Wednesday, 12th December 2018  

Vijayavani

Breaking News

ಸಾವಿನ Sunday: ಒಂದೇ ದಿನ 6 ಅಪಘಾತ, 7 ಸಾವು, 21 ಮಂದಿಯ ಸ್ಥಿತಿ ಗಂಭೀರ

Sunday, 06.08.2017, 11:08 AM       No Comments

ಕೊಪ್ಪಳ/ಮಂಡ್ಯ/ತುಮಕೂರು: ವಿಧಿಯಾಟದ ಮುಂದೆ ಮಾನವನ ಆಟ ಏನು ನಡೆಯಲಾರದು. ಜೀವನ ನೀರ ಮೇಲಿನ ಗುಳ್ಳೆ ಎಂಬ ಮಾತು ಅಕ್ಷರಶಃ ಸತ್ಯ. ಯಂತ್ರ ಜೀವನಕ್ಕೆ ಮಾರು ಹೊದ ಮನುಷ್ಯ ಅದರಿಂದಲೇ ಅಂತ್ಯ ಕಾಣುತ್ತಿರುವುದು ವಿಪರ್ಯಾಸವೇ ಸರಿ. ವಿಕೇಂಡ್​ ಬಂತೆಂದೆರೆ ಸಾಕು ಜವರಾಯ ಅಟ್ಟಹಾಸ ಮೆರೆಯಲು ಕಾಯುತ್ತಿರುತ್ತಾನೆ. ಅದೇ ರೀತಿ ಇಂದು ರಾಜ್ಯಾದ್ಯಂತ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಸುಮಾರು ಏಳು ಮಂದಿ ಸಾವನ್ನಪ್ಪಿ, 21 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಡ್ಯದಲ್ಲಿ ಯಮರೂಪಿ ಟೆಂಪೋ

ಇಂದು ಮಡ್ಯದ ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಶಕೀಲ್ ಅಹಮದ್, ಫಾರೂಖ್, ಸಾಗರ್‌ ಎಂಬುವವರು ಮೃತಪಟ್ಟಿದ್ದಾರೆ. ಉಳಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಪ್ಪಳದಲ್ಲಿ ಲಾರಿ ರೂಪದಲ್ಲಿ ಬಂದ ಜವರಾಯ

ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಬಳಿ ನಡೆದ ಲಾರಿ, ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಳಿದಂತೆ ಮೂವರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ. ಸುಮಾರು 10 ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.

ತುಮಕೂರಿನಲ್ಲಿ ವೇಗ ತಂದ ಆಪತ್ತು

ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಉಳಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ. ಜ್ಯೋತಿ ಜಗನ್ನಾಥ ರೆಡ್ಡಿ (40) ಮೃತ ಮಹಿಳೆ. ಮೃತರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ನಿವಾಸಿ.

ಯಾದಗಿರಿಯಲ್ಲಿ ಟ್ರಾಕ್ಟರ್​ ರೂಪದಲ್ಲಿ ಬಂದ ಯಮ

ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಬೊರಬಂಡಾ ಗ್ರಾಮದಲ್ಲಿ ನಡೆದಿದೆ. ಉಳಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಪಲ್ಟಿ ಹೊಡೆದು ಶಂಕರ ರಾಠೋಡ (35) ಸಾವನ್ನಪ್ಪಿದ್ದಾರೆ.

ರಸ್ತೆ ಬದಿಗೆ ಮಗುಚಿದ ಬಸ್​

ರಸ್ತೆ ಬದಿಯ ತಗ್ಗಿಗೆ ರಾಜ್ಯ ರಸ್ತೆ ‌ಸಾರಿಗೆ ಬಸ್ ಮುಗುಚಿದ ಪರಿಣಾಮ ಓರ್ವನಿಗೆ ಗಂಭೀರ ಗಾಯವಾಗಿದ್ದು, ಸುಮಾರು 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕೊಪ್ಪಳದ ಗಂಗಾವತಿಯ ಜೂರಟಗಿ ಬಳಿ ನಡೆದಿದೆ. ಬೈಕ್ ಸವಾರನನ್ನು ಉಳಿಸಲು ಹೋಗಿ ಬಸ್​ ತಗ್ಗಿಗೆ ನುಗ್ಗಿದೆ.

ಮರಕ್ಕೆ ಡಿಕ್ಕಿ ಹೊಡೆದ ಕಾರು

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಲ್ಲಿಕಾರ್ಜುನ್(47) ಎಂಬುವವರು ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸಂಧ್ಯಾ(41)ಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top