ಮುಚ್ಚಿದ್ದ ಶೆಡ್‌ನಲ್ಲಿ ಅಸ್ಥಿಪಂಜರ ಪತ್ತೆ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕುಂಭಾಸಿ ರಾಷ್ಟ್ರೀಯ ಹೆದ್ದಾರಿ ಮೀನು ಮಾರ್ಕೆಟ್ ಮುಂಭಾಗದರುವ ಸ್ಥಳದಲ್ಲಿ ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿದ್ದ ಶೆಡ್‌ನಲ್ಲಿ ಮಲಗಿದ ಸ್ಥಿತಿಯಲ್ಲಿದ್ದ ಅಸ್ಥಿಪಂಜರ ಶುಕ್ರವಾರ ಸಾಯಂಕಾಲ ಪತ್ತೆಯಾಗಿದೆ.
ಪರಿಶೀಲನೆ ವೇಳೆ ರವಿಕೆಯಂತಹ ವಸ್ತು ದೊರೆತಿದ್ದು, ಮಹಿಳೆಯ ಅಸ್ಥಿಪಂಜರವಾಗಿರಬಹುದು ಎನ್ನಲಾಗಿದೆ.

ಮೂಳೆಗಳನ್ನು ಮಣಿಪಾಲ ಫಾರೆನ್ಸಿಕ್ ಲ್ಯಾಬ್‌ಗೆ ಕಳಿಸಲಾಗಿದೆ. ಉದ್ಯಮಿಯೊಬ್ಬರು ಇಲ್ಲಿನ ಜಾಗ ಖರೀದಿಸಿದ್ದು. ಅಲ್ಲಿ ಶೆಡ್ ನಿರ್ಮಿಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಸ್ಥಳ ನಿರ್ಜನವಾಗಿದ್ದು, ಸುತ್ತಮುತ್ತ ಹುಲ್ಲು, ಪೊದೆ ಬೆಳೆದಿತ್ತು. ಶುಕ್ರವಾರ ಜಾಗವನ್ನು ಸ್ವಚ್ಛಗೊಳಿಸುವ ಸಲುವಾಗಿ ಜೆಸಿಬಿ ಮೂಲಕ ದಾರಿ ಸರಿಪಡಿಸಿ ಪೊದೆಗಳನ್ನು ಸವರಲಾಗಿತ್ತು. ಚಿಲಕ ಹಾಕಿದ್ದ ಶೆಡ್ ತೆಗೆಯುವ ಸಲುವಾಗಿ ಛಾವಣಿ ಶೀಟ್‌ನ್ನು ಸರಿಸಿದಾಗ ಅಸ್ಥಿಪಂಜರ ಕಂಡು ಬಂದಿದೆ. ಕೂಡಲೇ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶೆಡ್ ಒಳಗಿನಿಂದ ಚಿಲಕ: ಮೇಲ್ನೋಟಕ್ಕೆ ಕೆಲವರ್ಷಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಒಳಗಡೆ ಚಿಲಕ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪೊಲೀಸರು ಕೆಲವು ವರ್ಷಗಳಿಂದ ಕಾಣೆಯಾಗಿ ಸಿಕ್ಕಿರದ ವ್ಯಕ್ತಿಗಳ ಮಾಹಿತಿ, ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಡಿಎನ್‌ಎ ಪರೀಕ್ಷೆ ಮೂಲಕವೂ ಪತ್ತೆಗೆ ಮುಂದಾಗಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿ.ಪಿ.ಐ ಮಂಜಪ್ಪ ಡಿ.ಆರ್., ಕುಂದಾಪುರ ಪಿಎಸ್‌ಐ ಹರೀಶ್ ಆರ್. ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ.