ಶಿವಕುಮಾರ ಶ್ರೀಗಳಿಗೆ ನುಡಿ ನಮನ

ಮಡಿಕೇರಿ: ತುಮಕೂರಿನ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಜೆಡಿಎಸ್ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.

ಇಲ್ಲಿನ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ’ಶ್ರದ್ಧಾಂಜಲಿ’ ಸಭೆಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ವಿಶ್ವಕಂಡ ಶ್ರೇಷ್ಠ ವ್ಯಕ್ತಿ. ಬ್ರಿಟಿಷರ ಕಾಲದಲ್ಲಿ ಬಿ.ಎ. ಪದವಿ ಪಡೆದು ಉತ್ತಮ ಉದ್ಯೋಗದ ಅವಕಾಶವಿದ್ದರೂ ಅದನ್ನೆಲ್ಲ ಬದಿಗೊತ್ತಿ ನಡೆದಾಡುವ ದೇವಮಾನರಾದರು ಎಂದು ಸ್ಮರಿಸಿದರು.

ಕನ್ನಡಾಭಿಮಾನಿಯಾಗಿ ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾಸೋಹ ನೀಡುವ ಮೂಲಕ ಜಗತ್ಪ್ರಸಿದ್ಧರಾಗಿದ್ದಾರೆ. ಶ್ರೀಗಳು ಮನುಕುಲಕ್ಕೆ ನೀಡಿದ ಕೊಡುಗೆಗೆ ’ಭಾರತರತ್ನ’ ಹಾಗೂ ನೊಬೆಲ್ ಪ್ರಶಸ್ತಿ ನೀಡಬೇಕು. ಇದರಿಂದ ಭಾರತದ ಕೋಟಿ ಜನಕ್ಕೆ ತೃಪ್ತಿ ತಂದಂತಾಗುತ್ತದೆ. ಇಲ್ಲದಿದ್ದಲ್ಲಿ ಇಂತಹ ಬಿರುದುಗಳನ್ನು ನೀಡಲು ಯಾವ ಮಾನದಂಡ ಬೇಕು ಎನ್ನುವ ಸಂಶಯ ನಾಗರಿಕರಲ್ಲಿ ಮೂಡಿದಂತಾಗುತ್ತದೆ ಎಂದು ಹೇಳಿದರು.

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ.ಗಣೇಶ್ ಮಾತನಾಡಿ, ಸ್ವಾಮೀಜಿಯವರ ನಿಧನ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಜಾತಿಯನ್ನು ಮೀರಿ ಶ್ರೀಗಳು ಸೇವೆ ಸಲ್ಲಿಸುವ ಮೂಲಕ ಸದಾ ಜನರ ಜತೆ ಒಡನಾಟವಿಟ್ಟುಕೊಂಡಿದ್ದರು. ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದೆ ಇವರಿಗೆ ರಾಷ್ಟ್ರಪ್ರಶಸ್ತಿ ನೀಡಲು ಒತ್ತಾಯಿಸಬೇಕೆಂದು ಮನವಿ ಮಾಡಿದರು.

ಪಕ್ಷದ ಹಿರಿಯ ಉಪಾಧ್ಯಕ್ಷ ಬೋಜಪ್ಪ, ಹಿರಿಯ ಮುಖಂಡ ಅದೀಲ್ ಪಾಷಾ, ಮುಖಂಡರಾದ ಡೆನ್ನಿ ಬರೋಸ್,ಸುರೇಶ್ ಚಂಗಪ್ಪ, ಗ್ಲಾಡೀಯಸ್ ಲೋಬೋ, ಅಜಿತ್, ಸುನೀಲ್, ಕೆ.ಜಿ.ನಾಸೀರ್, ಲೀಲಾ ಶೇಷಮ್ಮ, ಸುರೇಂದ್ರ ಶೆಟ್ಟಿ, ಎಂ.ಇ.ಅಬ್ದುಲ್ ರೆಹಮಾನ್, ಮನ್ಸೂರ್ ಆಲಿ, ಆನಂದ್, ಎಸ್.ಎಚ್.ಮತೀನ್, ಸಂದೇಶ್, ಪಾಪಣ್ಣ ಹಾಜರಿದ್ದರು.