ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ?

ಜಾರ್ಖಂಡ್‌: ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ಹೊರಬಂದಿದ್ದು, ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ ಆರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಜಾರಿಭಾಗ್​ನ ಮನೆಯಲ್ಲಿ ಕುಟುಂಬ ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ. ಸಾಲ ಮರುಪಾವತಿಗೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಲಾಗಿದೆ.

ಮೃತರನ್ನು 70 ವರ್ಷದ ಮಹಾವೀರ್‌ ಮಹೇಶ್ವರಿ, ಅವರ ಪತ್ನಿ 65 ವರ್ಷದ ಕಿರಣ್‌ ಮಹೇಶ್ವರಿ, ಮಗ ನರೇಶ್‌ ಅಗರ್‌ವಾಲ್‌(40), ಪತ್ನಿ ಪ್ರೀತಿ ಅಗರ್‌ವಾಲ್‌(38) ಮತ್ತು ಇಬ್ಬರು ಮಕ್ಕಳಾದ 8 ವರ್ಷದ ಅಮನ್‌ ಮತ್ತು 6 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿದ್ದು, ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆತ್‌ ನೋಟ್‌ನಲ್ಲಿ ತಿಳಿಸಿರುವಂತೆ ಕುಟುಂಬ ಸದಸ್ಯರಲ್ಲಿ ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದಕ್ಕೂ ಮುನ್ನ ತಮ್ಮ ಅಪ್ರಾಪ್ತ ಆರನೇ ಮಗುವನ್ನು ಟೆರೇಸ್‌ನಿಂದ ತಳ್ಳಿದ್ದಾರೆ. (ಏಜೆನ್ಸೀಸ್)