More

    ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ 6 ಮಂದಿ ಸೆರೆ: ಭೂಗತ ಪಾತಕಿಗಳಿಗೆ ಪೂರೈಕೆ, 5ರಿಂದ 10 ಸಾವಿರ ರೂ.ಗೆ ಮಾರಾಟ

    ಬೆಂಗಳೂರು: ಭೂಗತ ಪಾತಕಿಗಳಿಗೆ ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಮಾಡುತ್ತಿದ್ದ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಪಟು ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಹಾವೇರಿ ಮೂಲದ ಅಸ್ಲಾಂ ಗುತ್ತಲ (45), ಧರ್ಮಣ್ಣ ದೇವಲಪ್ಪ ಚೌಹಾಣ್ (38), ರಾಯಣ್ಣ ಗೌಡ (27), ಮೈಸೂರಿನ ಜಾವೀದ್ ಖಾನ್ (39), ಸೈಯ್ಯದ್ ರಿಜ್ವಾನ್ (39), ಮಾರತ್ತಹಳ್ಳಿಯ ರೋಹನ್ ಮಂಡಲ್ (27) ಬಂಧಿತರು. ಆರೋಪಿಗಳಿಂದ 3 ಪಿಸ್ತೂಲ್, 1 ರಿವಾಲ್ವರ್ ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಪ್ರಮುಖ ಆರೋಪಿ ಅಸ್ಲಾಂ ಗುತ್ತಲ ಕಾಮನ್​ವೆಲ್ತ್ ಕ್ರೀಡಾಕೂಟದ ಬ್ಯಾಸ್ಕೆಟ್​ಬಾಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ. ಸ್ವಲ್ಪಕಾಲ ಬಾಸ್ಕೆಟ್ ಬಾಲ್ ತರಬೇತುದಾರನಾಗಿಯೂ ಕಾರ್ಯನಿರ್ವಹಿಸಿದ್ದ. ಮೂರು ವರ್ಷಗಳ ಹಿಂದೆ ಕೊಲೆಯಾಗಿದ್ದ ಕುಖ್ಯಾತ ರೌಡಿ ಬ್ರಿಗೇಡ್ ಅಜಂನ ಶಿಷ್ಯನಾಗಿದ್ದ. ಬ್ಯಾಸ್ಕೆಟ್​ಬಾಲ್ ಕೋಚಿಂಗ್ ಬಿಟ್ಟು ಇತರ ಆರೋಪಿಗಳ ಜತೆ ಸೇರಿ ರಾಜ್ಯದಲ್ಲಿರುವ ಭೂಗತ ಪಾತಕಿಗಳಿಗೆ ಪಿಸ್ತೂಲ್, ರಿವಾಲ್ವರ್​ಗಳಂತಹ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ. ಅಸ್ಲಾಂ ಸಹಚರ ರೋಹನ್ ಮಂಡಲ್ ಜತೆ ಪಶ್ಚಿಮ ಬಂಗಾಳ, ಬಿಹಾರ ಇನ್ನಿತರ ಕಡೆಗಳಿಗೆ ತೆರಳಿ ಪಿಸ್ತೂಲ್, ರಿವಾಲ್ವರ್, ಮದ್ದುಗುಂಡುಗಳನ್ನು ಖರೀದಿಸಿ ರೈಲು ಇಲ್ಲವೇ, ರಸ್ತೆ ಮಾರ್ಗವಾಗಿ ಅಕ್ರಮವಾಗಿ ರಾಜ್ಯಕ್ಕೆ ತರುತ್ತಿದ್ದ. ಭೂಗತ ಪಾತಕಿಗಳು ಮಾತ್ರವಲ್ಲದೇ ದರೋಡೆಕೋರರು, ಸುಲಿಗೆಕೋರರು, ರೌಡಿಗಳು ಸೇರಿ ಇನ್ನಿತರರಿಗೆ 5 ರಿಂದ 10 ಸಾವಿರ ರೂ.ಗೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ. ವಿಮಾನದಲ್ಲಿ ಶಸ್ತ್ರಾಸ್ತ್ರ ಕೊಂಡೊಯ್ದರೆ ಸಿಕ್ಕಿ ಬೀಳುವ ಭೀತಿಯಲ್ಲಿ ಇವರೆಲ್ಲರೂ ರೈಲು ಅಥವಾ ರಸ್ತೆ ಮಾರ್ಗದಲ್ಲೇ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಡಿ.29ರಂದು ಆರೋಪಿಗಳು ಬಿನ್ನಿಮಿಲ್ ಮೈದಾನ ಟ್ಯಾಂಕ್​ಬಂಡ್ ರಸ್ತೆ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಹಲವು ಪ್ರಕರಣಗಳಲ್ಲಿ ಬೇಕಾಗಿದ್ದವರು

    ಅಸ್ಲಾಂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಜೆ.ಜೆ. ನಗರ, ಡಿ.ಜೆ. ಹಳ್ಳಿ, ಹಲಗೇರಿ ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ಕೊಲೆಯತ್ನ ಸೇರಿ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಸ್ನೇಹಿತನ ಕೊಲೆ

    ಬೆಂಗಳೂರು: ಮೊಬೈಲ್ ಕಿತ್ತುಕೊಂಡ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಓರ್ವ ಕೊಲೆಯಾಗಿದ್ದಾನೆ.

    ಕಮರ್ಷಿಯಲ್ ಸ್ಟ್ರೀಟ್​ನ ಇರ್ಷಾದ್ (29) ಕೊಲೆಯಾದವ. ಆರೋಪಿಗಳಾದ ಮಣಿ (25) ಮತ್ತು ಶಕ್ತಿವೇಲು (23) ನನ್ನು ಭಾರತೀನಗರ ಪೊಲೀಸರು ಬಂಧಿಸಿದ್ದಾರೆ.

    ಇರ್ಷಾದ್ ಹೂವಿನ ವ್ಯಾಪಾರಿಯಾ ಗಿದ್ದ. ಭಾನುವಾರ ರಾತ್ರಿ 7 ಗಂಟೆಗೆ ಇರ್ಷಾದ್ ತನ್ನ ಸ್ನೇಹಿತ ಮಣಿ ಹಾಗೂ ಆತನ ಸಹೋದರ ಶಕ್ತಿ ವೇಲು ಜತೆ ಬಾರ್​ನಲ್ಲಿ ಮದ್ಯ ಸೇವಿಸಿ, ಭಾರತಿನಗರದ ನಾಲಾ ರಸ್ತೆಯಲ್ಲಿರುವ ಹೋಟೆಲ್​ನಲ್ಲಿ ತಿಂಡಿ ತಿನ್ನುತ್ತಿದ್ದ. ಆಗ ಇರ್ಷಾದ್ ಸ್ನೇಹಿತ ಮಣಿ ಸಹೋದರನ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದ. ಇದರಿಂದ ಆಕ್ರೋಶಗೊಂಡ ಮಣಿ ಕೈಗೆ ಸಿಕ್ಕ ಮರದ ರೀಪೀಸ್​ನಿಂದ ಇರ್ಷಾದ್ ತಲೆಗೆ ಬಲವಾಗಿ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡ ಇರ್ಷಾದ್​ನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಈ ವಿಚಾರ ಬೆಳಕಿಗೆ ಬರುತ್ತಿದ್ದತೆ ಮಣಿ ಹಾಗೂ ಶಕ್ತಿವೇಲು ತಲೆಮರೆಸಿಕೊಂಡಿದ್ದರು. ಪೊಲೀಸರು ಅವರನ್ನು ಪತ್ತೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts