ಗುರುಕುಲ ಮಾದರಿ ಶಿಕ್ಷಣ

ಬಾಲಚಂದ್ರ ಕೋಟೆ ಬೆಳ್ಳಾರೆ

ಬೇಸಿಗೆ ರಜೆ ಸಂದರ್ಭ ವಿವಿಧ ಸಂಘ ಸಂಸ್ಥೆಗಳು ಶಿಬಿರ ಆಯೋಜಿಸುವುದು ಸಹಜ. ಆದರೆ ಈ ಊರಿನ ಪುರೋಹಿತ ಮನೆತನವೊಂದು ಪ್ರತೀ ವರ್ಷ ತಿಂಗಳ ಕಾಲ ಗುರುಕುಲ ಪದ್ಧತಿ ಶೈಲಿಯಲ್ಲಿ ಧಾರ್ಮಿಕ ಶಿಕ್ಷಣ, ವೇದಾಭ್ಯಾಸ ಹಾಗೂ ಮಕ್ಕಳ ಭವಿಷ್ಯಕ್ಕೆ ಪೂರಕ ಕಲೆಗಾರಿಕೆ ನೀಡುವ ಮೂಲಕ ಮಾದರಿಯಾಗಿದೆ.
ಆಧುನಿಕ ಯುಗದಲ್ಲೂ ಪ್ರಾಚೀನ ಕಾಲದ ಗುರುಕುಲ ಪದ್ಧತಿ ನೆನಪಿಸುವ ವೇದ ಶಿಬಿರ ನಡೆಯುತ್ತಿರುವುದು ಬೆಳ್ಳಾರೆ ಸಮೀಪ ಅಪರಪಡ್ನೂರು ಗ್ರಾಮ ಚೂಂತಾರು ವೇದ ನಿಲಯದಲ್ಲಿ.

ಚೂಂತಾರು ದಿ. ಕೃಷ್ಣ ಭಟ್ ಪ್ರತಿಷ್ಠಾನ ಆಶ್ರಯದಲ್ಲಿ ಕಾರ್ಯದರ್ಶಿ ಶಿವಪ್ರಸಾದ್ ಭಟ್ ಚೂಂತಾರು ಮುಂದಾಳತ್ವದಲ್ಲಿ ನಡೆಯುತ್ತಿರುವ ವೇದ, ಯೋಗ ಕಲಾ ಶಿಬಿರಕ್ಕೀಗ ಏಕಾದಶ ವರ್ಷ. ವೇದದೊಂದಿಗೆ ಸಾಂಸ್ಕೃತಿಕ ಪ್ರವಾಹವನ್ನೇ ಹರಿಸಿ ಆಧ್ಯಾತ್ಮ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿರುವ ವೇದ ಶಿಬಿರ ಕಳೆದ 11 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವೇದೋಪನಿಷತ್ತಿನ ಅಂತರಗಂಗೆ ಹರಿಸಿದೆ. 10 ವರ್ಷಗಳ ಹಿಂದೆ 10 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಗಿದ್ದ ಶಿಬಿರ ಇಂದು ಅನೇಕ ಮಕ್ಕಳಿಗೆ ಆಧ್ಯಾತ್ಮ ಜ್ಞಾನದ ಭಂಡಾರವನ್ನೇ ತುಂಬುತ್ತಿದೆ.

ವೈವಿಧ್ಯಮಯ ಕಾರ‌್ಯಕ್ರಮ: ಮಕ್ಕಳಿಗಾಗಿ ಪ್ರತಿಷ್ಠಾನ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಕ್ಕಳಿಗೆ ನಿತ್ಯ ಪಂಚಾಂಗ ಅಧ್ಯಯನ ತರಬೇತಿ ನೀಡುತ್ತದೆ. ಭಜನೆ ತರಬೇತಿ, ಮಕ್ಕಳಿಗೆ ಎಳವೆಯಲ್ಲಿಯೇ ಸಭಾಕಂಪನ ಹೋಗಲಾಡಿಸುವ ಸಲುವಾಗಿ ಆಶುಭಾಷಣ ಕಲೆ ತರಬೇತಿ ನೀಡುತ್ತಿದೆ. ಬಿಡುವಿನ ವೇಳೆಯಲ್ಲಿ ನುರಿತ ಯೋಗ ಪಂಡಿತರಿಂದ ಯೋಗ, ಮುದ್ರೆಗಳು, ವರ್ಣಚಿಕಿತ್ಸೆ ಕಲೆಗಾರಿಕೆ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ, ಶಿಬಿರಾರ್ಥಿಗಳನ್ನು ಇನ್ನಷ್ಟೂ ಕಲಿಕೆ ಕಡೆಗೆ ಉತ್ಸಾಹಿಗಳಾಗುವಂತೆ ಮಾಡುತ್ತಿದೆ.

ಅನ್ನ ದಾಸೋಹ:ಶಿಬಿರಕ್ಕೆ ಪ್ರತೀ ವರ್ಷ ಊರಿನ ಸಮಸ್ತರು ತರಕಾರಿ, ಸಿಹಿ ತಿಂಡಿ, ಅಡುಗೆ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದಾರೆ. ಕಾರ್ಯದರ್ಶಿ ದಂಪತಿ ತಮ್ಮ ಕೈಯ್ಯರೆ ಅಡುಗೆ ತಯಾರಿಸಿ ನೂರಾರು ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ನಿತ್ಯವೂ ಬಡಿಸುತ್ತಾರೆ.

ಶಾಲಾ ಪರೀಕ್ಷಾ ಪದ್ಧತಿಯಂತೆ ಸ್ಕಂದಕೃಪಾ ವೇದ ಶಿಬಿರದಲ್ಲಿಯೂ ಮಕ್ಕಳಿಗೆ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುತ್ತಿದೆ. ಪ್ರಧಾನ ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶತರುದ್ರ, ಏಕಾದಶ ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ, ಗ್ರಹಶಾಂತಿ, ಗಣಪತಿ ಹೋಮ, ತ್ರಿಕಾಲ ಪೂಜೆ, ವಸೋರ್ಧಾರ ಸಹಿತ ಅನೇಕ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಧಾರ್ಮಿಕ ಕೌಶಲವನ್ನು ತೋರ್ಪಡಿಸುತ್ತಿದ್ದಾರೆ.

ಮುಂದಿನ ಪೀಳಿಗೆ ದೇಶದ ಹಾಗೂ ಧಾರ್ಮಿಕ ಸಂಸ್ಕೃತಿಯನ್ನು ಮರೆಯಬಾರದು. ವೇದವು ಮನುಷ್ಯರ ಹೃದಯ ಶುದ್ಧಗೊಳಿಸುತ್ತದೆ. ವೇದವೇ ತಮ್ಮ ಅಸ್ತಿತ್ವಕ್ಕೆ ಸೂತ್ರ ಎಂಬುದನ್ನು ಅರಿತುಕೊಳ್ಳಲು ಶಿಬಿರ ಅಗತ್ಯ
ಶಿವಪ್ರಸಾದ ಭಟ್ ಕಾರ್ಯದರ್ಶಿ

ವೇದ ಶಿಬಿರವು ಭಾರತದ ಭಾವಿ ಸತ್ಪ್ರಜೆಗಳನ್ನು ರೂಪಿಸುತ್ತದೆ.ನಮ್ಮ ಸಮಾಜದ ಭದ್ರತೆಗೆ ವೇದವೂ ಉತ್ಕೃಷ್ಟವಾದ ಅಡಿಪಾಯ ನಿರ್ಮಿಸುತ್ತದೆ.
ಶ್ರೀಕೃಷ್ಣ ಉಪಾಧ್ಯಾಯ ವಾಗ್ಮಿ

One Reply to “ಗುರುಕುಲ ಮಾದರಿ ಶಿಕ್ಷಣ”

Leave a Reply

Your email address will not be published. Required fields are marked *