಿದೆ.

ಕೊರಟೇಕೆರೆ ಗ್ರಾಪಂ ವ್ಯಾಪ್ತಿಯ ವೀರಾಪುರ ಹೊಸೂರು ಗ್ರಾಮದಲ್ಲಿ ಬಡ ಕುಟುಂಬಗಳೇ ಹೆಚ್ಚು ವಾಸಿಸುತ್ತಿವೆ. ಗ್ರಾಮದ ಒಂದು ರಸ್ತೆಯೂ ಸಮರ್ಪಕವಾಗಿಲ್ಲ. ಮಳೆಗಾಲ ಬಂತೆಂದರೆ ಇಲ್ಲಿನ ಜನರ ಗೋಳು ಘೊರವಾಗಿರುತ್ತದೆ. ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪ್ರತಿನಿತ್ಯ ಕೆಸರುಮಯ ರಸ್ತೆಯಲ್ಲಿ ತೆರಳಬೇಕೇ ಹೊರತು ಅನ್ಯ ಮಾರ್ಗವೇ ಇಲ್ಲ.

ಇಲ್ಲಿಯವರೆಗೆ ಗ್ರಾಪಂ ಆಡಳಿತದಿಂದ ಒಂದೆರಡು ಕಡೆ ಚರಂಡಿ ವ್ಯವಸ್ಥೆ ಮಾಡಲಾಗಿದೆಯಾದರೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಗ್ರಾಮದ ಎಲ್ಲ ಬೀದಿಗಳಲ್ಲಿ ಚರಂಡಿ ನಿರ್ಮಾಣ ಮಾಡಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಪ್ರತಿ ವರ್ಷವೂ ಮಳೆ ನೀರು ಎಲ್ಲೂ ಹರಿಯದೆ ನಿಂತಲ್ಲೇ ನಿಂತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳನ್ನು ಹೊತ್ತು ತರುತ್ತಿದೆ. ಕೆಲವೊಮ್ಮೆ ಏಕ ಕಾಲಕ್ಕೆ ಗ್ರಾಮಕ್ಕೆ ಗ್ರಾಮವೇ ಅನಾರೋಗ್ಯಕ್ಕೆ ತುತ್ತಾಗಿ ಎಲ್ಲರೂ ಆಸ್ಪತ್ರೆ ಸೇರಿದ್ದೂ ಇದೆ.

ಚುನಾವಣೆ ಸಮಯದಲ್ಲಿ ಗ್ರಾಮಕ್ಕೆ ಮತಕ್ಕಾಗಿ ಬರುವವರಿಗೆ ಇಲ್ಲಿನ ವಾಸ್ತವ ಗೊತ್ತಿದ್ದರೂ ನಂತರದ ದಿನಗಳಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಅವರು ನೀಡುವ ಭರವಸೆ ಈಡೇರಿಸಬಹುದೆಂದು ಚಾತಕ ಪಕ್ಷಿಯಂತೆ ಕಾಯುವ ಜನರಿಗೆ ನಿರಾಸೆಯೇ ಗತಿ. ಗ್ರಾಮಸ್ಥರು ರಸ್ತೆ ನಿರ್ವಿುಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ.

ಇನ್ನಾದರೂ ಗ್ರಾಪಂ ಆಡಳಿತ ಗ್ರಾಮವನ್ನು ಸಂಪೂರ್ಣ ಸ್ವಚ್ಛಗೊಳಿಸಿ ರಸ್ತೆ ಅಭಿವೃದ್ಧಿ ಪಡಿಸದೆ ಹೋದರೆ ಮತ್ತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜನ ಆಸ್ಪತ್ರೆ ಸೇರಬೇಕಾಗುತ್ತದೆ.

 

250ಕ್ಕೂ ಅಧಿಕ ಮನೆಗಳಿರುವ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ರಸ್ತೆ, ಚರಂಡಿಗಳಿಲ್ಲದೆ ಮಳೆಗಾಲದಲ್ಲಿ ನೀರು ನಿಂತಲ್ಲೇ ನಿಲ್ಲುತ್ತದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಮನೆಯೊಂದರಲ್ಲಿ ಎರಡು ಮೂರು ಜನ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಇದೆ. ಕೆಸರುಮಯ ರಸ್ತೆಯಲ್ಲೇ ಮೂರು ಕಿಮೀಗೂ ಹೆಚ್ಚು ದೂರ ಸಾಗಿ ಬಗ್ಗವಳ್ಳಿ ಪಡಿತರ ಕೇಂದ್ರದಿಂದ ಪಡಿತರ ತರಬೇಕಾಗಿದ್ದು, ನಮ್ಮ ಗೋಳು ಹೇಳ ತೀರದಾಗಿದೆ.

| ವಿ.ಎನ್.ದೇವರಾಜ್, ಸ್ಥಳೀಯ ನಿವಾಸಿ

 

ಆ. 4 ರಂದು ತಾಪಂ ಸಭಾಂಗಣದಲ್ಲಿ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಅಲ್ಲಿ ವೀರಾಪುರ ಹೊಸೂರು ಗ್ರಾಮದ ಸಮಸ್ಯೆ ಬಗ್ಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

| ಸಿ.ಸತ್ಯಭಾಮಾ, ಜಿಪಂ ಸಿಇಒ

 

ಗ್ರಾಪಂಗೆ ಸರ್ಕಾರದಿಂದ ಬರುವ ಅನುದಾನ ಯಾವುದಕ್ಕೂ ಸಾಕಾಗಲ್ಲ. ವೀರಾಪುರ ಹೊಸೂರು ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಬೇಕೆಂದರೆ ವಿಶೇಷ ಅನುದಾನ ಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಿರ್ವಹಿಸಬಹುದಾದರೂ ಯಾರೊಬ್ಬರೂ ಮುಂದೆ ಬರಲ್ಲ. ಕಳೆದ ಬಾರಿ ಬರಗಾಲವಿದೆ ಎಂಬ ಕಾರಣಕ್ಕೆ ಕಂದಾಯ ಸರಿಯಾಗಿ ಪಾವತಿಸಿಲ್ಲ. ಇತ್ತೀಚೆಗೆ ಚರಂಡಿ ಸ್ವಚ್ಛಗೊಳಿಸಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸಲಾಗಿದೆ.

| ಎಲ್.ಜೆ.ಮಹೇಶ್, ಕೊರಟೇಕೆರೆ ಪಿಡಿಒ