ನಿರುದ್ಯೋಗಿಗಳಿಗೆ ಕೌಶಲ ಉದ್ಯೋಗ, ಮೈಸೂರು ಕೈಗಾರಿಕೆಗಳ ಸಂಘದಿಂದ ವಿಶೇಷ ಯೋಜನೆ ರೂಪು

blank
blank

ಆರ್.ಕೃಷ್ಣ ಮೈಸೂರು
ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೈಗಾರಿಕೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರು ಕೈಗಾರಿಕೆಗಳ ಸಂಘ ವಿಶೇಷ ಯೋಜನೆ ರೂಪಿಸಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿಯೇ ಗಳಿಕೆಯಾಗುವ ಜತೆಗೆ ಕೌಶಲ ತರಬೇತಿಯೂ ದೊರೆಯಲಿದೆ.
‘ಆಯ್ಕೆ ನಿಮ್ಮದು, ತರಬೇತಿ ನಮ್ಮದು’ ಎಂಬ ಆಶಯದಡಿ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ ತರಬೇತಿಯೊಂದಿಗೆ ಉದ್ಯೋಗ ದೊರಕಿಸಿಕೊಡಲು ಕೈಗಾರಿಕೆಗಳ ಸಂಘ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮೈಸೂರು ಕೈಗಾರಿಕೆಗಳ ಸಂಘ, ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಜತೆ ಒಡಂಬಡಿಕೆ ಮಾಡಿಕೊಂಡು ಕಲಿಕೆಯಲ್ಲಿಯೇ ಗಳಿಕೆಗೆ ಅವಕಾಶ ನೀಡುವ ಮೂಲಕ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದೆ. ಈ ತರಬೇತಿ ಅವಧಿಯಲ್ಲಿ ಸ್ಟೈಫಂಡ್ ನೀಡಲಾಗುತ್ತಿದೆ. ಅಲ್ಲದೆ, ಕೌಶಲದ ಆಧಾರದ ಮೇಲೆ ತಾವು ತರಬೇತಿ ಪಡೆದ ಕೈಗಾರಿಕೆ ಅಥವಾ ಬೇರೆಡೆ ಉದ್ಯೋಗ ದೊರಕಿಸಿಕೊಡಲಾಗುತ್ತಿದೆ.
ಕೇಂದ್ರ ಸರ್ಕಾರದ ಕೌಶಲ ಬಲವರ್ಧನೆ ಮೂಲಕ ಉದ್ಯಮಗಳ ಮೌಲ್ಯವೃದ್ಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ನೀಡಲು ರಾಜ್ಯದ ನಾಲ್ಕು ಕೈಗಾರಿಕಾ ಸಂಘಗಳಿಗೆ ಅವಕಾಶ ನೀಡಿದೆ. ಅದರಲ್ಲಿ ಮೈಸೂರು ಕೈಗಾರಿಕೆಗಳ ಸಂಘವೂ ಒಂದಾಗಿದ್ದು, ಕೌಶಲ ತರಬೇತಿ ನೀಡಲು ಕೇಂದ್ರ ಸರ್ಕಾರ ಅನುದಾನ ನೀಡಿದೆ.
ಯಾವುದೇ ಶೈಕ್ಷಣಿಕ ಅರ್ಹತೆ ಇರುವ ಅಥವಾ ಇಲ್ಲದವರು ಈ ತರಬೇತಿ ಪಡೆಯಬಹುದು. 14ರಿಂದ 35 ವರ್ಷ ವಯಸ್ಸಿನವರೆಗೆ ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ ಪಡೆದವರು ಕೌಶಲ ತರಬೇತಿ ಪಡೆಯಬಹುದಾಗಿದೆ. ತರಬೇತಿ ಅವಧಿಯು 6 ತಿಂಗಳಿನಿಂದ 2 ವರ್ಷದವರೆಗೆ ಇರುತ್ತದೆ.
ನಗರ ಸೇರಿದಂತೆ ಜಿಲ್ಲೆ ವ್ಯಾಪ್ತಿಯ 50 ಕೈಗಾರಿಕೆಗಳಲ್ಲಿ ಎರಡು ತಿಂಗಳಲ್ಲಿ 131 ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಅವರಿಗೆ ಕೆಲಸ ಮಾಡುವ ಕಾರ್ಖಾನೆಗಳಲ್ಲಿ ಸ್ಟೈಫಂಡ್ ನೀಡಲಾಗುತ್ತಿದೆ. ಕೈಗಾರಿಕೆಗಳ ಸಂಘವು ಬೃಹತ್ ಅಪ್ರೆಂಟಿಶಿಪ್ ಆಂದೋಲನ ಆರಂಭಿಸಿದ್ದು, 200 ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೀಗಾಗಿ, ಸರ್ಕಾರಿ ಐಟಿಐ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸದಸ್ಯತ್ವ ಹೊಂದಿರುವ ಮೈಸೂರು ಕೈಗಾರಿಕೆಗಳ ಸಂಘವು ಉದ್ಯೋಗದೊಂದಿಗೆ 260ಕ್ಕೂ ಹೆಚ್ಚು ಕೌಶಲ ತರಬೇತಿಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ಸದ್ಯ 300ಕ್ಕೂ ಹೆಚ್ಚು ಉದ್ಯಮಗಳು ತರಬೇತಿಯೊಂದಿಗೆ ಉದ್ಯೋಗ ನೀಡಲು ಮುಂದೆ ಬಂದಿವೆ
ಸಿಗಲಿದೆ ಪ್ರತ್ಯೇಕ ವೇತನ
ನಾನಾ ಕೌಶಲ ತರಬೇತಿಗೆ ಸೇರ್ಪಡೆಯಾಗುವ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ 1500 ರೂ. ಸ್ಟೈಫಂಡ್ ಸಿಗಲಿದ್ದು, ಕೆಲಸ ಮಾಡುವ ಕೈಗಾರಿಕೆಗಳಲ್ಲಿ ಪ್ರತ್ಯೇಕವಾಗಿ ವೇತನ ಕೂಡ ಇದರೊಂದಿಗೆ ಸೇರಲಿದೆ. ಕೌಶಲ ಪಡೆದಂತೆ ವೇತನವೂ ಹೆಚ್ಚಳವಾಗಲಿದೆ. ತರಬೇತಿ ಬಳಿಕ ಯುವಕರು ಅಲ್ಲೇ ಕೆಲಸ ಮುಂದುವರಿಸಬಹುದಾಗಿದೆ ಅಥವಾ ಉತ್ತಮ ಅವಕಾಶ ಇರುವ ಕಡೆ ತೆರಳಬಹುದಾಗಿದೆ.
ಸಂಘದಿಂದ ಕೌಶಲ ತರಬೇತಿಗೆ ಆಗಮಿಸುವ ನಿರುದ್ಯೋಗಿ ಯುವಕ-ಯುವತಿಯರಿಗೆ ಸಮವಸ್ತ್ರ ಸೇರಿದಂತೆ ಸುರಕ್ಷತಾ ಸಾಧನಗಳನ್ನು ನೀಡಲಾಗುತ್ತದೆ. 260ಕ್ಕೂ ಹೆಚ್ಚು ವೃತ್ತಿ ಕೌಶಲ ತರಬೇತಿ ನೀಡುವ ಈ ಬೃಹತ್ ಯೋಜನೆ ಸಂಬಂಧ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗಾರಿಕಾ ಸಂಘ ಮಾಡುತ್ತಿದೆ.
ಕೈಗಾರಿಕೆಗಳು, ಶಿಕ್ಷಣ ಸಂಸ್ಥೆ, ಕಾಲೇಜು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭೇಟಿ ನೀಡಿ ಕೌಶಲ ತರಬೇತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಕಿಸಿಕೊಡುವುದು ಒಂದೆಡೆಯಾದರೆ, ಮತ್ತೊಂದೆಡೆ ಕೌಶಲ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೈಗಾರಿಕೆಗಳಿಗೆ ನುರಿತ ಕಾರ್ಮಿಕರನ್ನು ಸಿದ್ಧಪಡಿಸುವ ಉದ್ದೇಶ ಹೊಂದಲಾಗಿದೆ.

ಕಾರ್ಮಿಕರ ಕೊರತೆ ನೀಗಿದಂತಾಗುತ್ತದೆ
ಉದ್ಯೋಗ ದೊರೆಯುತ್ತಿಲ್ಲ ಎಂದು ಸಾಕಷ್ಟು ನಿರುದ್ಯೋಗಿಗಳು ಹೇಳುತ್ತಿದ್ದರೆ, ಕೌಶಲಯುತ ಕಾರ್ಮಿಕರು ಇಲ್ಲ ಎನ್ನುವುದು ಮಾಲೀಕರ ವಾದವಾಗಿದೆ. ಹೀಗಾಗಿ, ಕಾರ್ಖಾನೆಗಳಿಗೆ ಕೌಶಲಯುತ ಕಾರ್ಮಿಕರ ಕೊರತೆ ಇದೆ. ಹೀಗಾಗಿ, ಕೈಗಾರಿಕಾ ಸಂಘ, ಐಟಿಐ ಸೇರಿದಂತೆ ಇನ್ನಿತರ ಸಂಸ್ಥೆಗಳ ಸಹಕಾರದೊಂದಿಗೆ ಕಲಿಕೆಯಲ್ಲಿಯೇ ಗಳಿಕೆಗೆ ಅವಕಾಶ ನೀಡುವಂತೆ ಸ್ಟೈಫಂಡ್ ನೀಡಿ ತರಬೇತಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅಲ್ಪ ಪ್ರಮಾಣದ ಹಣ ದೊರೆತರೆ, ಮಾಲೀಕರಿಗೆ ಕಾರ್ಮಿಕರ ಕೊರತೆ ನೀಗಿದಂತಾಗುತ್ತದೆ.
ಸುರೇಶ್‌ಕುಮಾರ್ ಜೈನ್
ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ

Share This Article

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…

ಮಳೆಗಾಲದಲ್ಲಿ ಉಪ್ಪು ನೀರಾಗಿ ಬದಲಾಗುವುದನ್ನು ತಡೆಯಲು ಇಲ್ಲಿದೆ ಸೂಪರ್‌ ಟಿಪ್ಸ್‌! ಒಮ್ಮೆ ಟ್ರೈ ಮಾಡಿ.. Salt

Salt: ಮಳೆಗಾಲ ಮನೆಯಲ್ಲಿ ಉಪ್ಪನ್ನು ಸಂಗ್ರಹಿಸುವುದು ಕಷ್ಟ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ನೀರಾಗಿ ಬದಲಾಗುತ್ತದೆ.…