More

  ಆರು ಸಾವಿರ ಪಡಿತರದಾರರಿಗೆ ಡಿಬಿಟಿ ಡೌಟು

  ಹರಪನಹಳ್ಳಿ: ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಪೈಕಿ ಐದು ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ, ತಾಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರು ಆಧಾರ್ ಲಿಂಕ್, ಇಕೆವೈಸಿ ಹಾಗೂ ಬ್ಯಾಂಕ್ ಖಾತೆ ಇಲ್ಲದ ಕಾರಣ ಯೋಜನೆಯಿಂದ ವಂಚಿರಾಗುವ ಸಾಧ್ಯತೆ ಇದೆ. ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

  ಪಟ್ಟಣದಲ್ಲಿ 9 ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನೂರಕ್ಕಿಂತ ಹೆಚ್ಚು ನ್ಯಾಯಬೆಲೆ ಅಂಗಡಿಗಳಿವೆ. ಕಸಬಾ, ಅರಸೀಕೆರಿ, ಚಿಗಟೇರಿ, ತೆಲಿಗಿ ಹೋಬಳಿಯಲ್ಲಿ 70,826 ಜನರು ಅಂತ್ಯೋದಯ, ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಿದ್ದಾರೆ. ಇದರಲ್ಲಿ 64,546 ಜನರು ಅನ್ನಭಾಗ್ಯ ಯೋಜನೆ ಪ್ರಯೋಜನೆ ಪಡೆಯಲು ಅರ್ಹರಾಗಿದ್ದಾರೆ.

  ಆದರೆ, 6,280 ಜನರು ಆಧಾರ್ ಲಿಂಕ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಇಕೆವೈಸಿ, ಖಾತೆ ಮಾಡಿಸಿಲ್ಲ. ಹೀಗಾಗಿ ಯೋಜನೆಯಿಂದ ವಂಚಿತರಾಗಲಿದ್ದಾರೆ. ಹಾಗಾಗದಂತೆ ತಾಲೂಕು ಆಹಾರ ಇಲಾಖೆ ಶಿರಸ್ತೇದಾರರು, ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ಕರೆದು ಆಧಾರ್ ಲಿಂಕ್, ಮೊಬೈಲ್ ಸಂಖ್ಯೆ ಅಪ್‌ಡೇಟ್, ಬ್ಯಾಂಕ್ ಖಾತೆ ತೆರೆಯಲು ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದ್ದಾರೆ.

  ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ

  ಜಿಲ್ಲೆ ತೊಡಕು: ತಾಲೂಕಿನ ಪಡಿತರ ಕಾರ್ಡ್‌ಗಳಲ್ಲಿ ಫಲಾನುಭವಿಗಳ ಭಾವಚಿತ್ರಗಳೇ ಇಲ್ಲ. ಇದಕ್ಕೆ ಕಾರಣ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು ಬಳಿಕ ಬಳ್ಳಾರಿಗೆ ಸೇರ್ಪಡೆ ಮಾಡಲಾಯಿತು. ನಂತರ ಹೊಸದಾಗಿ ರಚನೆಗೊಂಡ ವಿಜಯನಗರ ಜಿಲ್ಲೆಗೆ ಸೇರಿಸಲಾಯಿತು. ಇದರಿಂದ ಹಲವಾರು ಇಲಾಖೆಗಳು ದಾವಣಗೆರೆ, ಬಳ್ಳಾರಿ ಜಿಲ್ಲೆಯಲ್ಲಿಯೆ ಕೆಲಸ ನಿರ್ವಹಿಸುತ್ತಿವೆ. ಆಹಾರ ಇಲಾಖೆಯು ವಿಜಯನಗರ ಜಿಲ್ಲೆಗೆ ಸೇರಿದಲ್ಲಿ ಭಾವಚಿತ್ರವಿರುವ ಪಡಿತರ ಕಾರ್ಡ್ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

  See also  ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನಿಯಮ ರದ್ದುಗೊಳಿಸಿದ ಸರ್ಕಾರ: ಅರ್ಹರಿಗೆ ಸೀಟು ಸಿಗೋದು ಡೌಟು

  4469 ಚೀಟಿಗಳು ರದ್ದು: ಹರಪನಹಳ್ಳಿ ತಾಲೂಕಿನಲ್ಲಿ 2019ರಿಂದ ಈವರೆಗೆ 4 ಚಕ್ರ ವಾಹನ ಹೊಂದಿರುವವರು,ಸರ್ಕಾರಿ ನೌಕರರು, ಕೇಂದ್ರ ಕಚೇರಿಯಿಂದ ನೀಡಿರುವ ನಿರ್ದೇಶನದಂತೆ ಎಪಿಎಲ್‌ಗೆ ಪರಿವರ್ತನೆ ಆಗದಿರುವುದು, ಏಕವ್ಯಕ್ತಿ ಹೊಂದಿರುವ ಪಡಿತರ ಚೀಟಿ, ಸ್ವಯಂ ಪ್ರೇರಿತರಾಗಿ ಒಪ್ಪಿಸಿದ ಕಾರ್ಡ್, ಹೀಗೆ ವಿವಿಧ ಕಾರಣಗಳಿಂದ ಒಟ್ಟು 4469 ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ.

  ಆರು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರರು ಬ್ಯಾಂಕ್ ಖಾತೆ, ಆಧಾರ ಲಿಂಕ್, ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿಲ್ಲ. ಅಂತಹ ಫಲಾನುಭವಿಗಳ ಗುರುತಿಸಿ ನ್ಯಾಯಬೆಲೆ ಅಂಗಡಿ ಮಾಲೀಕರ ಮೂಲಕ ಮನೆ ಮನೆಗೆ ತೆರಳಿ ಅರಿವು ಮೂಡಿಸಿ ಕಡ್ಡಾಯವಾಗಿ ಜು. 20ರೊಳಗೆ ಸರಿಪಡಿಸಿಕೊಳ್ಳುವಂತೆ ತಿಳಿಸಲಾಗುತ್ತಿದೆ.

  ಟಿ.ಕೆ.ಎಂ.ಕೊಟ್ರಮ್ಮ
  ಆಹಾರ ಇಲಾಖೆ ನಿರೀಕ್ಷಕಿ, ಹರಪನಹಳ್ಳಿ

  ಪಡಿತರ ಚೀಟಿದಾರರಿಗೆ ಹಣ ನೀಡುವುದರಿಂದ ದುರುಪಯೋಗವಾಗಬಹುದು. ಆದ್ದರಿಂದ ಬೇಳೆ, ಎಣ್ಣೆ, ಇತರ ಧಾನ್ಯಗಳನ್ನುವಿತರಿಸಿದರೆ ಜನರಿಗೆ ಅನುಕೂಲವಾಗಲಿದೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

  ಡಿ.ವಿಜಯ
  ಅಧ್ಯಕ್ಷ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ, ಹರಪನಹಳ್ಳಿ


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts