ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ

ಕಳಸ: ಐದಾರು ವರ್ಷಗಳಿಂದ ಸಂಪರ್ಕ ರಸ್ತೆ ದುರಸ್ತಿಗೊಳಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ್ಕೆ ಬೇಸತ್ತು ರಸ್ತೆಗೆ ಬಾಳೆಗಿಡ ನೆಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಎಸ್.ಕೆ.ಮೇಗಲ್ ಗ್ರಾಮಸ್ಥರು ತಾವೇ ರಸ್ತೆ ದುರಸ್ತಿಪಡಿಸಿದರು.

ಸಂಸೆ ಗ್ರಾಪಂ ವ್ಯಾಪ್ತಿಯ ಕಾರಗದ್ದೆಯಿಂದ ಎಸ್.ಕೆ.ಮೇಗಲ್ ಸಂಪರ್ಕ ರಸ್ತೆ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಯಾವುದೇ ಬಾಡಿಗೆ ವಾಹನಗಳು ಬರುತ್ತಿರಲಿಲ್ಲ. ಶಾಲಾ ಕಾಲೇಜು ಮಕ್ಕಳು ಮತ್ತು ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸಬೇಕಾಗಿತ್ತು.

ಸುಮಾರು 5 ಕಿಮೀ ರಸ್ತೆ ದುರಸ್ತಿಗೆ ಗ್ರಾಮಸ್ಥರು ಗ್ರಾಪಂ ಸದಸ್ಯರಿಂದ ಮುಖ್ಯಮಂತ್ರಿವರೆಗೂ ಅಹವಾಲು ಸಲ್ಲಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಹೊರತು ದುರಸ್ತಿ ಮಾಡಲಿಲ್ಲ. ಇದರಿಂದ ಬೇಸತ್ತ ಗ್ರಾಮದ 40 ಜನ ಸೇರಿ ಸುಮಾರು 20 ಸಾವಿರ ರೂ. ಸಂಗ್ರಹಿಸಿ ರಸ್ತೆಯ ಗುಂಡಿ ಮುಚ್ಚಿಸಿ ಚರಂಡಿ ದುರಸ್ತಿ ಮಾಡಿಸಿದ್ದಾರೆ.

ಊರಿನ ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳು ನಮಗೆ ಬೇಕಿಲ್ಲ. ಐದು ವರ್ಷ ಶಾಸಕರಾಗಿದ್ದವರಿಗೆ ರಸ್ತೆ ದುರಸ್ತಿ ಮಾಡಿಸಲು ಸಾಧ್ಯವಾಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕೈ ಕಾಲು ಹಿಡಿಯುವ ಜನಪ್ರತಿನಿಧಿಗಳಿಗೆ ನಂತರ ಊರಿನ ನೆನಪು ಇರುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಹಂಚುವ ಹಣದಿಂದ ರಸ್ತೆ ದುರಸ್ತಿ ಮಾಡಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಕೃಷ್ಣೇಗೌಡ, ರಾಜು, ಗಜೇಂದ್ರ, ಶಾಶ್ವತ್, ಮಹೇಶ್, ಸಂದೇಶ, ಸುರೇಂದ್ರ, ಕೌಶಿಕ್, ರತ್ನರಾಜ್, ಸುಧಾಕರ, ಚೇತನ್, ಸುಜನ್, ಶಶಿಕುಮಾರ್, ಪ್ರದೀಪ, ಸತೀಶ್ ಮತ್ತಿತರರು ಇದ್ದರು.

ನಮ್ಮ ಊರಿನ ರಸ್ತೆ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ. ಯಾವ ಜನಪ್ರತಿನಿಧಿಯೂ ನಮಗೆ ಸ್ಪಂದಿಸುತ್ತಿಲ್ಲ. ಶಾಲಾ ಮಕ್ಕಳಿಗೆ ಪ್ರತಿನಿತ್ಯ ಓಡಾಡಲು ತೊಂದರೆ ಆಗುತ್ತಿದೆ. ಇದಕ್ಕಾಗಿ ಗ್ರಾಮಸ್ಥರೇ ಸೇರಿ ರಸ್ತೆ ಸರಿಪಡಿಸಿಕೊಳ್ಳುತ್ತಿದ್ದೇವೆ.

| ಮಹೇಶ್ ಗೌಡ, ಎಸ್. ಕೆ.ಮೇಗಲ್

ಚುನಾವಣೆಯಲ್ಲಿ ಗೆದ್ದ ಮೇಲೆ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯ. ನಾವು ವರ್ಷಗಳಿಂದ ರಸ್ತೆ ರಿಪೇರಿ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಬಾಳೆಗಿಡ ನೆಟ್ಟು ಪ್ರತಿಭಟನೆ ಮಾಡಿ ನಾವೇ ಗುಂಡಿಮುಚ್ಚಿದ್ದೇವೆ.

| ಸಂದೇಶ್, ಎಸ್.ಕೆ.ಮೇಗಲ್

Leave a Reply

Your email address will not be published. Required fields are marked *