ಶಿವಮೊಗ್ಗ: ಜಿಲ್ಲೆಯಾದ್ಯಂತ ನುರಿತ ಕೌಶಲಪಡೆ ನಿರ್ಮಾಣ ಮಾಡುತ್ತಿರುವ ಜನ ಶಿಕ್ಷಣ ಸಂಸ್ಥೆ ವಿಶ್ವ ಕೌಶಲ್ಯ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಶಿವಮೊಗ್ಗ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ರವಿ ನಾಯಕ್ ಹೇಳಿದರು.
ಜನಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಯುವ ಕೌಶಲ ದಿನಾಚರಣೆ ಹಾಗೂ ವಿವಿಧ ತರಬೇತಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿಯ ಯುವ ಕೌಶಲ ದಿನಾಚರಣೆಯ ಧ್ಯೇಯವಾಕ್ಯವಾದ ಶಾಂತಿ ಮತ್ತು ಅಭಿವೃದ್ದಿಗಾಗಿ ಯುವ ಕೌಶಲ ಎಂಬುದಾಗಿದೆ. ಎಲ್ಲರೂ ಶ್ರದ್ದೆಯಿಂದ ಕೌಶಲಗಳನ್ನು ಕಲಿತಾಗ ಯಶಸ್ಸು ಸಾಧ್ಯವಾಗುತ್ತದೆ. ಜನ ಶಿಕ್ಷಣ ಸಂಸ್ಥೆಯ 23 ವರ್ಷಗಳ ಶ್ರಮ ಸಾರ್ಥಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮಾತನಾಡಿ, ವಿಶ್ವದ ಅವಶ್ಯಕತೆಯನ್ನು ಪೂರೈಸಲು ಭಾರತದ ಯುವಸಂಪತ್ತು ತಾಂತ್ರಿಕ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಜನಸಂಖ್ಯೆ ಸಂಪತ್ತಾಗಿ ಮಾರ್ಪಾಡಾಗಬೇಕು ಎಂದು ಅಭಿಪ್ರಾಯಪಟ್ಟರು.
ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಎಂ.ಸುಮನಾ, ಸಿಂಧು, ಇಂಧು ಹೆಗಡೆ ಮುಂತಾದವರಿದ್ದರು.