ಆಲಮಟ್ಟಿ: ಗ್ರಾಮೀಣ ಭಾಗದ ಬಾಲಕಿಯರು ಖೋಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸಕರ ಸಂಗತಿಯಾಗಿದೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ಷೇತ್ರದ ಎಲ್ಲ ಕ್ರೀಡಾಪಟುಗಳಿಗೂ ಆರ್ಥಿಕ ನೆರವಿನ ಜತೆ ಎಲ್ಲ ರೀತಿಯ ಕ್ರೀಡಾ ಸಾಮಗ್ರಿ ಒದಗಿಸಲಾಗುವುದು ಎಂದು ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ಖೋಖೋ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಗ್ರಾಮಸ್ಥರು ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯಮಟ್ಟದ ಖೋಖೋ ಕ್ರೀಡೆಯನ್ನು ನಮ್ಮ ಬಸವನಾಡಿನಲ್ಲಿ ಯಶಸ್ವಿಯಾಗಿ ಸಂಘಟಿಸಿದ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ತಮ್ಮೆಲ್ಲ ಶಕ್ತಿ, ಪ್ರತಿಭೆಯನ್ನು ಪಣಕ್ಕೆ ಹಚ್ಚಿ ಸಂಯೋಜಿಸಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯವಾಗಿದೆ. ಖೋಖೋ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ಎನ್.ಬಿ. ದಾಸರ ಕಾರ್ಯವೂ ಸ್ಮರಣೀಯ ಎಂದರು.
1 ಲಕ್ಷ ರೂ. ಘೋಷಿಸಿದ ಸಚಿವರು: ಬಸವನಾಡಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಖೋಖೋ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಏರ್ಪಡಿಸಿದ ಸಂಘಟಕರಿಗೆ 1,00,001 ರೂ. ವೈಯಕ್ತಿಕ ದೇಣಿಗೆ ನೀಡುವುದಾಗಿ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದಲೂ ಪ್ರತ್ಯೇಕ ಸಹಾಯ ಧನವನ್ನು ಒದಗಿಸುವುದಾಗಿ ಸಚಿವ ಶಿವಾನಂದ ಪಾಟೀಲ ಘೋಷಿಸಿದರು. ಶಿಗ್ಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಬರದಿದ್ದಕ್ಕೆ ಸಂಘಟಕರಲ್ಲಿ ಸಚಿವರು ಕ್ಷಮೆ ಕೋರಿದರು. ಬೇನಾಳ ಗ್ರಾಮಸ್ಥರು ಕೂಡ ಸಂಗ್ರಹಿಸಿದ್ದ ಒಂದು ಲಕ್ಷ ರೂ. ವನ್ನು ಖೋಖೋ ಕ್ರೀಡಾ ಸಂಘಟಕ ಚಂದ್ರಶೇಖರ ನುಗ್ಗಲಿ ಅವರಿಗೆ ನೀಡಿದರು.
ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಪ್ರವಾಸಿ ತಾಣವಾಗಿರುವ ಆಲಮಟ್ಟಿಯಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ತೊಂದರೆಯಾಗಿದ್ದು, ಸಚಿವರು ಯಾತ್ರಿ ನಿವಾಸ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಜಗತ್ತಿನಲ್ಲಿಯೇ ಕಬ್ಬಿಗೆ ಅತಿ ಹೆಚ್ಚು ಬೆಲೆ ನೀಡುತ್ತಿರುವ ರಾಷ್ಟ್ರಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಸದ್ಯ ರಾಜ್ಯದಲ್ಲಿ 80 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುತ್ತಿವೆ. ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಮುಂದಿನ 10 ವರ್ಷಗಳವರೆಗೂ ಬೆಲೆ ಹೆಚ್ಚಿರುತ್ತದೆ. ರೈತರು ಈ ಎರಡು ಬೆಳೆ ಬೆಳೆಯಲು ಆದ್ಯತೆ ನೀಡಬೇಕು ಎಂದರು.
ಬಿಇಒ ವಸಂತ ರಾಠೋಡ, ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಎಸ್‌ಡಿಎಂಸಿ ಅಧ್ಯಕ್ಷ ಮುನ್ನಾ ಬೆಣ್ಣಿ, ಸುನೀಲ ನಾಯಕ, ಎಸ್.ಎಚ್. ಬಿರಾದಾರ, ಬಿ.ಎಚ್. ಗಣಿ, ಹನುಮಂತಪ್ಪ ಇಲ್ಯಾಳ, ಮಹೇಶ ಗಾಳಪ್ಪಗೋಳ, ಬಸವರಾಜ ಹಂಚಲಿ ಇತರರಿದ್ದರು.