ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಕ್ಷಣ… ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮರಳಿ ಬಂದ ಸ್ಪೇಸ್ ಎಕ್ಸ್ನ ಕ್ಯಾಪ್ಸೂಲ್ 4 ಪ್ಯಾರಚೂಟ್ಗಳ ಸಹಾಯದಿಂದ ನಿಧಾನವಾಗಿ ಸಮುದ್ರದ ಮೇಲೆ ಬಂದಿಳಿಯಿತು. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ವಾಪಸ್ಸಾಗುತ್ತಿದ್ದಂತೆ ಜಗತ್ತಿನಾದ್ಯಂತ ಸಂಭ್ರಮ ಮನೆ ಮಾಡಿತು. ಭಾರತದಲ್ಲಿ ಸಂಭ್ರಮ ಎಲ್ಲೆ ಮೀರಿತ್ತು.
ಸುನಿತಾ ವಿಲಿಯಮ್ಸ್ , ಬುಚ್ ವಿಲ್ಮೋರ್, ನಾಸಾದ ನಿಕ್ ಹೇಗ್ ಹಾಗೂ ರಷ್ಯಾದ ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಹೊತ್ತ ಸ್ಪೇಸ್ಎಕ್ಸ್ನ ಡ್ರಾ್ಯಗನ್ ಮಾಡ್ಯೂಲ್ ಮಂಗಳವಾರ ಸಂಜೆ 5.57ಕ್ಕೆ (ಸ್ಥಳೀಯ ಕಾಲಮಾನ), (ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗಿನ ಜಾವ 3.27ಕ್ಕೆ) ಫ್ಲೋರಿಡಾದ ಕ್ಯಾನ್ಹ್ಯಾಂಡಲ್ನಲ್ಲಿರುವ ಟಲ್ಲಹಸ್ಸಿ ಕರಾವಳಿಯ ಗಲ್ಪ್ ಆಫ್ ಮೆಕ್ಸೀಕೋದಲ್ಲಿ ಬಂದಿಳಿಯಿತು.
ಸಮುದ್ರದ ಮೇಲೆ ಕ್ಯಾಪ್ಸುಲ್ ಇಳಿದ ಒಂದು ಗಂಟೆಯ ಬಳಿಕ ಗಗನಯಾತ್ರಿಗಳನ್ನು ರಿಕ್ಲೈನಿಂಗ್ ಸ್ಟ್ರೆಚರ್ಗಳ ಮೇಲೆ ಮಲಗಿಸಿ ಕ್ಯಾಪ್ಸುಲ್ನಿಂದ ಹೊರಗೆ ಕರೆತರಲಾಯಿತು. ಸ್ಟ್ರೆಚರ್ ಮೇಲೆ ಹೊರಬರುತ್ತಿದ್ದಂತೆ ಸುನಿತಾ ಕ್ಯಾಮರಾಗಳ ಕಡೆ ಕೈಬೀಸಿ ಮುಗುಳ್ನಗೆ ಬೀರಿದರು. ವೈದ್ಯಕೀಯ ಪರೀಕ್ಷೆಯ ಬಳಿಕ ಗಗನಯಾತ್ರಿಗಳನ್ನು ಹೂಸ್ಟನ್ನಲ್ಲಿರುವ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ಗೆ ಕರೆತರಲಾಯತು. ಅಲ್ಲಿ ಗಗನಯಾತ್ರಿಗಳು ಅವರ ಕುಟುಂಬಸ್ಥರನ್ನು ಭೇಟಿ ಮಾಡಿದರು.
900 ಗಂಟೆ ಸಂಶೋಧನೆ
ಸುನಿತಾ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾಗ ಒಟ್ಟು 900 ಗಂಟೆ ಸಂಶೋಧನೆ ನಡೆಸಿದ್ದಾರೆ. ಇವರು ಸಸ್ಯಗಳ ಬೆಳವಣಿಗೆ ಮತ್ತು ಗುಣಮಟ್ಟ, ರಕ್ತಸಂಬಂಧಿ ಕಾಯಿಲೆ, ಕ್ಯಾನ್ಸರ್ ಗುಣಮಾಡಲು ಸ್ಟೆಮ್ೆಲ್ ತಂತ್ರಜ್ಞಾನದ ಕುರಿತು ಮತ್ತು ಬಾಹ್ಯಾಕಾಶದಲ್ಲಿ ಸೂಕ್ಷಾ್ಮಣು ಜೀವಿಗಳು ಬದುಕಬಹುದೆ ಎಂಬ ವಿಷಯಗಳ ಜತೆ ಸುಮಾರು 150 ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು.
ಡಾಲ್ಪಿನ್ಗಳಿಂದ ಸ್ವಾಗತ
ಸುನಿತಾ ವಿಲಿಯಮ್್ಸ ಇದ್ದ ಡ್ರಾ್ಯಗನ್ ಕ್ಯಾಪ್ಸುಲ್ ಸಮುದ್ರದ ಮೇಲೆ ಬಂದಿಳಿಯುತ್ತಿದ್ದಂತೆ ಡಾಲ್ಪಿನ್ಗಳ ಹಿಂಡು ಕ್ಯಾಪ್ಸುಲ್ ಬಳಿ ಬಂದು ಗಗನಯಾತ್ರಿಗಳಿಗೆ ಸ್ವಾಗತ ಕೋರಿದವು. ಹಲವು ಡಾಲ್ಪಿನ್ಗಳು ಕ್ಯಾಪ್ಸುಲ್ ಬಳಿಯೇ ಈಜುತ್ತಿರುವುದು ಕಂಡು ಬಂದಿತು.
19 ಕೋಟಿ ಕಿ.ಮೀ. ಪ್ರಯಾಣ
ಸುನಿತಾ ವಿಲಿಯಮ್್ಸ ಮತ್ತು ಬುಚ್ ವಿಲ್ಮೋರ್ ಅವರು 286 ದಿನ ಬಾಹ್ಯಾಕಾಶದಲ್ಲಿ ಇದ್ದರು. ಅವರು 9 ತಿಂಗಳಲ್ಲಿ ಒಟ್ಟು 121,347,491 ಮೈಲಿ (19,50,00,000 ಕಿ.ಮೀ.) ಸಂಚರಿಸಿದರು. ಈ ಅವಧಿಯಲ್ಲಿ ಅವರು ಭೂಮಿಯನ್ನು ಒಟ್ಟು 4,576 ಬಾರಿ ಸುತ್ತಿದರು.
608 ದಿನ ವಾಸ್ತವ್ಯ
ಸುನಿತಾ ವಿಲಿಯಮ್್ಸ ಅವರು ಇದುವರೆಗೆ 3 ಬಾರಿ ಬಾಹ್ಯಾಕಾಶಯಾನ ಕೈಗೊಂಡಿದ್ದು ಈ ಬಾರಿಯ 286 ದಿನದೊಂದಿಗೆ ಒಟ್ಟು 608 ದಿನ ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ದಾಖಲೆ ಬರೆದಿದ್ದಾರೆ. ಬುಚ್ ವಿಲ್ಮೋರ್ 464 ದಿನ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಸಿಲುಕಿದ್ದೇಕೆ?
ಸುನಿತಾ ವಿಲಿಯಮ್್ಸ ಮತ್ತು ಬುಚ್ ವಿಲ್ಮೋರ್ ಅವರು 8 ದಿನಗಳ ಮಿಷನ್ಗಾಗಿ 2024ರ ಜೂನ್ 5 ರಂದು ಬೋಯಿಂಗ್ನ ಸ್ಟಾರ್ಲೈನರ್ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಸ್ಟಾರ್ಲೈನರ್ ನೌಕೆಯ ಪ್ರಥಮ ಮಾನವಸಹಿತ ಹಾರಾಟ ಇದಾಗಿತ್ತು. ಆದರೆ ಸ್ಟಾರ್ಲೈನರ್ ಕ್ಯಾಪ್ಸುಲ್ನ ಪ್ರೊಪಲ್ಶನ್ನಲ್ಲಿ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಸುನಿತಾ ಮತ್ತು ಬುಚ್ ಅವರು ವಾಪಸ್ ಬರುವುದು ಅಪಾಯಕಾರಿ ಎಂದು ತೀರ್ವನಿಸಲಾಯಿತು. ಹಾಗಾಗಿ ಇಬ್ಬರೂ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದಿದ್ದರು. 2024ರ ಸೆಪ್ಟೆಂಬರ್ನಲ್ಲಿ ಸ್ಟಾರ್ಲೈನರ್ ನೌಕೆ ಭೂಮಿಗೆ ವಾಪಸ್ಸಾಗಿತ್ತು.
45 ದಿನ ಪುನರ್ವಸತಿ
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದಾಗ ಅವರ ಮೂಳೆಗಳು, ಸ್ನಾಯುಗಳು ಸ್ವಲ್ಪ ಮಟ್ಟಿಗೆ ತಮ್ಮ ಸಾಮರ್ಥ್ಯ ಕಳೆದುಕೊಂಡಿ ರುತ್ತವೆ. ಈ ಹಿನ್ನೆಲೆಯಲ್ಲಿ 9 ತಿಂಗಳ ಬಳಿಕ ಭೂಮಿಗೆ ವಾಪಸ್ಸಾಗಿರುವ ಸುನಿತಾ ಮತ್ತು ಬುಚ್ 45 ದಿನಗಳ ಕಾಲ ಪುನರ್ವಸತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ. ಗಗನಯಾತ್ರಿಗಳು ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಒಟ್ಟು 3 ಹಂತದಲ್ಲಿ ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಪ್ರತಿ ದಿನ 2 ಗಂಟೆಗಳ ಕಾಲ ನಾಸಾದ ವಿವಿಧ ಕೇಂದ್ರಗಳಲ್ಲಿ ತರಬೇತಿ ಪಡೆಯಬೇಕು ಮತ್ತು ವೈದ್ಯಕೀಯ ತಪಾಸಣೆಗಳಿಗೆ ಒಳಪಡಬೇಕಾಗುತ್ತದೆ. ಸುನಿತಾ ಮತ್ತು ಬುಚ್ ಮತ್ತೆ ಮೊದಲಿ ನಂತಾಗಲೂ ಹಲವು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗುತ್ತದೆ.
ಯೋಜನೆಗೆ ಬೈಡೆನ್ ತಡೆಯಾಗಿದ್ದರು!
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸಿಲುಕಿದ್ದ ಇಬ್ಬರು ಗಗನಯಾತ್ರಿಗಳನ್ನು ವಾಪಸ್ ಕರೆತರುವುದಾಗಿ ನಾವು ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ಮಾಜಿ ಅಧ್ಯಕ್ಷ ಜೋ ಬೈಡೆನ್ ರಾಜಕೀಯ ಕಾರಣಗಳಿಂದ ನಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು 9 ತಿಂಗಳು ಬಾಹ್ಯಾಕಾಶದಲ್ಲಿ ಉಳಿಯುವಂತಾಯಿತು ಎಂದು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಆರೋಪಿಸಿದ್ದಾರೆ.
ತವರೂರಿನಲ್ಲಿ ಸಂಭ್ರಮ
ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಸುನಿತಾ ವಿಲಿಯಮ್್ಸ ಅವರ ಪೂರ್ವಜರ ಗ್ರಾಮವಾದ ಜುಲಾಸನ್ ಗ್ರಾಮಸ್ಥರು ಸುನಿತಾ ಅವರು ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾದ ಬಳಿಕ ಪಟಾಕಿ ಸಿಡಿಸಿ, ಸಿಹಿ ಹಂಚಿ, ಹರ ಹರ ಮಹಾದೇವ್ ಘೋಷಣೆ ಕೂಗುತ್ತ ಸಂಭ್ರಮಾಚರಣೆ ನಡೆಸಿದರು. ಸುನಿತಾ ಭೂಮಿಗೆ ಮರಳಿದ್ದು ಭಾರತೀಯ ಕಾಲಮಾನದ ಪ್ರಕಾರ ಬುಧವಾರ ನಸುಕಿನ ಜಾವ 3.27ರ ಸುಮಾರಿಗೆ, ಆ ಸಮಯದಲ್ಲೂ ಗ್ರಾಮಸ್ಥರೆಲ್ಲರೂ ಟಿವಿಯಲ್ಲಿ ನೇರಪ್ರಸಾರ ವೀಕ್ಷಿಸುತ್ತ ಸುನಿತಾ ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ಪ್ರಾರ್ಥಿಸಿದರು.
‘ಸುನಿತಾ ವಾಪಸ್ ಬರುತ್ತಿದ್ದಂತೆ ನಾವು ಸಂತೋಷದಿಂದ ಕುಣಿದು ಕುಪ್ಪಳಿಸಿದೆವು. ದೇವರು ನಮ್ಮ ಪ್ರಾರ್ಥನೆಯನ್ನು ಆಲಿಸಿ ಸುನಿತಾಳನ್ನು ಸುರಕ್ಷಿತವಾಗಿ ಕರೆತಂದಿದ್ದಾನೆ’ ಎಂದು ಸುನಿತಾರ ಸೋದರ ಸಂಬಂಧಿ ದಿನೇಶ್ ರಾವಲ್ ತಿಳಿಸಿದ್ದಾರೆ. ಸುನಿತಾ ವಿಲಿಯಮ್್ಸ ಅವರ ತಂದೆ ದೀಪಕ್ ಪಾಂಡ್ಯ ಗುಜರಾತ್ನ ಜುಲಾಸನ್ನವರು. ಇವರು 1957ರಲ್ಲಿ ವೈದ್ಯಕೀಯ ತರಬೇತಿಗಾಗಿ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಸುನಿತಾ ಅವರ ತಾಯಿ ಸ್ಲೊವೇನಿಯನ್-ಅಮೇರಿಕನ್ ಮೂಲದ ಉರ್ಸಲಿನ್ ಬೋನಿ ಜಲೋಕರ್. ಸುನಿತಾ ಅವರ ಪತಿ ಮೈಕೆಲ್ ಜೆ. ವಿಲಿಯಮ್ಸ್.
ಭಾರತೀಯ ಸಂಸ್ಕೃತಿ ಬಗ್ಗೆ ಮೆಚ್ಚುಗೆ
‘ನಾನು ಭಾರತೀಯ ಪರಂಪರೆಯನ್ನು ಮೆಚ್ಚುತ್ತೇನೆ. ಅದರ ಒಂದು ಭಾಗವನ್ನು ನನ್ನೊಂದಿಗೆ ಬಾಹ್ಯಾಕಾಶಕ್ಕೂ ತೆಗೆದುಕೊಂಡು ಹೋಗಿದ್ದೇನೆ. ಗಣೇಶನ ವಿಗ್ರಹ ಸದಾ ನನ್ನ ಮನೆಯಲ್ಲಿ ಇರುತ್ತದೆ. ನಾನು ಎಲ್ಲಿಯೇ ವಾಸಿಸಿದರೂ ಗಣೇಶ ನನ್ನೊಂದಿಗಿದ್ದಾನೆ. ಹಾಗಾಗಿ ಗಣೇಶ ಸಹ ನನ್ನೊಂದಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಬರಬೇಕಾಯಿತು. ಕೊನೆಯ ಬಾರಿ ನಾನು ಉಪನಿಷತ್ತುಗಳ ಸಣ್ಣ ಪ್ರತಿಯನ್ನು ನನ್ನೊಂದಿಗೆ ಬಾಹ್ಯಾಕಾಶಕ್ಕೆ ತಂದಿದ್ದೆ. ನನಗೆ ಯಾವಾಗಲೂ ಸಾಕಷ್ಟು ಭಾರತೀಯ ಆಹಾರ ಸಿಗುವುದಿಲ್ಲ. ಆದರೆ ನಾನು ಬಾಹ್ಯಾಕಾಶದಲ್ಲೂ ಸಮೋಸಾವನ್ನು ತಿಂದಿದ್ದೇನೆ’ ಎಂದು ಭಾರತದೊಂದಿಗಿನ ತಮ್ಮ ನಂಟಿನ ಬಗ್ಗೆ ಸುನಿತಾ ವಿಲಿಯಮ್್ಸ ಅವರು ಹೇಳಿಕೊಂಡಿದ್ದರು.
ಹೀಗಿತ್ತು ಆಹಾರಕ್ರಮ
ಸುನಿತಾ ಬಾಹ್ಯಾಕಾಶದಲ್ಲಿ ದೈಹಿಕ ಆರೋಗ್ಯಕ್ಕಾಗಿ ಏನು ಮಾಡುತ್ತಿದ್ದರು, ಅವರ ಆಹಾರ ಕ್ರಮ ಏನಿತ್ತು ಎಂಬ ಮಾಹಿತಿಯನ್ನು ನಾಸಾ ಹಂಚಿಕೊಂಡಿದೆ. ತಣ್ಣಗಿನ ಮಾಂಸ, ಮೊಟ್ಟೆಗಳನ್ನು ಬೇಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ಪದಾರ್ಥಗಳನ್ನು ಬಿಸಿ ಮಾಡಲು ಅಗತ್ಯ ಇರುವ ಪಾತ್ರೆಗಳು ಅಲ್ಲಿದ್ದವು. 530 ಗ್ಯಾಲನ್ ನೀರನ್ನು ಶೇಖರಿಸಲು ಒಂದು ಟ್ಯಾಂಕ್ ನಿಲ್ದಾಣದಲ್ಲಿತ್ತು. ಮೂಳೆ, ಸ್ನಾಯು ಹಾಗೂ ಮಾಂಸ ಖಂಡಗಳ ಬಲವರ್ಧನೆಗೆ ಸುನಿತಾ ಹಾಗೂ ಬುಚ್ ಪ್ರತಿ ದಿನ ಎರಡು ಗಂಟೆ ವ್ಯಾಯಾಮ ಮಾಡುತ್ತಿದ್ದರು.
ಉಪಾಹಾರ
1.ಹಾಲಿನ ಪುಡಿ
2.ಧಾನ್ಯಗಳು 3. ಪ್ರೋಟಿನ್ ಹಾಗೂ ಇತರ ಮಾತ್ರೆಗಳು
4.ಬೇಯಿಸಿದ ಮೊಟ್ಟೆಗಳು
5. ತಾಜಾ ಹಣ್ಣು, ತರಕಾರಿಗಳು ( 3 ತಿಂಗಳ ಬಳಕೆಗೆ ಮಾತ್ರ),
6.ಪಿಜ್ಜಾ , 7.ಸೂಪ್
ಊಟ
1. ಹುರಿದ ಕೋಳಿಮಾಂಸ
2. ಟ್ಯೂನ್ ಮೀನುಗಳು
3. ಬೇಯಿಸಿದ ಮಾಂಸ
ಅಭಿನಂದನೆಗಳ ಮಹಾಪೂರ
ಸುರಕ್ಷಿತವಾಗಿ ಮರಳಿದ ಸುನಿತಾ ವಿಲಿಯಮ್ಸ್ ಅವರಿಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಸಚಿವರು, ಗಣ್ಯರು ಅಭಿನಂಧಿಸಿದ್ದಾರೆ.
ನಾಸಾದ ಕ್ರೂ 9 ಮಿಷನ್ ಸುರಕ್ಷಿತವಾಗಿ ವಾಪಸ್ಸಾಗಲು ಶ್ರಮಿಸಿದ ಇಡೀ ತಂಡಕ್ಕೆ ಅಭಿನಂದನೆಗಳು. ಅವರ ಐತಿಹಾಸಿಕ ಪ್ರಯಾಣ ದೃಢನಿಶ್ಚಯ, ಅಸಾಧಾರಣ ಧೈರ್ಯದ ಕತೆಯಾಗಿದೆ. ಅವರ ಅಚಲ ಸಂಕಲ್ಪಕ್ಕೆ ನನ್ನ ವಂದನೆಗಳು ಮತ್ತು ಅವರ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.
| ದ್ರೌಪದಿ ಮುಮು ರಾಷ್ಟ್ರಪತಿ
ಈ ಬಾಹ್ಯಾಕಾಶ ಯಾನ ಸುನಿತಾ ಅವರ ಧೈರ್ಯ, ಅಪರಿಮಿತ ಚೈತನ್ಯದ ಪರೀಕ್ಷೆಯಾಗಿತ್ತು. ಸಂಕಷ್ಟದ ಸಮಯದಲ್ಲೂ ಅವರ ದೃಢನಿಶ್ಚಯದ ಮನೋಭಾವ ಕೋಟ್ಯಂತರ ಜನರಿಗೆ ಸ್ಪೂರ್ತಿ ನೀಡುತ್ತದೆ. ಬಾಹ್ಯಾಕಾಶ ಯಾನವೆಂದರೆ ಮಾನವ ಸಾಮರ್ಥ್ಯದ ಮಿತಿಗಳನ್ನು ಪರೀಕ್ಷಿಸುವುದು, ಕನಸು ಕಾಣುವ ಧೈರ್ಯ ಮತ್ತು ಕನಸುಗಳನ್ನು ನನಸಾಗಿಸುವ ಧೈರ್ಯ ಹೊಂದಿರುವುದಾಗಿದೆ.
| ನರೇಂದ್ರ ಮೋದಿ ಪ್ರಧಾನಿ
ಸುನಿತಾ ವಿಲಿಯಮ್ಸ್ ನಿಮಗೆ ಸ್ವಾಗತ, ಐಎಸ್ಎಸ್ನಲ್ಲಿ ಸುದೀರ್ಘ ಕಾರ್ಯಾಚರಣೆಯ ಬಳಿಕ ನೀವು ಸುರಕ್ಷಿತವಾಗಿ ವಾಪಸ್ಸಾಗಿರುವುದು ಗಮನಾರ್ಹ ಸಾಧನೆ. ಇದು ನಾಸಾ, ಸ್ಪೇಸ್ಎಕ್ಸ್ ಮತ್ತು ಅಮೆರಿಕದ ಬಾಹ್ಯಾಕಾಶ ಸಂಶೋಧನೆಯ ಬದ್ಧತೆಗೆ ಸಾಕ್ಷಿಯಾಗಿದೆ.
| ವಿ. ನಾರಾಯಣನ್ ಇಸ್ರೋ ಅಧ್ಯಕ್ಷ