ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ

ತುಮಕೂರು: ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿಸಿಎಂ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮುರುಘಾ ಶರಣರು ಸೇರಿ ಹಲವು ಗಣ್ಯರು ಗುರುವಾರ ಶ್ರೀಮಠಕ್ಕೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ಮಧ್ಯೆ ಶ್ರೀಗಳಿಗೆ ಭಾರತರತ್ನ ನೀಡುವಂತೆ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಒಕ್ಕೊರಲಿನಿಂದ ಆಗ್ರಹಪಡಿಸಿದರು.

ಬೆಳಗ್ಗೆ ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಅವರು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ರ್ಚಚಿಸಿದರು. ಶ್ರೀಗಳ ಆರೋಗ್ಯದ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆಯಿತ್ತರು.

ವೈದ್ಯ ಲೋಕವೇ ಅಚ್ಚರಿ

ಮೆಡಿಕಲ್ ಸೈನ್ಸ್​ನಲ್ಲಿ 111 ವರ್ಷದವರಿಗೆ ಯಾವುದೇ ಚಿಕಿತ್ಸೆ ವಿಧಾನ ಇಲ್ಲ. ವೆಂಟಿಲೇಟರ್​ನಲ್ಲಿ ವಿಭೂತಿ ಇಟ್ಟುಕೊಳ್ಳುವುದು ವೈದ್ಯ ಲೋಕವೇ ಅಚ್ಚರಿಪಡುವಂತಿದೆ. ಸ್ವಾಮೀಜಿ ವಿಸ್ಮಯವಾಗಿಯೇ ನಮಗೂ ಕಾಣಿಸುತ್ತಿದ್ದಾರೆ ಎಂದು ಸಂಜೆ ಮಠಕ್ಕೆ ಭೇಟಿ ನೀಡಿದ್ದ ಬಿಜಿಎಸ್ ಆಸ್ಪತ್ರೆ ವೈದ್ಯ ರವೀಂದ್ರ ಸುದ್ದಿಗಾರರಿಗೆ ತಿಳಿಸಿದರು.

ಶ್ರೀಗಳು ಬೇಗ ಗುಣಮುಖರಾಗಬೇಕು ಎಂಬುದು ನಮ್ಮ ಆಶಯ. ಸೋಂಕು ಜಾಸ್ತಿಯಾಗುತ್ತದೆ ಎಂಬುದನ್ನು ದರ್ಶನಕ್ಕಾಗಿ ಹಾತೊರೆಯುತ್ತಿರುವ ಭಕ್ತರು ಅರ್ಥ ಮಾಡಿಕೊಳ್ಳಬೇಕು.ಅವರ ಆರೋಗ್ಯಕ್ಕಾಗಿ ಇದ್ದಲ್ಲಿಂದಲೇ ಭಗವಂತನಲ್ಲಿ ಪ್ರಾರ್ಥಿಸಲಿ.

| ಡಾ.ಜಿ.ಪರಮೇಶ್ವರ್ ಡಿಸಿಎಂ

ನಾಡಿಗೆ ಅಭೂತ ಪೂರ್ವ ಸೇವೆ ನೀಡಿರುವ ಸಿದ್ಧಗಂಗಾ ಶ್ರೀಗಳಿಗೆ ‘ಭಾರತರತ್ನ’ ನೀಡಬೇಕೆಂಬುದು ನಮ್ಮೆಲ್ಲರ ಆಸೆ. ಶ್ರೀಗಳಿಗೆ ಭಾರತರತ್ನ ಕೊಡುವಂತೆ ಸಂಸದರೆಲ್ಲರೂ ಒಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸುತ್ತೇವೆ.

| ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ

ಒಂದೂವರೆ ಗಂಟೆಗೂ ಹೆಚ್ಚು ಕಾಲ ಶ್ರೀಗಳು ಸಹಜವಾಗಿ ಉಸಿರಾಡುತ್ತಿರುವುದು ಒಳ್ಳೆಯ ಸೂಚನೆ. ಶ್ವಾಸಕೋಶದಲ್ಲಿ ನೀರು ಅಷ್ಟಾಗಿ ತುಂಬಿ ಕೊಳ್ಳದಿರುವುದರಿಂದ ಇದು ಸಾಧ್ಯವಾಗಿದೆ.

| ಡಾ.ಪರಮೇಶ್ ಶ್ರೀಗಳ ಆಪ್ತ ವೈದ್ಯ

ಗಂಟೆಗೂ ಹೆಚ್ಚು ಕಾಲ ಸಹಜ ಉಸಿರಾಟ

ಸಿದ್ಧಗಂಗಾ ಶ್ರೀಗಳ ಆರೋಗ್ಯ ಕುರಿತು ಊಹಾಪೋಹಗಳಿಗೆ ಗುರುವಾರ ಸಂಜೆ ಉತ್ತರ ದೊರೆಯಿತು. ಸಂಜೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಡಾ.ರವೀಂದ್ರ, ಡಾ.ಪರಮೇಶ್, ಡಾ.ಶಿವಪ್ಪ ಸಭೆ ನಡೆಸಿ ವೆಂಟಿಲೇಟರ್ ತೆಗೆದ ಬಳಿಕ ಶ್ರೀಗಳ ದೇಹ ಹೇಗೆ ಸ್ಪಂದಿಸಲಿದೆ ಎಂಬುದನ್ನು ಪರಿಶೀಲಿಸಲು ನಿರ್ಧರಿಸಲಾಯಿತು. ಈ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಶ್ರೀಗಳು ಸಹಜ ಉಸಿರಾಟವಾಡಿದ್ದು ವೈದ್ಯರೇ ಅಚ್ಚರಿಗೊಂಡರು. ಹಾಗಾಗಿ, ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸುವ ನಿರ್ಧಾರವನ್ನು ವೈದ್ಯರ ತಂಡ ತೆಗೆದುಕೊಂಡಿತು.